ADVERTISEMENT

ಕಡ್ಡಾಯ ಮತದಾನ ಕಾಯ್ದೆ ಅಸಾಧ್ಯ: ಖುರೇಷಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 19:30 IST
Last Updated 23 ಏಪ್ರಿಲ್ 2014, 19:30 IST
ಕೇಂದ್ರ ಚುನಾವಣಾ ಆಯೋಗದ ಹಿಂದಿನ ಮುಖ್ಯ ಆಯುಕ್ತ ಡಾ.ಎಸ್‌.ವೈ. ಖುರೇಷಿ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಿಂದ ಬುಧವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು	–ಪ್ರಜಾವಾಣಿ ಚಿತ್ರ.
ಕೇಂದ್ರ ಚುನಾವಣಾ ಆಯೋಗದ ಹಿಂದಿನ ಮುಖ್ಯ ಆಯುಕ್ತ ಡಾ.ಎಸ್‌.ವೈ. ಖುರೇಷಿ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಿಂದ ಬುಧವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು –ಪ್ರಜಾವಾಣಿ ಚಿತ್ರ.   

ಬೆಂಗಳೂರು: ‘ಪ್ರಜಾಪ್ರಭುತ್ವ ಹಾಗೂ ಕಡ್ಡಾಯ ಮತದಾನ ಜತೆ–ಜತೆಯಾಗಿ ಹೆಜ್ಜೆಹಾಕಲು ಸಾಧ್ಯ­ವಿಲ್ಲ. ಹೆಚ್ಚೆಂದರೆ ತಪ್ಪದೆ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಉಂಟು ಮಾಡಬಹುದಷ್ಟೇ’ ಎಂದು ಕೇಂದ್ರ ಚುನಾವಣಾ ಆಯೋಗದ ಹಿಂದಿನ ಮುಖ್ಯ ಆಯುಕ್ತ ಡಾ. ಎಸ್‌.ವೈ. ಖುರೇಷಿ ಅಭಿಪ್ರಾಯಪಟ್ಟರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ (ಬಿಐಸಿ) ವತಿಯಿಂದ ಬುಧವಾರ ಆಯೋಜಿಸ­ಲಾಗಿದ್ದ ತಮ್ಮ ‘ಆ್ಯನ್‌ ಅನ್‌ಡಾಕುಮೆಂಟೆಡ್‌ ವಂಡರ್‌: ದಿ ಮೇಕಿಂಗ್‌ ಆಫ್‌ ದಿ ಗ್ರೇಟ್‌ ಇಂಡಿ­ಯನ್‌ ಎಲೆಕ್ಷನ್‌’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು, ವಿಶೇಷ ಉಪನ್ಯಾಸ ನೀಡಿದರು.

‘ಮತದಾನ ಕಡ್ಡಾಯ ಕಾಯ್ದೆ ಜಾರಿ ಮಾಡಿದರೆ ಈ ಕರ್ತವ್ಯ ನಿಭಾಯಿಸದ ಮತದಾರರಿಗೆ ಶಿಕ್ಷೆ ವಿಧಿಸಬೇಕಾಗುತ್ತದೆ. ಕಳೆದ ಲೋಕಸಭಾ ಚುನಾವ­ಣೆ­ಯಲ್ಲಿ 30 ಕೋಟಿ ಜನ ತಮ್ಮ ಪರಮಾಧಿಕಾರ ಚಲಾಯಿಸಿರಲಿಲ್ಲ.  ಅಷ್ಟೊಂದು ಜನರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು’ ಎಂದು ನಗೆಯ ಅಲೆ ನಡುವೆ ಅವರು ತಿಳಿಸಿದರು.

‘ಶಾಂತಿಯುತ ಮತದಾನವನ್ನೇ ಮುಕ್ತ ಚುನಾ­ವಣೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ, ಮತದಾರ­ರನ್ನು ಬೆದರಿಸುವ ಇಲ್ಲವೆ ಅವರ ಮೇಲೆ ಪ್ರಭಾವ ಬೀರುವ ಘಟನೆಗಳು ನಡೆದಿರುವುದನ್ನು ತಳ್ಳಿ ಹಾಕುವಂತಿಲ್ಲ’ ಎಂದು ವಿಶ್ಲೇಷಿಸಿದರು.

‘ಇಲೆಕ್ಟ್ರಾನಿಕ್‌ ಮತ ಯಂತ್ರ (ಇವಿಎಂ)ಕ್ಕೆ ಅಂತ­ರ್ಜಾಲದ ಸಂಪರ್ಕ ಇಲ್ಲದಿರುವ ಕಾರಣ­ದಿಂದಲೇ ಅದು ಸುರಕ್ಷಿತವಾಗಿದೆ. ಇಲ್ಲದಿದ್ದರೆ ‘ಇವಿಎಂ’ ಹ್ಯಾಕ್‌ ಮಾಡುತ್ತಿದ್ದ ದುಷ್ಟ ವ್ಯವಸ್ಥೆ ಸರ್ಕಾರವನ್ನೇ ಕಳವು ಮಾಡುತ್ತಿತ್ತು’ ಎಂದು ಹೇಳಿದರು.

ಚುನಾವಣೆಯಲ್ಲಿ ಮಾಧ್ಯಮದ ಪಾತ್ರದ ಕುರಿತು ಮಾತನಾಡಿದ ಅವರು, ‘ಕಾಸಿಗಾಗಿ ಸುದ್ದಿಯ ಹಾವಳಿ ಅಧಿಕವಾಗಿದೆ. ಎಲ್ಲೋ ಕೆಲವರ ಮುಂದೆ ಮಾತನಾಡಿದ ದ್ವೇಷ ಭಾಷಣವನ್ನು ದೇಶದ ತುಂಬಾ ಪ್ರಸಾರ ಮಾಡುವ ಮೂಲಕ ಅದರ ಪ್ರಖರತೆ ಹೆಚ್ಚಿಸಲಾಗುತ್ತಿದೆ. ಇವೆಲ್ಲ ಸಂಗತಿಗಳ ಕುರಿತಂತೆ ಆಯೋಗ ಯೋಚಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಕೃತಿ: ಆ್ಯನ್‌ ಅನ್‌ಡಾಕುಮೆಂಟೆಡ್‌ ವಂಡರ್‌: ದಿ ಮೇಕಿಂಗ್‌ ಆಫ್‌ ದಿ ಗ್ರೇಟ್‌ ಇಂಡಿಯನ್‌ ಎಲೆಕ್ಷನ್‌

ಲೇಖಕ: ಡಾ.ಎಸ್‌.ವೈ. ಖುರೇಷಿ, ಪ್ರಕಾಶಕರು: ರೂಪಾ ಪಬ್ಲಿಕೇಷನ್ಸ್‌
ಪುಟಗಳು: 432, ಬೆಲೆ: ₨ 795

‘ಮತಗಟ್ಟೆ ಅಸುನೀಗಿತು’
ಬೆಂಗಳೂರು: ‘ಗುಜರಾತ್‌ನ ದೂರದ ಕಾಡಿನಲ್ಲಿ ವಾಸಿಸುವ ಏಕೈಕ ಪೂಜಾರಿಗಾ­ಗಿಯೇ ಮತಗಟ್ಟೆ­ಯೊಂದನ್ನು ತೆರೆಯಲಾ­ಗಿತ್ತು. ಕೇರಳದ ಅಂತ ಹದ್ದೇ ಮತ್ತೊಂದು ಪ್ರದೇಶದಲ್ಲಿದ್ದ ಇನ್ನೊಬ್ಬ ವ್ಯಕ್ತಿಗಾಗಿ ಮತಗಟ್ಟೆ ವ್ಯವಸ್ಥೆ ಮಾಡಲಾಗಿತ್ತು. ಆತ ಕಳೆದ ವರ್ಷ ನಿಧನ ಹೊಂದಿದಾಗ ಪತ್ರಿಕೆಗಳು ‘ಮತಗಟ್ಟೆ ಅಸು ನೀಗಿತು’ ಎನ್ನುವ ಶೀರ್ಷಿಕೆ ನೀಡಿದ್ದವು’

–ಮತದಾನಕ್ಕೆ ಸಂಬಂಧಿಸಿದ ಕೆಲವು ರೋಚಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ ಕೇಂದ್ರ ಚುನಾವಣಾ ಆಯೋಗದ ಹಿಂದಿನ ಮುಖ್ಯ ಆಯುಕ್ತ ಡಾ. ಎಸ್‌.ವೈ. ಖುರೇಷಿ ನೀಡಿದ ಮಾಹಿತಿ ಇದು.

‘ಒಂದೊಂದು ಮತಕ್ಕೆ ಇಷ್ಟೇಕೆ ಮಹತ್ವ ಎಂಬ ಪ್ರಶ್ನೆ ನಿಮ್ಮದಾಗಿರಬಹುದು. ಆದರೆ, ಈಗಿನ ಕೇಂದ್ರ ಸಚಿವ ಸಿ.ಪಿ. ಜೋಶಿ, ಈ ಹಿಂದೆ ಕೇವಲ ಒಂದು ಮತದಿಂದ ಸೋಲು ಕಂಡಿ­ದ್ದರು. ಆಗ ಅವರ ಪತ್ನಿ ಮತದಾನ ಮಾಡಿ­ರಲಿಲ್ಲ ಎನ್ನುವುದು ಬೇರೆ ಮಾತು. ಆದರೆ, ಪ್ರತಿ ಮತಕ್ಕೂ ಮಹತ್ವ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT