ADVERTISEMENT

ಕಠಿಣ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ

ವಿಬ್ಗಯೊರ್, ಆರ್ಕಿಡ್‌ ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:44 IST
Last Updated 30 ಅಕ್ಟೋಬರ್ 2014, 19:44 IST

ಬೆಂಗಳೂರು: ಮಾರತ್‌ಹಳ್ಳಿಯ ವಿಬ್ಗಯೊರ್‌ ಶಾಲೆಯ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಜಾಲಹಳ್ಳಿ ಸಮೀಪದ ಆರ್ಕಿಡ್‌್ ದಿ ಇಂಟರ್‌ನ್ಯಾಷನಲ್‌ ಶಾಲೆಯ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಮಕ್ಕಳ ಸಂರಕ್ಷಣ ಸಮಿತಿಯ ಸದಸ್ಯರು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮಿತಿಯ ಸಂಚಾಲಕ ರಮೇಶ್, ‘ಈ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದಿರುವುದು ಕೃತ್ಯಕ್ಕೆ ಕಾರಣ. ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಅಮಾನವೀಯ ಘಟನೆಯಾಗಿದೆ. ಇಂತಹ ಪ್ರಕರಣಗಳನ್ನು ವಿಳಂಬ ಮಾಡದೇ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು.

‘ಹೊರ ರಾಜ್ಯಗಳಿಂದ ಬಂದು ರಾಜ್ಯದಲ್ಲಿ ಶಾಲೆ ಆರಂಭಿಸುವ ಸಂಸ್ಥೆಗಳು ಇಲ್ಲಿನ ಕಾನೂನುಗಳನ್ನು ಪಾಲಿಸುತ್ತಿಲ್ಲ. ನಮ್ಮ ಸಂಸ್ಕೃತಿ, ಭಾಷೆಯನ್ನು ಕಡೆಗಣಿಸುತ್ತಿವೆ. ಅಲ್ಲದೇ, ಹಲವು ಶಾಲೆಗಳು ಅಂತರರಾಷ್ಟ್ರೀಯ ಶಾಲೆಗಳು ಎಂದು ಹೇಳಿಕೊಂಡು ಪೋಷಕರಿಂದ ಹೆಚ್ಚಿನ ವಂತಿಗೆ ಪಡೆದು ಶೋಷಣೆ ಮಾಡುತ್ತಿವೆ’ ಎಂದು ಆರೋಪಿಸಿದರು.

1993ರಿಂದ ಈಚೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂ­ತರ ಜಿಲ್ಲೆಗಳಲ್ಲಿ ಹೊರ ರಾಜ್ಯದ  ಸಂಸ್ಥೆಗಳು 16 ಸಾವಿರಕ್ಕೂ ಹೆಚ್ಚು ಆಂಗ್ಲ ಮಾಧ್ಯಮ ಶಾಲೆಗಳು ತೆರೆದಿವೆ. ಇದರಲ್ಲಿ ಬಹುತೇಕ ಶಾಲೆಗಳಿಗೆ ಮಾನ್ಯತೆ ಇಲ್ಲ. ಅಂತಹ ಶಾಲೆಗಳನ್ನು ಪತ್ತೆ ಮಾಡಿ ಆ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.