ADVERTISEMENT

ಕನ್ನಡ ಅನುಷ್ಠಾನ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 19:30 IST
Last Updated 6 ಜುಲೈ 2015, 19:30 IST
ರಿಸರ್ವ್‌ ಬ್ಯಾಂಕ್‌ ಪ್ರಾದೇಶಿಕ ಕಚೇರಿಯಲ್ಲಿ ಸಭೆ ನಡೆಸಿ ಹೊರಬರುತ್ತಿರುವ ಎಲ್‌.ಹನುಮಂತಯ್ಯ , ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ.ಎ.ಆರ್ ಪ್ರಭು ಮತ್ತು ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ನರಸಿಂಹಮೂರ್ತಿ ಚಿತ್ರದಲ್ಲಿದ್ದಾರೆ    ಪ್ರಜಾವಾಣಿ ಚಿತ್ರ
ರಿಸರ್ವ್‌ ಬ್ಯಾಂಕ್‌ ಪ್ರಾದೇಶಿಕ ಕಚೇರಿಯಲ್ಲಿ ಸಭೆ ನಡೆಸಿ ಹೊರಬರುತ್ತಿರುವ ಎಲ್‌.ಹನುಮಂತಯ್ಯ , ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ.ಎ.ಆರ್ ಪ್ರಭು ಮತ್ತು ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ನರಸಿಂಹಮೂರ್ತಿ ಚಿತ್ರದಲ್ಲಿದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ನೃಪತುಂಗ ರಸ್ತೆಯಲ್ಲಿರುವ ರಿಸರ್ವ್‌ ಬ್ಯಾಂಕ್‌ ಪ್ರಾದೇಶಿಕ ಕಚೇರಿ ಮತ್ತು ಕ್ವೀನ್ಸ್‌  ರಸ್ತೆಯಲ್ಲಿರುವ ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಗೆ ಸೋಮವಾರ ಭೇಟಿ ನೀಡಿದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ಹನುಮಂತಯ್ಯ ಅವರು ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲಿಸಿದರು.

ರಿಸರ್ವ್‌ ಬ್ಯಾಂಕ್‌ನಲ್ಲಿ ಕನ್ನಡ ಅನುಷ್ಠಾನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಹನುಮಂತಯ್ಯ ಅವರು, ‘ಖಾಸಗಿ ಬ್ಯಾಂಕ್‌ಗಳು ಸೇರಿದಂತೆ ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತ್ರಿಭಾಷಾ ಸೂತ್ರದ ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿಲ್ಲ.  ಆದ್ದರಿಂದ, ರಿಸರ್ವ್‌ ಬ್ಯಾಂಕ್‌ ಎಲ್ಲ ಬ್ಯಾಂಕ್‌ಗಳಿಗೆ ಕಡ್ಡಾಯವಾಗಿ ತ್ರಿಭಾಷಾ ಸೂತ್ರ ಪಾಲಿಸುವಂತೆ ನಿರ್ದೇಶನ ನೀಡಬೇಕು’ ಎಂದು ಹೇಳಿದರು.

‘ಜಾಲತಾಣ, ದೈನಂದಿನ ಆಡಳಿತ ಸೇರಿದಂತೆ ಎಲ್ಲ ವ್ಯವಹಾರಗಳಲ್ಲಿ ಕನ್ನಡ ಇರುವಂತೆ ನೋಡಿಕೊಳ್ಳಬೇಕು. ಎಲ್ಲಾ ಎಟಿಎಂಗಳಲ್ಲಿ ಕನ್ನಡ ಆಯ್ಕೆ ವ್ಯವಸ್ಥೆ ಮಾಡುವಂತೆ ಬ್ಯಾಂಕುಗಳಿಗೆ ತಾಕೀತು ಮಾಡಬೇಕು’ ಎಂದು ತಿಳಿಸಿದರು. ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕಳೆದ ಕೆಲ ವರ್ಷಗಳಿಂದ ಕನ್ನಡೇತರ ಅಧಿಕಾರಿಗಳ  ನೇಮಕವಾಗುತ್ತಿದ್ದು, ಕನ್ನಡಿಗರು ಅವಕಾಶ ವಂಚಿತರಾಗುತ್ತಿದ್ದಾರೆ. ಇದಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಬೇಕು. ಕಳೆದ ಹತ್ತು ವರ್ಷದಲ್ಲಿ ನೇಮಕವಾದ ಅಧಿಕಾರಿಗಳ ಪಟ್ಟಿಯನ್ನು ಪ್ರಾಧಿಕಾರಕ್ಕೆ ಕಳುಹಿಸಬೇಕು’ ಎಂದರು.

‘ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡ ಘಟಕ ತೆರೆಯಲು ನಿರ್ದೇಶನ ನೀಡಬೇಕು. ಜತೆಗೆ, ನೇಮಕಾತಿ ಸಂದರ್ಭದಲ್ಲಿ ಕನ್ನಡ ಮೌಖಿಕ ಪರೀಕ್ಷೆಯನ್ನು ಸರಿಯಾಗಿ ನಡೆಸಬೇಕು. ಇದಕ್ಕೆ ಅಗತ್ಯವಾದರೆ ಪ್ರಾಧಿಕಾರದ ಸಹಾಯ ಪಡೆಯಬೇಕು’ ಎಂದು ತಿಳಿಸಿದರು.
ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಧೋರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಹನುಮಂತಯ್ಯ, ‘ಕಳೆದ ಬಾರಿಯ ಭೇಟಿ ವೇಳೆ ನೀಡಿದ ಆಶ್ವಾಸನೆಗಳನ್ನು ಈವರೆಗೆ ಈಡೇರಿಸದಿರುವುದು ಬೇಸರ ಉಂಟುಮಾಡಿದೆ’ ಎಂದು ಹೇಳಿದರು.

‘ತ್ರಿಭಾಷಾ ಸೂತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವೇ ಸುತ್ತೋಲೆ ಹೊರಡಿಸಿದೆ. ಆದ್ದರಿಂದ, ಕೂಡಲೇ ಇಲಾಖೆಯ ಎಲ್ಲ ರೀತಿಯ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಶೀಘ್ರದಲ್ಲಿಯೇ ಇಲಾಖೆಯಲ್ಲಿ ಕನ್ನಡ ಘಟಕ ತೆರೆಯಬೇಕು. ಅದರ ಸಹಾಯದಿಂದ ಕನ್ನಡ ಅನುಷ್ಠಾನಕ್ಕೆ ಒತ್ತು ನೀಡಬೇಕು’ ಎಂದರು.
‘ಇಲಾಖೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಏನಾದರೂ ತಾಂತ್ರಿಕ ತೊಂದರೆಗಳಿದ್ದರೆ ಪ್ರಧಾನ ಕಚೇರಿಗೆ ಕೂಡಲೇ ಪತ್ರ ಬರೆದು ಅನುಮತಿ ಪಡೆಯಬೇಕು. ಅಗತ್ಯವಿದ್ದರೆ ಪ್ರಾಧಿಕಾರ ಕೂಡ ನಿಮ್ಮ ಬೆಂಬಲಕ್ಕೆ ಬರುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.