ADVERTISEMENT

ಓಲಾ ಕ್ಯಾಬ್‌ನಲ್ಲಿ ಯುವತಿಗೆ ಕಿರುಕುಳ: ಚಾಲಕ ವಜಾ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 20:14 IST
Last Updated 6 ಡಿಸೆಂಬರ್ 2017, 20:14 IST

ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ಕ್ಯಾಬ್‌ ನಿಲ್ಲಿಸಿ 23 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಡಿ ರಾಜಶೇಖರ್‌ ರೆಡ್ಡಿ ಎಂಬ ಚಾಲಕನನ್ನು ಓಲಾ ಸಂಸ್ಥೆ ಕೆಲಸದಿಂದ ವಜಾಗೊಳಿಸಿದೆ.

ಭಾನುವಾರ ರಾತ್ರಿ ಈ ಕೃತ್ಯ ನಡೆದಿದೆ. ಫ್ಯಾಷನ್ ಡಿಸೈನರ್ ಆಗಿರುವ ಯುವತಿ, ರಾತ್ರಿ 11 ಗಂಟೆ ಸುಮಾರಿಗೆ ಇಂದಿರಾನಗರದಿಂದ ಕ್ಯಾಬ್‌ನಲ್ಲಿ ಬಿಟಿಎಂ ಲೇಔಟ್‌ಗೆ ಹೊರಟಿದ್ದರು.

‘ಈಜಿಪುರದ ನಿರ್ಜನ ಪ್ರದೇಶದಲ್ಲಿ ಕ್ಯಾಬ್ ನಿಲ್ಲಿಸಿದ ಚಾಲಕ, ಏಕಾಏಕಿ ನನ್ನ ಕಾಲುಗಳನ್ನು ಹಿಡಿದುಕೊಂಡ. ಆಗ ನಾನು ಆತನನ್ನು ತಳ್ಳಿ ಕೆಳಗಿಳಿಯಲು ಮುಂದಾದೆ. ಆದರೆ, ಅವನು ಚೈಲ್ಡ್ ಲಾಕ್ ಮಾಡಿದ್ದರಿಂದ ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ’ ಎಂದು ಸಂತ್ರಸ್ತೆ ಹೇಳಿದ್ದಾರೆ.

ADVERTISEMENT

‘ದಿಕ್ಕು ತೋಚದಂತಾಗಿ ಗಾಬರಿಯಿಂದ ಕಿರುಚಾಡಿದೆ. ಗಾಜನ್ನೂ ಒಡೆಯಲು ಯತ್ನಿಸಿದೆ. ಈ ಹಂತದಲ್ಲಿ ಆತ ಲಾಕ್ ತೆರೆದ. ಕೂಡಲೇ ಕೆಳಗಿಳಿದು ಈಜೀಪುರ ಮುಖ್ಯ ರಸ್ತೆಯತ್ತ ಓಡಿದೆ. ಆ ನಂತರ ಕೂಡ ಸುಮಾರು ನೂರು ಮೀಟರ್‌ನಷ್ಟು ದೂರ ನನ್ನನ್ನು ಹಿಂಬಾಲಿಸಿಕೊಂಡು ಬಂದ. ಅಲ್ಲಿ ಆಟೊ ಹಿಡಿದು ಮನೆ ಸೇರಿಕೊಂಡೆ.’

‘ಆ ನಂತರವೂ ನನಗೆ ಕರೆ ಮಾಡಿದ ಚಾಲಕ, ‘ನಡೆದ ಘಟನೆಯನ್ನು ಮರೆತುಬಿಡು. ದೂರು ಕೊಟ್ಟರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಸಿದ. ಆ ರಾತ್ರಿಯೇ ಓಲಾ ಆಡಳಿತ ಮಂಡಳಿಗೆ ಆನ್‌ಲೈನ್ ಮೂಲಕ ದೂರು ಸಲ್ಲಿಸಿದೆ. ಮರುದಿನ ಬೆಳಿಗ್ಗೆ ಮಡಿವಾಳ ಠಾಣೆಗೆ ತೆರಳಿ ನಡೆದ ಘಟನೆಯನ್ನು ಪೊಲೀಸರಿಗೆ ತಿಳಿಸಿದೆ.’

‘ಓಲಾ ಆಡಳಿತ ಮಂಡಳಿಯೇ ಚಾಲಕನ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದ್ದರಿಂದ, ಎಫ್‌ಐಆರ್ ದಾಖಲಿಸುವುದು ಬೇಡ
ವೆಂದು ಪೊಲೀಸರಲ್ಲಿ ಮನವಿ ಮಾಡಿದೆ’ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಸುರಕ್ಷತೆಗೆ ಕ್ರಮ

‘ಪ್ರಯಾಣಿಕರ ಸುರಕ್ಷತೆಯೇ ನಮ್ಮ ಹೊಣೆ. ಯುವತಿ ದೂರು ಕೊಟ್ಟ ಕೂಡಲೇ ಚಾಲಕನನ್ನು ವಜಾಗೊಳಿಸಿದ್ದೇವೆ. ಇನ್ನು ಮುಂದೆ ಇಂಥ ಕೃತ್ಯಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಓಲಾ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.