ADVERTISEMENT

ಏಪ್ರಿಲ್‌ನಿಂದ ಕ್ಷಯಕ್ಕೆ ಹೊಸ ಔಷಧಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:44 IST
Last Updated 24 ಮಾರ್ಚ್ 2017, 20:44 IST
ಅಂಧ ವ್ಯಕ್ತಿಯೊಬ್ಬರು ಕ್ಷಯ ರೋಗದ ಮಾಹಿತಿ ಇರುವ ಪುಸ್ತಕವನ್ನು ಓದುವ ಮೂಲಕ ‘ಬ್ರೈಲ್’ ಪುಸ್ತಕ ಬಿಡುಗಡೆ ಮಾಡಿದರು. ರಾಜೀವ್ ಗಾಂಧಿ ಎದೆರೋಗ ಸಂಸ್ಥೆಯ ನಿರ್ದೇಶಕ ಡಾ. ಶಶಿಧರ ಬುಗ್ಗಿ, ಶಾಲಿನಿ ರಜನೀಶ್‌, ನಿಮ್ಹಾನ್ಸ್‌್ ನಿರ್ದೇಶಕ ಡಾ. ಗಂಗಾಧರ್‌, ಕಿದ್ವಾಯ್ ಆಸ್ಪತ್ರೆಯ ಮುಖ್ಯಸ್ಥ ಡಾ. ಲಿಂಗೇಗೌಡ ಇದ್ದರು  –ಪ್ರಜಾವಾಣಿ ಚಿತ್ರ
ಅಂಧ ವ್ಯಕ್ತಿಯೊಬ್ಬರು ಕ್ಷಯ ರೋಗದ ಮಾಹಿತಿ ಇರುವ ಪುಸ್ತಕವನ್ನು ಓದುವ ಮೂಲಕ ‘ಬ್ರೈಲ್’ ಪುಸ್ತಕ ಬಿಡುಗಡೆ ಮಾಡಿದರು. ರಾಜೀವ್ ಗಾಂಧಿ ಎದೆರೋಗ ಸಂಸ್ಥೆಯ ನಿರ್ದೇಶಕ ಡಾ. ಶಶಿಧರ ಬುಗ್ಗಿ, ಶಾಲಿನಿ ರಜನೀಶ್‌, ನಿಮ್ಹಾನ್ಸ್‌್ ನಿರ್ದೇಶಕ ಡಾ. ಗಂಗಾಧರ್‌, ಕಿದ್ವಾಯ್ ಆಸ್ಪತ್ರೆಯ ಮುಖ್ಯಸ್ಥ ಡಾ. ಲಿಂಗೇಗೌಡ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕ್ಷಯರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಏಪ್ರಿಲ್‌ 1ರಿಂದ ಹೊಸ ಔಷಧಿ ಪರಿಚಯಿಸಲು ರಾಜ್ಯ ಕ್ಷಯರೋಗ ಕೇಂದ್ರ ನಿರ್ಧರಿಸಿದೆ.

ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ  ವಿಶ್ವ ಕ್ಷಯರೋಗದ ದಿನಾಚರಣೆಯಲ್ಲಿ  ಕೇಂದ್ರದ ಸಹ ನಿರ್ದೇಶಕ ಡಾ. ಆರ್‌. ರಘುನಂದನ್‌ ಈ ವಿಷಯ ತಿಳಿಸಿದರು.

‘ಪೆಡಾಕ್ವಿಲೊನಾ ಎಂಬ  ಹೆಸರಿನ ಈ ಔಷಧಿಯನ್ನು ಮುಂಬೈ, ಕೋಲ್ಕತ್ತ, ದೆಹಲಿ, ಚೆನ್ನೈ, ಅಹಮದಾಬಾದ್ ಕೇಂದ್ರಗಳಲ್ಲಿ ಪರಿಚಯಿಸಲಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಇದರ ಬಳಕೆಯಿಂದ ಚಿಕಿತ್ಸೆಯ ಅವಧಿ ಕಡಿಮೆಯಾಗುತ್ತದೆ’ ಎಂದು  ತಿಳಿಸಿದರು.

ADVERTISEMENT

ರಾಜ್ಯ ಕ್ಷಯರೋಗ ಕೇಂದ್ರದ ಜಿಲ್ಲಾ ಅಧಿಕಾರಿ ಡಾ.ಶಕೀಲಾ, ‘ಕ್ಷಯರೋಗಿಗಳಿಗೆ ಎಲ್ಲಾ ರೀತಿಯ ಪರೀಕ್ಷೆ, ಚಿಕಿತ್ಸೆ, ಔಷಧಿಗಳನ್ನು ಸರ್ಕಾರ ಉಚಿತವಾಗಿ ಒದಗಿಸುತ್ತಿದೆ. ಆದರೆ, ಹೆಚ್ಚಿನ ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಕೆಲವು ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಆರಂಭಿಕ ಚಿಕಿತ್ಸೆ ಪಡೆದು ಸುಮ್ಮನಾಗುತ್ತಾರೆ. ಮತ್ತೆ ಅದನ್ನು ಮುಂದುವರಿಸುವುದಿಲ್ಲ. ಇದರಿಂದ ಕ್ಷಯರೋಗ ಸಂಪೂರ್ಣ ಗುಣಮುಖವಾಗದು’ ಎಂದು ತಿಳಿಸಿದರು.

‘ಅದಕ್ಕಾಗಿ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳನ್ನು ಗುರುತಿಸಿ,  ಸರ್ಕಾರಿ ಆಸ್ಪತ್ರೆಗೆ ಕರೆತರುತ್ತಿದ್ದೇವೆ. ಪ್ರಸಕ್ತ ಶೇ 42ರಷ್ಟು ಮಂದಿ ಖಾಸಗಿ ವೈದ್ಯರ ಬಳಿ ಹೋಗುತ್ತಿದ್ದಾರೆ. ಖಾಸಗಿ ವೈದ್ಯರನ್ನು ಸಂಪರ್ಕಿಸಿ ರೋಗಿಗಳ ಮಾಹಿತಿ ನೀಡುವಂತೆ ಕೋರಿದ್ದೇವೆ. ನಾಲ್ಕು ವರ್ಷಗಳಲ್ಲಿ ಶೇ 10ರಷ್ಟು ರೋಗಿಗಳನ್ನು ಮಾತ್ರ ಕರೆತರಲು ಸಾಧ್ಯವಾಗಿದೆ’  ಎಂದರು.

ದಾಖಲೆ ಡಿಜಿಟಲೀಕರಣ:    ‘ಏಪ್ರಿಲ್‌ನಿಂದ ಕ್ಷಯರೋಗಿಗಳ ದಾಖಲೆ ನಿರ್ವಹಣೆ ಸಂಪೂರ್ಣ ಡಿಜಿಟಲೀಕರಣ ಆಗಲಿದೆ. ರೋಗಿಯ ಚಿಕಿತ್ಸೆಯ ವಿವರವನ್ನು ಅದರಲ್ಲಿ ನಮೂದಿಸುತ್ತೇವೆ’ ಎಂದು ಹೇಳಿದರು.

‘ಎಲ್ಲಾ ರೋಗಿಗಳಿಗೂ ಒಂದೇ ರೀತಿಯ ಚಿಕಿತ್ಸೆ ನೀಡುವ ವ್ಯವಸ್ಥೆ ಇತ್ತು. ಈಗ ರೋಗಿಯನ್ನು ಸಂಪೂರ್ಣ ಪರೀಕ್ಷೆ ನಡೆಸಿ, ದೇಹತೂಕ ಮತ್ತು ಪ್ರತಿರೋಧಕ ಶಕ್ತಿಗೆ ಅನುಗುಣವಾಗಿ ಔಷಧಿ ನೀಡುತ್ತೇವೆ.  ದಿನಬಿಟ್ಟು ದಿನ ಔಷಧಿ ನೀಡುವ ಪದ್ಧತಿಯನ್ನು ಕೈಬಿಟ್ಟು, ಖಾಸಗಿಯವರಂತೆ ಪ್ರತಿದಿನ ನೀಡುವ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಶಾಲಿನಿ ರಜನೀಶ್ ಅವರು ಕ್ಷಯರೋಗಕ್ಕೆ ಸಂಬಂಧಿಸಿದ ‘ಕೈಪಿಡಿ’, ರೋಗಿಗಳಿಗೆ ವಿತರಿಸುವ ‘ಕಿಟ್’ಗಳು ಮತ್ತು ಕ್ಷಯ ರೋಗದ ಮಾಹಿತಿ ಹೊಂದಿರುವ ‘ಬ್ರೈಲ್’ ಪುಸ್ತಕ ಬಿಡುಗಡೆ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ರಾಜ್ಯ ಕ್ಷಯರೋಗ ಕೇಂದ್ರ, ಎಸ್‌ಡಿಎಸ್‌ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.