ADVERTISEMENT

ಕನ್ನಡ ಜಾಣರು –ಇಂಗ್ಲಿಷ್‌ ದಡ್ಡರ ಸಮೀಕ್ಷೆ ಅಗತ್ಯ

ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಬೆಂಗಳೂರು: ‘ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಹುದ್ದೆಯನ್ನು ಏರಿದವರು ಹಾಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತೂ ಉದ್ಧಾರ ಆಗದವರ ಬಗ್ಗೆ ಸಮೀಕ್ಷೆ ನಡೆಸಲು ಸರ್ಕಾರ ಆಯೋಗವೊಂದನ್ನು ರಚಿಸಬೇಕು’ ಎಂದು ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ಅಭಿಪ್ರಾಯಪಟ್ಟರು.

ಅರವಿಂದೋ ಸೊಸೈಟಿ ರಾಜ್ಯ ಸಮಿತಿಯು ಹೊರತಂದಿರುವ ಮಹರ್ಷಿ ಅರವಿಂದರ ‘ಯೋಗ ಸಮನ್ವಯ’ ಅನುವಾದಿತ ಕನ್ನಡ ಕೃತಿಯನ್ನು  ನಗರದಲ್ಲಿ ಭಾನುವಾರ ಬಿಡುಗಡೆ ಮಾಡಿ ಮಾತನಾಡಿದರು. 

‘ಇಂಗ್ಲಿಷ್‌ನಲ್ಲಿ ಕಲಿತರೆ ಮಾತ್ರ ಜೀವನದಲ್ಲಿ ಉದ್ಧಾರವಾಗಲು ಸಾಧ್ಯ ಎಂಬ ಹುಸಿ ನಂಬಿಕೆ ಬೆಳೆದಿದೆ. ವಿಶ್ವವೇ ಬೆರಗಿನಿಂದ ನೋಡುವಂತಹ ಕನ್ನಡ ಸೇರಿದಂತೆ ಮಾತೃಭಾಷೆಯಲ್ಲಿಯೇ ಕಲಿತ ಸಾಧಕರು ನಮ್ಮ ನಡುವೆ ಇದ್ದಾರೆ. ಈ ಬಗ್ಗೆ ಸಮೀಕ್ಷೆ ನಡೆಸಿ,  ಸತ್ಯವನ್ನು ಸುಪ್ರೀಂಕೋರ್ಟ್‌ನ ಮುಂದಿ­ಡುವ ತುರ್ತು ಇದೆ’ ಎಂದು ಹೇಳಿದರು.

‘ಅರವಿಂದರ ಸಂದೇಶಗಳು ಕನ್ನಡ ಭಾಷೆಗೆ ಅನುವಾದಗೊಳ್ಳುತ್ತಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಮಹತ್ತರವಾದದ್ದು. ಅರವಿಂದರು ರಚಿಸಿದ ಮೂವತ್ತು ಸಂಪುಟಗಳ 18 ಸಾವಿರ ಪುಟಗಳ ಕೃತಿಗಳು ಇರುವವರೆಗೂ ಅರವಿಂದರ ಹೆಸರು ಅಜರಾಮರ’ ಎಂದು ತಿಳಿಸಿದರು.

‘ಕನ್ನಡ ಭಾಷೆ ಸಾಯದಂತೆ ಎಚ್ಚರ ವಹಿಸಿದರೆ ಮಾತ್ರ ಇಂತಹ ಮೇರುಕೃತಿಗಳ ಪ್ರಯೋಜನವನ್ನು ಯುವಪೀಳಿಗೆ ಪಡೆಯಲು ಸಾಧ್ಯ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್‌.­ಶಂಕರಮೂರ್ತಿ, ‘ಅಧ್ಯಾತ್ಮ ಹಾಗೂ ತತ್ವದ ಮೂಲಕ ಮಾನವೀಯತೆಯನ್ನು ಪಸರಿಸಿದ ಮಹರ್ಷಿ ಅರವಿಂದರ ಇನ್ನಷ್ಟು ವಿಚಾರಧಾರೆಗಳು ಕನ್ನಡಕ್ಕೆ ಅನುವಾದಗೊಳ್ಳಬೇಕು’ ಎಂದು ತಿಳಿಸಿದರು. ‘ವಿಧಾನಮಂಡಲದ ಗ್ರಂಥಾಲಯ ಸಮಿತಿಯ ಸದಸ್ಯನಾಗಿದ್ದು, ಅರವಿಂದರ  ಗ್ರಂಥಗಳನ್ನು ಖರೀದಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ, ‘ಗಣಿತದ ಪ್ರಾಧ್ಯಾಪಕನಾಗಿ ಇಂಗ್ಲಿಷ್‌ ಮೂಲದ ಅರವಿಂದರ ಈ ಕೃತಿಯನ್ನು ಎಂ.ಎಸ್‌.ನಾಗರಹಳ್ಳಿ ಬಹಳ ಸೊಗಸಾಗಿ ಅನುಸೃಷ್ಟಿಸಿದ್ದಾರೆ. ಬಾಣನ ಸಂಸ್ಕೃತ ಹಾಗೂ ಅರವಿಂದರ ಇಂಗ್ಲಿಷ್‌ ಬರಹವನ್ನು ಅನುವಾದ ಮಾಡುವುದು ಬಹಳ ಕಷ್ಟದ ಕೆಲಸ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.