ADVERTISEMENT

ಕನ್ನಡ–ಲ್ಯಾಟಿನ್‌ ನಿಘಂಟು ಬಿಡುಗಡೆ

161 ವರ್ಷಗಳ ಹಿಂದಿನ ನಿಘಂಟು ಮರುಮುದ್ರಣ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:54 IST
Last Updated 22 ಜನವರಿ 2017, 19:54 IST
ಬರಗೂರು ರಾಮಚಂದ್ರಪ್ಪ ಅವರು ನಿಘಂಟು ಬಿಡುಗಡೆಗೊಳಿಸಿ ಕೃತಿಯನ್ನು ಸಂಶೋಧಕ ಐ. ಅಂತಪ್ಪ ಅವರಿಗೆ ನೀಡಿದರು. ಸ್ವಿಟ್ಜರ್ಲೆಂಡ್‌ನ ಡೆಥ್ರೋಟ್‌ ವೀರಿಸ್‌, ಕನ್ನಡ ಕ್ರೈಸ್ತ ಧರ್ಮಗುರುಗಳ ಬಳಗದ ಅಧ್ಯಕ್ಷ ಫಾದರ್‌ ಆ. ಥಾಮಸ್ ಇದ್ದರು –ಪ್ರಜಾವಾಣಿ ಚಿತ್ರ
ಬರಗೂರು ರಾಮಚಂದ್ರಪ್ಪ ಅವರು ನಿಘಂಟು ಬಿಡುಗಡೆಗೊಳಿಸಿ ಕೃತಿಯನ್ನು ಸಂಶೋಧಕ ಐ. ಅಂತಪ್ಪ ಅವರಿಗೆ ನೀಡಿದರು. ಸ್ವಿಟ್ಜರ್ಲೆಂಡ್‌ನ ಡೆಥ್ರೋಟ್‌ ವೀರಿಸ್‌, ಕನ್ನಡ ಕ್ರೈಸ್ತ ಧರ್ಮಗುರುಗಳ ಬಳಗದ ಅಧ್ಯಕ್ಷ ಫಾದರ್‌ ಆ. ಥಾಮಸ್ ಇದ್ದರು –ಪ್ರಜಾವಾಣಿ ಚಿತ್ರ   
ಬೆಂಗಳೂರು: ಕ್ರೈಸ್ತ ಧರ್ಮಗುರು ಫಾದರ್‌ ಪಿಯೇರ್‌ ಅಗಸ್ತೆ ಬುತೆಲೊ ಅವರು ರಚಿಸಿದ್ದ 161 ವರ್ಷಗಳ ಹಿಂದಿನ ಅಪರೂಪದ ಕನ್ನಡ–ಲ್ಯಾಟಿನ್‌ ನಿಘಂಟು ಮರುಮುದ್ರಣಗೊಂಡಿದೆ.
 
ನಗರದಲ್ಲಿ ಭಾನುವಾರ ಕರ್ನಾಟಕ ಕನ್ನಡ ಕ್ರೈಸ್ತ ಧರ್ಮಗುರುಗಳ ಬಳಗ ಹಮ್ಮಿಕೊಂಡಿದ್ದ ‘ಕನ್ನಡ–ಲ್ಯಾಟಿನ್‌ ನಿಘಂಟು–1855’  ಮರುಮುದ್ರಣ ಪ್ರತಿಯನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬಿಡುಗಡೆಗೊಳಿಸಿದರು.
 
ಕರ್ನಾಟಕಕ್ಕೆ ಧರ್ಮ ಪ್ರಚಾರಕ್ಕೆ ಬಂದ ಪಿಯೇರ್‌ ಅಗಸ್ತೆ ಅವರು 22 ವರ್ಷ ಇಲ್ಲಿ ನೆಲೆಸಿದ್ದರು. ಲ್ಯಾಟಿನ್‌ ಭಾಷೆಯಲ್ಲಿದ್ದ ಕ್ರೈಸ್ತರ ಧಾರ್ಮಿಕ ವಿಚಾರಗಳನ್ನು ಕನ್ನಡಿಗರಿಗೆ ತಲು  ಪಿಸುವ ಉದ್ದೇಶದಿಂದ 1855ರಲ್ಲಿ ಅವರು ಕನ್ನಡ–ಲ್ಯಾಟಿನ್‌ ನಿಘಂಟು ರಚಿಸಿದ್ದರು. 
 
ಅದರ 1 ಪ್ರತಿ ಲಂಡನ್‌ನ ಸಂಗ್ರಹಾಲಯದಲ್ಲಿದೆ. ರಾಜ್ಯದಲ್ಲಿ ಕೇವಲ 3 ಪ್ರತಿಗಳು ಉಳಿದಿದ್ದು, ಅವುಗಳು ಜೀರ್ಣಾವಸ್ಥೆಯಲ್ಲಿವೆ. ಹಾಗಾಗಿ ಬುತೆಲೊ ಅವರ ಕೆಲಸ ವ್ಯರ್ಥವಾಗಬಾರದೆಂದು ಸಂಶೋಧಕ ಐ. ಅಂತಪ್ಪ ಅವರ ನೇತೃತ್ವ ದಲ್ಲಿ ಬಳಗ ನಿಘಂಟಿನ ಮರು ಮುದ್ರಣ  ಕೆಲಸ ಮಾಡಿದೆ. 
 
ಕರ್ನಾಟಕ ಕನ್ನಡ ಕ್ರೈಸ್ತ ಧರ್ಮಗುರುಗಳ ಬಳಗದ ಅಧ್ಯಕ್ಷರಾದ ಫಾದರ್‌ ಆ. ಥಾಮಸ್‌ ಹಾಗೂ ಸಾಹಿತಿ ಸಿ. ಮರಿಜೋಸೆಫ್‌ ಅವರು ಕೇರಳ, ಮೈಸೂರು ನಗರಗಳಲ್ಲಿ ಸಂಚರಿಸಿ ಈ ನಿಘಂಟನ್ನು ಸಂಪಾದನೆ ಮಾಡಿದ್ದಾರೆ. ಒಟ್ಟು 4,500 ಪುಟಗಳಿರುವ ಈ ನಿಘಂಟಿನಲ್ಲಿ 1,500 ಶಬ್ದಗಳಿಗೆ ಅರ್ಥ ನೀಡಿದ್ದಾರೆ.
 
‘ವಿಶ್ವವಿದ್ಯಾಲಯ, ಭಾಷಾತಜ್ಞರು, ಸಂಶೋಧನಾ ವಿದ್ಯಾರ್ಥಿಗಳು, ಇತಿಹಾಸ ಮತ್ತು ಭಾಷಾ ವಿಷಯ ವಿದ್ಯಾರ್ಥಿಗಳಿಗೂ ಈ ನಿಘಂಟು ಉಪಯೋಗವಾಗಲಿದೆ’ ಎಂದು ಫಾದರ್‌ ಆ. ಅವರು ಥಾಮಸ್‌ ತಿಳಿಸಿದರು.  
 
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ, ‘ಕನ್ನಡ ಭಾಷೆ ಕಟ್ಟುವುದರಲ್ಲಿ ಕೇವಲ ಹಿಂದೂಗಳಷ್ಟೇ ಅಲ್ಲದೆ, ಕ್ರೈಸ್ತರು, ಮುಸ್ಲಿಮರ ಕೊಡುಗೆಯೂ ಬಹಳಷ್ಟಿದೆ. ಕ್ರೈಸ್ತರು ಧರ್ಮ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದವರು ನಂತರ ಕನ್ನಡ ಭಾಷೆ ಪ್ರಸಾರಕ್ಕಾಗಿ ಪರಿವರ್ತನೆ ಹೊಂದಿದರು’ ಎಂದು ಅಭಿಪ್ರಾಯಪಟ್ಟರು.
 
ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಅವರು ಮಾತನಾಡಿ, ‘ಒಂದನೇ ಶತಮಾನದಿಂದ ಐದನೇ    ಶತಮಾನದವರೆಗೂ ಲ್ಯಾಟಿನ್‌ ಭಾಷೆ ಉಚ್ಛ ಸ್ಥಾನದಲ್ಲಿತ್ತು. ಈಗ ಎಲ್ಲೆಡೆ ವಿಸ್ತರಿಸಿರುವ ಇಂಗ್ಲಿಷ್‌ ಭಾಷೆ ಸುಮಾರು 4 ಸಾವಿರ ಮೂಲ ಲ್ಯಾಟಿನ್‌ ಪದಗಳನ್ನು ಹೊಂದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.