ADVERTISEMENT

ಕನ್ನಡ ಅನುಷ್ಠಾನ: ಜಿಕೆವಿಕೆಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2017, 20:24 IST
Last Updated 10 ಆಗಸ್ಟ್ 2017, 20:24 IST
ಇಲಾಖೆಯಲ್ಲಿ ಕಟ್ಟುನಿಟ್ಟಾಗಿ ಕನ್ನಡ ಅನುಷ್ಠಾನಗೊಳಿಸುವಂತೆ ಎಸ್.ಜಿ.ಸಿದ್ದರಾಮಯ್ಯ ಅವರು ರೇಣುಕಾ ಚಿದಂಬರಂ ಅವರಿಗೆ ಸೂಚಿಸಿದರು –ಪ್ರಜಾವಾಣಿ ಚಿತ್ರ
ಇಲಾಖೆಯಲ್ಲಿ ಕಟ್ಟುನಿಟ್ಟಾಗಿ ಕನ್ನಡ ಅನುಷ್ಠಾನಗೊಳಿಸುವಂತೆ ಎಸ್.ಜಿ.ಸಿದ್ದರಾಮಯ್ಯ ಅವರು ರೇಣುಕಾ ಚಿದಂಬರಂ ಅವರಿಗೆ ಸೂಚಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು (ಜಿಕೆವಿಕೆ) ಕೈಗೊಂಡಿರುವ ಕನ್ನಡ ಪರ ಕಾರ್ಯಕ್ರಮಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯಕ್ಕೆ ಗುರುವಾರ ಭೇಟಿ ನೀಡಿದ ಸದಸ್ಯರ ತಂಡ, ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿತು.

ಕನ್ನಡದಲ್ಲಿ ಕೃಷಿ ಪುಸ್ತಕಗಳು ಹಾಗೂ ವಿದ್ಯಾರ್ಥಿಗಳು ರಚಿಸಿದ ‘ಸುವರ್ಣ ಸಿಂಚನ’ ಸಂಚಿಕೆ, ರೈತಪರ ಕ್ಯಾಲೆಂಡರ್‌ಗಳನ್ನು ಪ್ರಕಟಿಸಿರುವುದು ಹಾಗೂ ಕೃಷಿ ಪ್ರಶಸ್ತಿ (ಕೃಷಿ ಸಾಹಿತ್ಯ) ನೀಡುತ್ತಿರುವುದಕ್ಕೆ ಅಧ್ಯಕ್ಷರಿಂದ ಶ್ಲಾಘನೆ ವ್ಯಕ್ತವಾಯಿತು.

ADVERTISEMENT

‘ಡಿಪ್ಲೊಮಾ ಕೋರ್ಸ್‌ಗಳ ಎರಡು ಸೆಮಿಸ್ಟರ್‌ಗಳಲ್ಲಿ ಕನ್ನಡ ವಿಷಯ ನಿಗದಿ ಮಾಡಿ, ಅವುಗಳಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಗಳಿಕೆಯನ್ನು ಕಡ್ಡಾಯಗೊಳಿಸಿರುವುದು ಇತರ ವಿಶ್ವವಿದ್ಯಾಲಯಗಳಿಗೆ ಹಾಗೂ ಸಂಸ್ಥೆಗಳಿಗೆ ಮಾದರಿ’ ಎಂದು ಸದಸ್ಯರು ಅಭಿನಂದಿಸಿದರು.

‘ಇಚ್ಛಾಶಕ್ತಿ ಕೊರತೆಯಿಂದ ಕನ್ನಡ ಕುಂಠಿತ’: ‘ಉನ್ನತ ಅಧಿಕಾರಿಗಳು, ಮುಖ್ಯಸ್ಥರು, ನೌಕರರ ಇಚ್ಛಾಶಕ್ತಿ ಕೊರತೆಯಿಂದ ಕನ್ನಡ ಕುಂಠಿತವಾಗುತ್ತಿದೆ. ಅದನ್ನು ದಾಟಿಕೊಂಡು ಕನ್ನಡದ ಅಸ್ಮಿತೆ ಉಳಿಸುವ ಹೊಣೆಗಾರಿಕೆಯನ್ನು ಹೊರಬೇಕು’ ಎಂದು ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.

‘ದೈನಂದಿನ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸಲು ಎಲ್ಲ ಅಧಿಕಾರಿಗಳು ಕಟಿಬದ್ಧರಾಗಬೇಕು. ಕನ್ನಡ ಬಳಸದ ಎಷ್ಟೇ ದೊಡ್ಡ ಅಧಿಕಾರಿಯಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ರೈತರಿಗೆ ಸಲಹೆ ನೀಡುವ ಕಾರ್ಯಾಗಾರಗಳನ್ನು ಹಾಗೂ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಅದಕ್ಕೆ ಅಗತ್ಯ ನೆರವು ನೀಡುತ್ತೇವೆ’ ಎಂದು ತಿಳಿಸಿದರು.

‘ವಿಶ್ವವಿದ್ಯಾಲಯದಲ್ಲಿ ಕನ್ನಡದ ವಿಚಾರವಾಗಿ ಕೆಲವೊಂದು ಲೋಪದೋಷಗಳಿದ್ದು ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಪ್ರಾಧಿಕಾರ ಸೂಚಿಸಿದ ಸಲಹೆಗಳನ್ನು ಮುಂದಿನ ಎರಡು ತಿಂಗಳೊಳಗೆ ಅನುಷ್ಠಾನಗೊಳಿಸುತ್ತೇವೆ’ ಎಂದು ಕುಲಪತಿ ಎಚ್‌.ಶಿವಣ್ಣ ಹೇಳಿದರು.

ಅಧಿಕಾರಿಗಳ ವಿರುದ್ಧ ಗರಂ
ಮಧ್ಯಾಹ್ನ ಸಾರ್ವಜನಿಕ ಉದ್ದಿಮೆ ಇಲಾಖೆ ಕಚೇರಿಗೆ ಭೇಟಿ ನೀಡಿದ ಎಸ್.ಜಿ.ಸಿದ್ಧರಾಮಯ್ಯ, ‘ಏಪ್ರಿಲ್‌ನಲ್ಲೇ ಕಚೇರಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನಕ್ಕೆ ಸೂಚನೆ ನೀಡಿದ್ದರೂ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ. ಕನ್ನಡ ಅನುಷ್ಠಾನದ ವಿಚಾರವಾಗಿ ನಮ್ಮನ್ನು ಇಲ್ಲಿಗೆ ಮತ್ತೆ ಮತ್ತೆ ಬರುವಂತೆ ಮಾಡುವುದು ಕಳಂಕ’ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.

‘ಇಲಾಖೆಯ ವೆಬ್‌ಸೈಟ್ ಇಲಾಖೆ ವ್ಯಾಪ್ತಿಯಲ್ಲಿ ಬರುವ 60 ಉದ್ದಿಮೆ ಹಾಗೂ ನಿಗಮಗಳ ಪೈಕಿ ಬಹುತೇಕ ನಿರ್ದೇಶಕರು ಪತ್ರ ವ್ಯವಹಾರವನ್ನು ಇಂಗ್ಲೀಷ್‌ನಲ್ಲೇ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

‘ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಾರ್ವಜನಿಕ ಉದ್ದಿಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರೇಣುಕಾ ಚಿದಂಬರಂ ಪ್ರತಿಕ್ರಿಯಿಸಿದರು.

ಜಿಕೆವಿಕೆ, ಸಾರ್ವಜನಿಕ ಉದ್ದಿಮೆ ಇಲಾಖೆಗೆ ಸೂಚನೆ
* ವೆಬ್‌ಸೈಟ್‌ಗಳು ಸಂಪೂರ್ಣವಾಗಿ ಕನ್ನಡದಲ್ಲಿರಬೇಕು
* ವೆಬ್‌ಸೈಟ್‌ನಲ್ಲಿ ಮಾಹಿತಿಗಳು ಕನ್ನಡದಲ್ಲಿರಬೇಕು, ಇಂಗ್ಲೀಷ್ ಆಯ್ಕೆಯಾಗಿರಬೇಕು
* ಪತ್ರ ವ್ಯವಹಾರಗಳು, ನಡಾವಳಿಗಳು, ನೇಮಕಾತಿ ಆದೇಶಗಳು ಕನ್ನಡದಲ್ಲಿರಬೇಕು.
* ಪತ್ರಿಕೆಗಳಿಗೆ ನೀಡುವ ಟೆಂಡರ್ ಜಾಹೀರಾತು ಕನ್ನಡದಲ್ಲಿರಬೇಕು
* ನಿಗಮ ಮಂಡಳಿ ನಿರ್ದೇಶಕರಿಂದ ಬರುವ ಇಂಗ್ಲಿಷ್ ಕಡತಗಳನ್ನು ತಿರಸ್ಕರಿಸಿ

*
ವಿಶ್ವವಿದ್ಯಾಲಯದಿಂದ ಇದುವರೆಗೂ 400ಕ್ಕೂ ಅಧಿಕ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಲಾಗಿದೆ. ವಿದೇಶಿ ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳಿಗೂ ಕನ್ನಡ ಕಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
–ಎ.ಬಿ.ಪಾಟೀಲ್, ಕುಲಸಚಿವ

*
ಎಲ್ಲ ಇಲಾಖೆಗಳಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು. ಈ ಸಂಬಂಧ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ.
– ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.