ADVERTISEMENT

ಐವರ ಕೊಲೆಗೆ ನಾಂದಿಯಾದ ಪ್ರೇಮಕಥೆ

ಹದಿಮೂರು ವರ್ಷ ನಿರ್ಭೀತಿಯಿಂದಿದ್ದ ಹಂತಕರ ಗ್ಯಾಂಗ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:57 IST
Last Updated 7 ಜೂನ್ 2017, 19:57 IST
ಶೇಖರ್
ಶೇಖರ್   

ಬೆಂಗಳೂರು: ಹದಿಮೂರು ವರ್ಷಗಳಲ್ಲಿ ಐದು ಮಂದಿಯನ್ನು ಕೊಲೆಗೈದು ನಿರ್ಭೀತಿಯಿಂದಿದ್ದ ಹಂತಕರ ಗ್ಯಾಂಗ್, ಕುಡಿದ ಮತ್ತಿನಲ್ಲಿ ಸಿಸಿಬಿ ಬಾತ್ಮೀದಾರನ ಮುಂದೆ ಕೊಲೆಗಳ ರಹಸ್ಯ ಬಾಯ್ಬಿಟ್ಟು ಪೊಲೀಸರ ಅತಿಥಿಯಾಗಿದೆ.

‘ಕೆಂಗೇರಿ ಉಪನಗರದ ಶೇಖರ್ (33), ವೆಂಕಟೇಶ್ (40), ಕುಮಾರ್ ಅಲಿಯಾಸ್ ಜಿರಲೆ (37), ಗಣೇಶ್ (31), ಎನ್‌.ನಾಗೇಂದ್ರ (34), ರಾಜು (34) ಹಾಗೂ ನಾಗೇಂದ್ರ (25) ಎಂಬುವರನ್ನು ಬಂಧಿಸಲಾಗಿದೆ. ರಾಜು ಹಾಗೂ ನಾಗೇಂದ್ರ ಕೂಲಿ ಕೆಲಸ ಮಾಡುತ್ತಿದ್ದು, ಉಳಿದವರೆಲ್ಲ ಕ್ಯಾಬ್ ಚಾಲಕರಾಗಿದ್ದಾರೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸಾಲು ಸಾಲು ಹತ್ಯೆಗೆ ನಾಂದಿ

ಆರೋಪಿ ವೆಂಕಟೇಶ್ 2001ರಲ್ಲಿ ಕೆಂಗೇರಿಯ ಯುವತಿಯೊಬ್ಬರನ್ನು ಪ್ರೀತಿ ಮಾಡುತ್ತಿದ್ದ. ಆದರೆ, ಆ ಯುವತಿ ಪೋಷಕರ ಇಚ್ಛೆಯಂತೆ ಯಲ್ಲಪ್ಪ ಎಂಬುವರನ್ನು ವಿವಾಹವಾಗಿದ್ದರು.

ADVERTISEMENT

ಆರಂಭದಲ್ಲಿ ಅನ್ಯೋನ್ಯವಾಗಿದ್ದ ಆ ದಂಪತಿ ನಡುವೆ, ಕ್ರಮೇಣ ಮನಸ್ತಾಪ ಶುರುವಾಯಿತು. ನಿತ್ಯ ಪಾನಮತ್ತರಾಗಿ ಮನೆಗೆ ಬರುತ್ತಿದ್ದ ಯಲ್ಲಪ್ಪ, ಶೀಲ ಶಂಕಿಸಿ ಪತ್ನಿಗೆ ಕಿರುಕುಳ ನೀಡುತ್ತಿದ್ದರು. ಈ ವಿಚಾರ ತಿಳಿದ ವೆಂಕಟೇಶ್, ಅವರನ್ನು ಮುಗಿಸಿ ಪ್ರೇಯಸಿಯನ್ನು ಮತ್ತೆ ವರಿಸಿಕೊಳ್ಳಲು ನಿರ್ಧರಿಸಿದ್ದ. ಈ ಕೃತ್ಯಕ್ಕೆ ಆತನ ಸ್ನೇಹಿತರಾದ ಶೇಖರ್ ಹಾಗೂ ಕುಮಾರ್‌ ಸಹ ನೆರವಾಗುವ ಭರವಸೆ ನೀಡಿದ್ದರು.

2001ರ ಮೇ ತಿಂಗಳ ಒಂದು ದಿನ ರಾತ್ರಿ ಯಲ್ಲಪ್ಪ ಅವರಿಗೆ ಕಂಠಪೂರ್ತಿ ಕುಡಿಸಿದ್ದ ಆ ಮೂವರು, ಕೆಂಗೇರಿ ರೈಲ್ವೆ ಪ್ರದೇಶಕ್ಕೆ ಕರೆದೊಯ್ದು ಹಗ್ಗದಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದರು. ನಂತರ ಶವವನ್ನು ಹಳಿ ಮೇಲೆ ಮಲಗಿಸಿ ಬಂದಿದ್ದರು. ಬೆಳಗಾಗುವಷ್ಟರಲ್ಲಿ ಆ ದೇಹದ ಮೇಲೆ ಎರಡು ರೈಲುಗಳು ಹರಿದು ಹೋಗಿದ್ದವು.

ವಾರಸುದಾರರು ಪತ್ತೆಯಾಗಲಿಲ್ಲ ಎಂಬ ಕಾರಣಕ್ಕೆ ಕೆಂಗೇರಿ ರೈಲ್ವೆ ಪೊಲೀಸರು ಅದನ್ನು ‘ಅಸಹಜ ಸಾವು’ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಹತ್ಯೆಯ ಸಂಗತಿ ಗೊತ್ತಿದ್ದರೂ ಪತ್ನಿ ಸುಮ್ಮನಿದ್ದ ಕಾರಣ ಯಲ್ಲಪ್ಪ ಸಾವು ಇಷ್ಟು ದಿನ ರಹಸ್ಯವಾಗಿಯೇ ಉಳಿದಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು. 

ಪ್ರೇಯಸಿಗಾಗಿ ಎರಡನೇ ಹತ್ಯೆ
ಯಲ್ಲಪ್ಪ ಕೊಲೆಯಾದ ನಂತರ ಅವರ ಪತ್ನಿಯು ಪ್ರಿಯಕರ ವೆಂಕಟೇಶ್‌ನ ಜತೆ ಬದುಕು ಪ್ರಾರಂಭಿಸಿದ್ದರು. ಇದರ ಮಧ್ಯೆ ಅವರಿಗೆ ರಮೇಶ್ ಎಂಬುವರ ಜತೆ ಪ್ರೇಮಾಂಕುರವಾಗಿತ್ತು. ಅದು ಅಕ್ರಮ ಸಂಬಂಧಕ್ಕೂ ತಿರುಗಿತ್ತು. ಈ ವಿಷಯ ತಿಳಿದ ವೆಂಕಟೇಶ್‌, ಪ್ರೇಯಸಿಗೆ  ಬೈದು ಬುದ್ಧಿ ಹೇಳಿದ್ದ. ಆದರೂ, ಅವರ ಭೇಟಿ ನಿಂತಿರಲಿಲ್ಲ. ಹೀಗಾಗಿ, ಆತ ರಮೇಶ್‌ ಹತ್ಯೆಗೂ ಯೋಜನೆ ಸಿದ್ಧಪಡಿಸಿದ್ದ.

ವೆಂಕಟೇಶ್‌ಗೆ ಶೇಖರ್, ನಾಗೇಂದ್ರ ಹಾಗೂ ರಾಜು ನೆರವಾಗಿದ್ದರು. ಹಂತಕರು ಯಲ್ಲಪ್ಪ ಅವರನ್ನು ಕೊಲ್ಲಲು ಬಳಸಿದ್ದ ತಂತ್ರವನ್ನೇ ರಮೇಶ್ ಮೇಲೂ ಪ್ರಯೋಗಿಸಿದ್ದರು. 2002ರಲ್ಲಿ ನಡೆದ ಈ ಹತ್ಯೆ ಕೂಡ ರೈಲ್ವೆ ಪೊಲೀಸರ ದಾಖಲೆಯಲ್ಲಿ ‘ಅಸಹಜ ಸಾವು’ ಎಂದೇ ಉಳಿದಿತ್ತು.

ಸಿಕ್ಕರೂ ಬಾಯ್ಬಿಡಲಿಲ್ಲ

2003ರಲ್ಲಿ ನಡೆದಿದ್ದ ಮಣಿಮುತ್ತು ಎಂಬುವರ ಕೊಲೆ ಪ್ರಕರಣದಲ್ಲಿ ಕೆಂಗೇರಿ ಪೊಲೀಸರು ಶೇಖರ್ ಹಾಗೂ ಕುಮಾರ್ ಅವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಮಣಿಮುತ್ತು ಹತ್ಯೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದ ಆರೋಪಿಗಳು, ಹಿಂದಿನ ಎರಡು ಕೊಲೆಗಳ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

ಶೇಖರ್‌ನ ಸಂಬಂಧಿಯೊಬ್ಬರ ಮಗಳಿಗೆ, ಮಣಿಮುತ್ತು ಅವರ ಮಗ ಚುಡಾಯಿಸುತ್ತಿದ್ದ. ಈ ವಿಚಾರ ತಿಳಿದ ಶೇಖರ್, ಮಗನಿಗೆ ಬುದ್ಧಿ ಹೇಳುವಂತೆ ಅವರಿಗೆ ಎಚ್ಚರಿಸಿದ್ದರು. ಆದರೆ ಅವರು, ‘ನನ್ನ ಮಗ ವಯಸ್ಸಿಗೆ ಬಂದಿದ್ದಾನೆ. ಏನು ಬೇಕಾದರೂ ಮಾಡುತ್ತಾನೆ. ಅಷ್ಟಕ್ಕೂ ಆತ ನಿನ್ನ ಹೆಂಡತಿಗೆ ಚುಡಾಯಿಸಿಲ್ಲವಲ್ಲ’ ಎಂದಿದ್ದರು. ಇದು ಶೇಖರ್‌ನ ಕೋಪಕ್ಕೆ ಕಾರಣವಾಗಿತ್ತು.

ಅದೇ ದಿನ ರಾತ್ರಿ ಸಹಚರರ ಜತೆ ಸೇರಿ ಅವರನ್ನು ಉಸಿರುಗಟ್ಟಿಸಿ ಕೊಂದ ಶೇಖರ್, ನಂತರ ಮೃತದೇಹವನ್ನು ಗೋಣಿ ಚೀಲದಲ್ಲಿ ಹಾಕಿ ಕೆಂಗೇರಿ ಮೋರಿಗೆ ಎಸೆದಿದ್ದ. ಆ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಶೇಖರ್ ಹಾಗೂ ಕುಮಾರ್, ಆರು  ತಿಂಗಳಲ್ಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ನಾಲ್ಕನೆಯದು ಸುಪಾರಿ

₹ 5 ಲಕ್ಷದ ಆಸೆಗೆ ಹಂತಕರು 2013ರಲ್ಲಿ ಸೆಂಟ್ರಲ್ ಠಾಣೆ ವ್ಯಾಪ್ತಿಯಲ್ಲಿ ಫೈನಾನ್ಶಿಯರ್‌ ವಾಸು ಅವರನ್ನು ಕೊಲೆಗೈದಿದ್ದರು. ‘ಮಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ’ ಎಂದೇ ನಂಬಿದ್ದ ವಾಸು ಪೋಷಕರಿಗೆ, ಸೊಸೆ ವೀಣಾ (ವಾಸು ಪತ್ನಿ) ₹ 5 ಲಕ್ಷಕ್ಕೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಳು ಎಂಬ ಸಂಗತಿ 3 ವರ್ಷದ ಬಳಿಕ ಗೊತ್ತಾಗಿತ್ತು.

2013ರಲ್ಲಿ ವಾಸು ಹಾಗೂ ವೀಣಾ ದೇವಿ ಉತ್ಸವದಲ್ಲಿ ಪಾಲ್ಗೊಳ್ಳಲು ಕೆಂಗೇರಿಗೆ ಹೋಗಿದ್ದರು. ಅಲ್ಲಿ ಸಿಕ್ಕ ಗೆಳೆಯ ರಾಘವೇಂದ್ರನಿಗೆ ವಾಸು ಅವರು ಪತ್ನಿಯನ್ನು ಪರಿಚಯ ಮಾಡಿದ್ದರು. ಕೆಲ ದಿನಗಳ ನಂತರ ಅವರಿಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎಂದು ಪೊಲೀಸರು ಹೇಳಿದರು.

ರಾಘವೇಂದ್ರನನ್ನು ಅತಿಯಾಗಿ ಹಚ್ಚಿಕೊಂಡಿದ್ದ ವೀಣಾ, ‘ಪತಿಯನ್ನು ಮುಗಿಸಿದರೆ ನಿನಗೆ ₹ 5 ಲಕ್ಷ ಕೊಡುತ್ತೇನೆ. ಆ ನಂತರ ಇಬ್ಬರೂ ಮದುವೆಯಾಗಿ ಒಟ್ಟಿಗೆ ಬದುಕೋಣ ಎಂದಿದ್ದರು.’ ಈ ಕೃತ್ಯಕ್ಕೆ ರಾಘವೇಂದ್ರ ಗೆಳೆಯ ಶೇಖರ್‌ನ ನೆರವು ಕೇಳಿದ್ದ.

ಸಂಚು ಸಿದ್ಧವಾದ ಬಳಿಕ ವೀಣಾ ನಿದ್ರೆ ಮಾತ್ರೆಗಳನ್ನು ಬೆರೆಸಿದ ಊಟವನ್ನು ಪತಿಗೆ ಬಡಿಸಿದ್ದರು. ಅದನ್ನು ತಿಂದ ಸ್ವಲ್ಪ ಸಮಯದಲ್ಲೇ ವಾಸು ಗಾಢನಿದ್ರೆಗೆ ಜಾರಿದ್ದರು. ಆಗ ಮನೆಗೆ ನುಗ್ಗಿದ್ದ ರಾಘವೇಂದ್ರ, ಶೇಖರ್, ಗಣೇಶ್ ಹಾಗೂ ಸಂಜಯ್ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆಗೈದು ಹೋಗಿದ್ದರು.

ಸಂಚಿನಂತೆಯೇ ಮರುದಿನ ಬೆಳಿಗ್ಗೆ ವೀಣಾ ‘ಪತಿ ಉಸಿರಾಡುತ್ತಿಲ್ಲ’ ಎಂದು ನಾಟಕ ಪ್ರಾರಂಭಿಸಿದ್ದರು. ಅಲ್ಲದೆ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಕತೆಯನ್ನೂ ಕಟ್ಟಿದ್ದರು. ಶವವನ್ನು ಹೂತರೆ, ಮುಂದೊಂದು ದಿನ ಸಿಕ್ಕಿ ಬೀಳಬಹುದೆಂದು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮುಗಿಸಿದ್ದರು. ಅಲ್ಲದೆ, ಅನುಮಾನ ಬರಬಾರದೆಂದು ಪರಿಚಿತ ವೈದ್ಯರೊಬ್ಬರಿಂದ ‘ಹೃದಯಾಘಾತದಿಂದಲೇ ಸಾವು ಸಂಭವಿಸಿದೆ’ ಎಂಬಂತೆ ನಕಲಿ ವೈದ್ಯಕೀಯ ವರದಿ ಬರೆಸಿಕೊಂಡಿದ್ದರು.

ಮಲಗುವ ಒಪ್ಪಂದ: ‘ವಾಸು ಅವರನ್ನು ಕೊಲ್ಲಬೇಕೆಂದರೆ ಹಣದ ಜತೆಗೆ ನಮ್ಮೆಲ್ಲರ ಜತೆ ವೀಣಾ ಒಂದೊಂದು ದಿನ ಮಲಗಬೇಕು’ ಎಂದು ಶೇಖರ್ ಬೇಡಿಕೆ ಇಟ್ಟಿದ್ದ. ಅದಕ್ಕೆ ರಾಘವೇಂದ್ರ ಕೂಡ ಒಪ್ಪಿಕೊಂಡಿದ್ದ. ಅಂತೆಯೇ ಕೃತ್ಯದ ಬಳಿಕ ವೀಣಾ ಆರೋಪಿಗಳಿಗೆ ಸಹಕರಿಸಿದ್ದರು ಎಂದು ಪೊಲೀಸರು ಹೇಳಿದರು.

ಆದರೆ, ಶೇಖರ್ ತನ್ನ ಜತೆ ಇದೇ ಸಂಬಂಧ ಮುಂದುವರಿಸುವಂತೆ ವೀಣಾ ಮೇಲೆ ಒತ್ತಡ ಹೇರಲು ಆರಂಭಿಸಿದ್ದ. ಹೀಗಾಗಿ ಶೇಖರ್ ಹಾಗೂ ರಾಘವೇಂದ್ರನ ನಡುವೆ ಗಲಾಟೆ ಪ್ರಾರಂಭವಾಗಿತ್ತು.

ಇದೇ ವಿಚಾರವಾಗಿ ಪರಸ್ಪರರ ನಡುವೆ 3 ವರ್ಷ ಕಿತ್ತಾಟ ನಡೆದಿತ್ತು. 2016ರಲ್ಲಿ ಇಬ್ಬರೂ ಮಾರಕಾಸ್ತ್ರ ಹಿಡಿದು ಹೊಡೆದಾಡಿಕೊಂಡಿದ್ದರು. ಆ ಕೋಪದ ಭರದಲ್ಲಿ ಕೆಂಗೇರಿ ಠಾಣೆಯ ಮೆಟ್ಟಿಲೇರಿದ್ದ ರಾಘವೇಂದ್ರ, ವಾಸು ಹತ್ಯೆ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದ. ಆಗ ಪೊಲೀಸರು ವೀಣಾ ಸೇರಿದಂತೆ ಎಲ್ಲ ಆರೋಪಿಗಳನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಹೀಗಿತ್ತು ಐದನೇ ಕೊಲೆ

2002ರಲ್ಲಿ ರಮೇಶ್ ಅವರನ್ನು ಮುಗಿಸಿದ್ದ ಹಂತಕರು, 2014ರಲ್ಲಿ ಅವರ ಅಣ್ಣ ಸುರೇಶ್ ಅವರನ್ನೂ ಕೊಲೆಗೈದು ಕೆಂಗೇರಿ–ಹೆಜ್ಜಾಲ ಮಾರ್ಗದ ರೈಲ್ವೆ ಹಳಿ ಮೇಲೆ ಎಸೆದಿದ್ದರು. ಅದು ಸಹ ‘ಅಸಹಜ ಸಾವು’ ಎಂದೇ ವರದಿಯಾಗಿತ್ತು.

ರಮೇಶ್ ರೈಲಿಗೆ ಸಿಲುಕಿ ಸತ್ತಿದ್ದಲ್ಲ ಎಂಬ ವಿಚಾರವನ್ನು ಶೇಖರ್‌ನ ಸಹಚರನೊಬ್ಬ ಸುರೇಶ್‌ಗೆ ತಿಳಿಸಿದ್ದ. ಇದರಿಂದ ಕೆರಳಿದ್ದ ಅವರು, ಶೇಖರ್‌ನನ್ನು ಮುಗಿಸಲು ಸಂಚು ರೂಪಿಸಿದ್ದರು. ಕೃತ್ಯಕ್ಕೆ ನಾಗೇಂದ್ರ ಹಾಗೂ ಗಣೇಶ್‌ನ ನೆರವು ಕೇಳಿದ್ದರು.

ಶೇಖರ್‌ನ ಪ್ರಾಣಸ್ನೇಹಿತರಾದ ಅವರಿಬ್ಬರೂ, ಸುರೇಶ್ ಹೇಳಿದ ವಿಚಾರವನ್ನು ಆತನಿಗೆ ತಿಳಿಸಿದ್ದರು. ನಂತರ ಎಲ್ಲರೂ ಒಟ್ಟಾಗಿ ಅವರ ಹತ್ಯೆಗೇ ಸಂಚು ರೂಪಿಸಿದರು.

ನೆರವು ನೀಡುವ ನೆಪದಲ್ಲಿ ಸುರೇಶ್‌ ಅವರನ್ನು ಭೇಟಿಯಾಗುವ ನಾಗೇಂದ್ರ ಹಾಗೂ ಗಣೇಶ್,  ‘ಹೇಗಾದರೂ ಮಾಡಿ ಶೇಖರ್‌ನನ್ನು ಕೆಂಗೇರಿ ರೈಲ್ವೆ ಪ್ರದೇಶಕ್ಕೆ ಕರೆಸಿ. ನಿಮ್ಮ ತಮ್ಮನನ್ನು ಕೊಂದಂತೆಯೇ ಆತನನ್ನೂ ಮುಗಿಸೋಣ’ ಎಂದಿದ್ದರು.

ಅಂತೆಯೇ ಸುರೇಶ್ ಅವರು ಶೇಖರ್‌ನನ್ನು ಕರೆದುಕೊಂಡು ಅಲ್ಲಿಗೆ ತೆರಳಿದ್ದರು. ಆಗ ಹೊಂಚು ಹಾಕಿ ಕುಳಿತಿದ್ದ ಆರೋಪಿಗಳು, ಸುರೇಶ್ ಮೇಲೆಯೇ ಎರಗಿ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದರು. ನಂತರ ಶವವನ್ನು ರೈಲು ಹಳಿ ಮೇಲೆ ಎಸೆದಿದ್ದರು.

ಟಿ.ಟಿ ನಂಬರ್ ಕೊಟ್ಟ ಬಾತ್ಮೀದಾರ

ವಾಸು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳು, 2016ರ ಡಿಸೆಂಬರ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಮಂಗಳವಾರ (ಜೂನ್ 6) ರಾತ್ರಿ ಕೆಂಗೇರಿ ಉಪನಗರದ ಬಾರ್‌ವೊಂದರಲ್ಲಿ ಸೇರಿದ್ದ ಅವರು, ‘ಹಿಂದಿನ ಮೂರು ಕೊಲೆ ಪ್ರಕರಣಗಳು ಯಾವಾಗ ಹೊರಗೆ ಬರುತ್ತವೋ ಗೊತ್ತಿಲ್ಲ. ನಾವೇ ಒಪ್ಪಿಕೊಂಡು ಜೈಲು ಸೇರಿಬಿಡುವುದು ಒಳ್ಳೆಯದು ಎನಿಸುತ್ತದೆ’ ಎಂದು ಮಾತನಾಡಿಕೊಂಡಿದ್ದರು.

ಈ ಸಂಭಾಷಣೆ ಕೇಳಿಸಿಕೊಂಡ ಸಿಸಿಬಿ ಬಾತ್ಮೀದಾರ (ಬಾರ್ ನೌಕರ), ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದರು. ಅಲ್ಲದೆ, ಆರೋಪಿಗಳು ತಂದಿದ್ದ ಟೆಂಪೊ ಟ್ರಾವೆಲರ್‌ನ (ಟಿ.ಟಿ) ನೋಂದಣಿ ಸಂಖ್ಯೆಯನ್ನೂ ಕೊಟ್ಟಿದ್ದರು.

‘ನೋಂದಣಿ ಸಂಖ್ಯೆ ಪರಿಶೀಲಿಸಿದಾಗ, ಅದು ದಾಸರಹಳ್ಳಿಯ ಪ್ರಶಾಂತ್ ಎಂಬುವರಿಗೆ ಸೇರಿದ ಟಿ.ಟಿ ಎಂಬುದು ಗೊತ್ತಾಯಿತು. ಅವರನ್ನು ಪತ್ತೆ ಮಾಡಿದಾಗ, ‘ಪರಿಚಿತ ಹುಡಗನೊಬ್ಬ ವಾಹನ ತೆಗೆದುಕೊಂಡು ಶಬರಿಮಲೆಗೆ ಬಾಡಿಗೆ ಹೋಗಿದ್ದಾನೆ’ ಎಂದು ತಿಳಿಸಿದರು.

ಅವರಿಂದಲೇ ಆ ಹುಡುಗನಿಗೆ ಕರೆ ಮಾಡಿಸಿದೆವು. ಆತ ನೀಡಿದ ಮಾಹಿತಿನಿಂದ ಕೆಂಗೇರಿಯ ಗಾಂಧಿಬಜಾರ್‌ನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡೆವು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೊಬ್ಬ ಸೋದರ ವೆಂಕಟೇಶ್ ನಾಪತ್ತೆ
‘ರಮೇಶ್ ಹಾಗೂ ಸುರೇಶ್ ಅವರ ಅಣ್ಣ ವೆಂಕಟೇಶ್ ಕೂಡ ಮೂರು ವರ್ಷಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಹಂತಕರು ಅವರನ್ನೂ ಕೊಲೆಗೈದಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

* ಐದೂ ಕೊಲೆ ಪ್ರಕರಣಗಳಲ್ಲಿ ಇನ್ನೂ ಕೆಲವರ ಪಾತ್ರವಿರುವುದು ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ.

-ಮಹದೇವಪ್ಪ, ಎಸಿಪಿ, ಸಿಸಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.