ADVERTISEMENT

‘ಒಖಿ’ಗೆ ನಡಗುತ್ತಿದೆ ಬೆಂಗಳೂರು

ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವ: ಇನ್ನೂ 15 ದಿನಗಳವರೆಗೂ ಚಳಿಗಾಲ ಇಲ್ಲ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 19:45 IST
Last Updated 30 ನವೆಂಬರ್ 2017, 19:45 IST
‘ಒಖಿ’ಗೆ ನಡಗುತ್ತಿದೆ ಬೆಂಗಳೂರು
‘ಒಖಿ’ಗೆ ನಡಗುತ್ತಿದೆ ಬೆಂಗಳೂರು   

ಬೆಂಗಳೂರು: ಬೆಳಿಗ್ಗೆ ಎದ್ದೊಡನೆ ತುಂತುರು ಮಳೆ, ತಂಪಾದ ವಾತಾವರಣವನ್ನು ಕಂಡ ನಗರ ಜನರು, ಚಳಿಗಾಲ ಪ್ರಾರಂಭವಾಯಿತು ಎನ್ನುತ್ತಿದ್ದಾರೆ. ಆದರೆ, ಇದು ಚಳಿಗಾಲವಲ್ಲ ‘ಒಖಿ’ ಚಂಡಮಾರುತದ ಪ್ರಭಾವ ಎನ್ನುತ್ತಿದೆ.

‘ಇದರಿಂದ ನಗರದ ಕೆಲವು ಭಾಗಗಳಲ್ಲಿ ಜೋರು ಗಾಳಿ ಸಹಿತ ತುಂತುರು ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಇದೇ ರೀತಿ ವಾತಾವರಣ ಮುಂದುವರಿಯುತ್ತದೆ’ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ಹಂಗಾಮಿ ನಿರ್ದೇಶಕ ಸುಂದರ ಎಂ.ಮೇತ್ರಿ ತಿಳಿಸಿದರು.

‘ಮುಂದಿನ ಎರಡು ದಿನಗಳಲ್ಲಿ ಕೊಡಗು, ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತದೆ. ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗಿಲ್ಲ. ತೇವಾಂಶ ಭರಿತ ಗಾಳಿ ಬೀಸುತ್ತಿರುವುದರಿಂದ ಚಳಿಯ ಅನುಭವಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದರು.

ADVERTISEMENT

ಮತ್ತೊಂದು ಚಂಡಮಾರುತ: ‘ಒಖಿ ಚಂಡಮಾರುತದ ಪ್ರಭಾವ ತಗ್ಗಿದ ಎರಡು ಮೂರು ದಿನಗಳ ನಂತರ ಬಂಗಾಳಕೊಲ್ಲಿಯಲ್ಲಿಯೇ ಮತ್ತೊಂದು ಚಂಡಮಾರುತ ಸೃಷ್ಟಿಯಾಗಲಿದೆ. ಈಗಾಗಲೇ ವಾಯುಭಾರ ಕುಸಿತದ ಸೂಚನೆಗಳು ಸಿಕ್ಕಿವೆ. ಇದರಿಂದ ರಾಜ್ಯದ ಪೂರ್ವಭಾಗದ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ಚಳಿಗಾಲ ಸದ್ಯಕ್ಕಿಲ್ಲ: ‘ಮೋಡಗಳು ಸರಿಯುವವರೆಗೂ ರಾಜ್ಯಕ್ಕೆ ಚಳಿ ಪ್ರವೇಶವಾಗುವುದಿಲ್ಲ. ಈ ಎರಡು ಚಂಡಮಾರುತಗಳ ಪ್ರಭಾವದಿಂದ ಎಲ್ಲೆಡೆ ಮೋಡ ಕವಿದ ವಾತಾವರಣ ಇದೆ. ಹಾಗಾಗಿ ಇನ್ನೂ 15 ದಿನಗಳವರೆಗೂ ಚಳಿಗಾಲ ಪ್ರಾರಂಭವಾಗುವುದಿಲ್ಲ’ ಎಂದು ವಿವರಿಸಿದರು.

ತಮಿಳುನಾಡು, ಕೇರಳದಲ್ಲಿ ಮಳೆ, ಚೆನ್ನೈ ವರದಿ (ಪಿಟಿಐ): ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ‘ಒಖಿ’ ಚಂಡಮಾರುತದ ಕಾರಣದಿಂದ ತಮಿಳುನಾಡು ಮತ್ತು ಕೇರಳದ ದಕ್ಷಿಣ ಕರಾವಳಿಗಳಲ್ಲಿ ಬುಧವಾರ ರಾತ್ರಿಯಿಂದ ಸಾಧಾರಣದಿಂದ ಭಾರಿ ಮಳೆಯಾಗಿದೆ. ಮುಂದಿನ 24 ತಾಸು ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಚಂಡಮಾರುತ ಇನ್ನಷ್ಟು ತೀವ್ರಗೊಳ್ಳಬಹುದು ಮತ್ತು 65–75 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು. ಸಮುದ್ರದಲ್ಲಿ ಭಾರಿ ಉಬ್ಬರ ಕಂಡುಬರಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಬುಧವಾರವೇ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ ಗುರುವಾರದ ಹೊತ್ತಿಗೆ ತೀವ್ರಗೊಂಡು ಚಂಡಮಾರುತವಾಯಿತು. ಕನ್ಯಾಕುಮಾರಿಯಿಂದ 70 ಕಿ.ಮೀ ದಕ್ಷಿಣಕ್ಕೆ ಇದು ಕೇಂದ್ರೀಕೃತಗೊಂಡಿತ್ತು. ಇದು ಭಾರಿ ಚಂಡಮಾರುತವಾಗಿ ಬದಲಾಗಲೂಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ತಮಿಳುನಾಡಿನ ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ ಜಿಲ್ಲೆಗಳಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ. ತಂಜಾವೂರು, ಥೇಣಿ, ದಿಂಡಿಗಲ್‌, ನೀಲಗಿರಿ ಮತ್ತು ಕೊಯಮತ್ತೂರುಗಳಲ್ಲಿ ಇನ್ನೂ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ. ಚೆನ್ನೈ ನಗರದಲ್ಲಿಯೂ ಶುಕ್ರವಾರ ಮಳೆ ಸುರಿಯಬಹುದು.

ಚಂಡಮಾರುತವು ಲಕ್ಷದ್ವೀಪದತ್ತ ಸಾಗುತ್ತಿದೆ. ಶನಿವಾರ ಇದು ಅಲ್ಲಿ ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.

***
ಕೇರಳದಲ್ಲಿ ನಾಲ್ವರ ಸಾವು

ಭಾರಿ ಮಳೆಯಿಂದಾಗಿ ಕೇರಳದಲ್ಲಿ ಮೂರು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕೊಲ್ಲಂ ಜಿಲ್ಲೆಯಲ್ಲಿ ಆಟೊವೊಂದರ ಮೇಲೆ ಮರ ಬಿದ್ದು ಚಾಲಕ ಮೃತಪಟ್ಟರೆ ತಿರುವನಂ‍ತಪುರದಲ್ಲಿ ಮರ ಬಿದ್ದು ಮಹಿಳೆ ಬಲಿಯಾಗಿದ್ದಾರೆ. ಕಾಟಾಕಡ ಎಂಬಲ್ಲಿ ನೆಲಕ್ಕೆ ಬಿದ್ದಿದ್ದ ವಿದ್ಯುತ್‌ ವೈರ್‌ ಮುಟ್ಟಿ ದಂಪತಿ ಮೃತಪಟ್ಟಿದ್ದಾರೆ.

***
ಶಬರಿಮಲೆ ಯಾತ್ರಿಕರಿಗೆ ಎಚ್ಚರಿಕೆ

ಶಬರಿಮಲೆ ಯಾತ್ರಿಕರು ಸಂಜೆ 6 ಗಂಟೆಯಿಂದ ಬೆಳಿಗ್ಗೆ 7ರವರೆಗೆ ಕಾಡಿನ ದಾರಿಯಲ್ಲಿ ಹೋಗಬಾರದು ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಯಾತ್ರಿಕರಿಗೆ ಎಚ್ಚರಿಕೆ ನೀಡಿದೆ. ಮರದ ಅಡಿಯಲ್ಲಿ ತಂಗಬಾರದು ಮತ್ತು ನದಿಯಲ್ಲಿ ಸ್ನಾನ ಮಾಡಬಾರದು ಎಂದೂ ತಿಳಿಸಲಾಗಿದೆ. ಈ ಮುನ್ನೆಚ್ಚರಿಕೆ ಶನಿವಾರದವರೆಗೆ ಜಾರಿಯಲ್ಲಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.