ADVERTISEMENT

ಐಪಿಎಲ್‌ ಫೈನಲ್‌: ಕ್ರೀಡಾಂಗಣ ಸುತ್ತ ಬಿಗಿ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 28 ಮೇ 2016, 19:30 IST
Last Updated 28 ಮೇ 2016, 19:30 IST

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 29) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಂಬತ್ತನೇ ಆವೃತ್ತಿಯ ಫೈನಲ್‌ ಪಂದ್ಯ ನಡೆಯಲಿದ್ದು, ಕ್ರೀಡಾಂಗಣ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ.

‘ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ಸನ್‌ ರೈಸರ್ಸ್ ತಂಡಗಳು ಸೆಣಸಲಿವೆ. ಈ ವೇಳೆ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು 1000 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಕೆಎಸ್‌ಆರ್‌ ಚರಣರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ರೀಡಾಂಗಣ ಹಾಗೂ ಸುತ್ತಮುತ್ತ ಭದ್ರತೆ ಉಸ್ತುವಾರಿ ನೋಡಿಕೊಳ್ಳಲು ಆರು ತಂಡ ರಚಿಸಲಾಗಿದೆ. ಬೆಳಿಗ್ಗೆಯಿಂದಲೇ ಪೊಲೀಸರು ಗಸ್ತು ತಿರುಗಲಿದ್ದಾರೆ. ಕೆಎಸ್‌ಆರ್‌ಪಿ 8 ತುಕಡಿಗಳು, ಪುರುಷ ಕಮಾಂಡೊ ಪಡೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕ್ರೀಡಾಂಗಣ ಒಳಗೆ ಹಾಗೂ ಹೊರಗೆ ಸೇರಿ 130 ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಹ್ಯಾಂಡ್‌ ಬ್ಯಾಗ್‌, ನೀರಿನ ಬಾಟಲಿ, ಆಹಾರ ಪೊಟ್ಟಣಗಳು, ಸಂಗೀತ ಪರಿಕರ, ಚಾಕು ಹಾಗೂ ಇತರೆ ಆಯುಧಗಳನ್ನು ಕ್ರೀಡಾಂಗಣದಲ್ಲಿ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ. ಕ್ರೀಡಾಂಗಣದೊಳಗೆ ಹೋಗುವವರನ್ನು ತಪಾಸಣೆ ನಡೆಸಲು ಪರಿಣಿತ ಸಿಬ್ಬಂದಿ ನಿಯೋಜಿಸಲಾಗಿದ್ದು, ಮೆಟಲ್‌ ಡಿಟೆಕ್ಟರ್‌ ಯಂತ್ರಗಳನ್ನು ಬಳಸಲಾಗುವುದು. ಪ್ರೇಕ್ಷಕರು ಒಂದು ಗಂಟೆ ಮುಂಚಿತವಾಗಿ ಕ್ರೀಡಾಂಗಣಕ್ಕೆ ಬರಬೇಕು’ ಎಂದು ಅವರು ತಿಳಿಸಿದರು. 

ಹೆಚ್ಚುವರಿ ಬಸ್‌ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಐಪಿಎಲ್‌ ಫೈನಲ್ ಪಂದ್ಯ ನಡೆಯಲಿರುವ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಿದೆ.

ಎಲ್ಲಿಂದ ಎಲ್ಲಿಗೆ:  ಮಾಣೆಕ್ ಷಾ ಪರೇಡ್ ಮೈದಾನ–ಕಾಡುಗೋಡಿ ಬಸ್ ನಿಲ್ದಾಣ, ಮೆಯೋಹಾಲ್–ಕಾಡುಗೋಡಿ ಬಸ್ ನಿಲ್ದಾಣ, ಹೊಸಕೋಟೆ, ಸರ್ಜಾಪುರ, ಬ್ರಿಗೇಡ್ ರಸ್ತೆ– ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಚಿನ್ನಸ್ವಾಮಿ ಕ್ರಿಕೆಟ್  ಮೈದಾನ–ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್, ಬಿಆರ್‌ವಿ ಪರೇಡ್ ಮೈದಾನ– ಜನಪ್ರಿಯ ಟೌನ್‌ಶಿಪ್‌, ಆರ್.ಕೆ.ಹೆಗಡೆ ನಗರ, ಎಂ.ಜಿ ರಸ್ತೆ ಮೆಟ್ರೊ ನಿಲ್ದಾಣ– ನೆಲಮಂಗಲ, ಯಲಹಂಕ 5ನೇ ಹಂತ, ಬಾಗಲೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.