ADVERTISEMENT

‘ಒಂದೇ ದಿನ ಮೇಯರ್‌, ಸ್ಥಾಯಿ ಸಮಿತಿಗಳ ಚುನಾವಣೆ ನಡೆಯಲಿ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:44 IST
Last Updated 18 ಸೆಪ್ಟೆಂಬರ್ 2017, 19:44 IST
‘ಒಂದೇ ದಿನ ಮೇಯರ್‌, ಸ್ಥಾಯಿ ಸಮಿತಿಗಳ ಚುನಾವಣೆ ನಡೆಯಲಿ’
‘ಒಂದೇ ದಿನ ಮೇಯರ್‌, ಸ್ಥಾಯಿ ಸಮಿತಿಗಳ ಚುನಾವಣೆ ನಡೆಯಲಿ’   

ಬೆಂಗಳೂರು: ‘ಮೇಯರ್‌, ಉಪಮೇಯರ್‌ ಚುನಾವಣೆಯಂದೇ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಬೇಕು’ ಎಂದು ಒತ್ತಾಯಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘1998ರಲ್ಲಿ ಸ್ಥಾಯಿ ಸಮಿತಿಗಳ ಚುನಾವಣೆಯು ನಾಲ್ಕು ತಿಂಗಳು ತಡವಾಗಿ ನಡೆದಿತ್ತು. ಅದಾದ ಬಳಿಕ ಮೇಯರ್‌ ಚುನಾವಣೆ ಘೋಷಣೆ ಆಗಿತ್ತು. ಆಗ, ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಸಮಿತಿಗಳ ಸದಸ್ಯರು, ಕೆಎಂಸಿ ಕಾಯ್ದೆ ಪ್ರಕಾರ ಸ್ಥಾಯಿ ಸಮಿತಿಗಳ ಚುನಾವಣೆ ನಡೆದ ದಿನದಿಂದ ಒಂದು ವರ್ಷದವರೆಗೆ ಅಧಿಕಾರಾವಧಿ ಇರುತ್ತದೆ ಎಂದು ವಾದಿಸಿದ್ದರು.

ಈ ಸಂಬಂಧ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಆಗ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್‌, ಮೇಯರ್‌, ಉಪಮೇಯರ್‌ ಚುನಾವಣೆಯ ಜತೆಯಲ್ಲೇ ಸ್ಥಾಯಿ ಸಮಿತಿಗಳ ಚುನಾವಣೆಯನ್ನೂ ನಡೆಸಬೇಕು ಎಂದು ಆದೇಶ ನೀಡಿತ್ತು’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

‘ಅದೇ ರೀತಿ 2010ರಲ್ಲಿ ಸ್ಥಾಯಿ ಸಮಿತಿಗಳ ಚುನಾವಣೆ ತಡವಾಗಿ ನಡೆದು ಗೊಂದಲ ಉಂಟಾಗಿತ್ತು. ಆಗ, ಅಂದಿನ ಅಡ್ವೊಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ, ಹೈಕೋರ್ಟ್‌ 1998ರಲ್ಲಿ ನೀಡಿದ್ದ ಆದೇಶದ ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.