ADVERTISEMENT

ಕಬ್ಬನ್‌ ಉದ್ಯಾನದ ಕಾರ್ಯಕ್ರಮಗಳಿಗೆ ಶುಲ್ಕ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:35 IST
Last Updated 22 ಡಿಸೆಂಬರ್ 2014, 19:35 IST

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ಆಯೋಜಿಸುವ ಮ್ಯಾರಥಾನ್‌, ಓಟ, ಜಾಗೃತಿ ಅಭಿಯಾನ ಹೀಗೆ ಇನ್ನಿತರ ಯಾವುದೇ ಕಾರ್ಯಕ್ರಮಕ್ಕೆ ತೋಟಗಾರಿಕೆ ಇಲಾಖೆಯಿಂದ ಒಪ್ಪಿಗೆ  ಹಾಗೂ ರೂ. 25 ಸಾವಿರ ಶುಲ್ಕವನ್ನು  ಸಂದಾಯ ಮಾಡಬೇಕೆಂಬ ನೀತಿಯನ್ನು ತೋಟಗಾರಿಕೆ ಇಲಾಖೆ ಜಾರಿಗೆ ತಂದಿದೆ.

‘ಕಬ್ಬನ್‌ ಉದ್ಯಾನದಲ್ಲಿ ಆಯೋಜಿಸುವ ಕಾರ್ಯ ಕ್ರಮ ಅಥವಾ ಮ್ಯಾರಥಾನ್‌ಗಳಿಗೆ ಜುಲೈ ತಿಂಗಳಿ ನಿಂದಲೇ ರೂ. 25 ಸಾವಿರ ಶುಲ್ಕ ವಿಧಿಸಿ, ಅನುಮತಿ ನೀಡ­ಲಾಗುತ್ತಿದೆ. ಅನುಮತಿ ನೀಡುವಾಗ ಉದ್ಯಾನ­ದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌, ಪ್ಲಾಸ್ಟಿಕ್‌ ಬಾಟಲಿ, ಕಸ ಎಸೆಯಬಾರದು ಮತ್ತು ಉದ್ಯಾನದ ಶುಚಿತ್ವ­ವನ್ನು ಕಾಪಾಡುವಂತೆ ಷರತ್ತು ವಿಧಿಸಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ (ಕಬ್ಬನ್‌ ಉದ್ಯಾನ) ಉಪ ನಿರ್ದೇಶಕ ಮಹಾಂತೇಶ ಮುರುಗೋಡ ತಿಳಿಸಿದರು.

ರೂ. 3.5 ಲಕ್ಷ ಸಂಗ್ರಹ: ‘ಶುಲ್ಕ ನೀತಿ ಅಳವಡಿಸಿದ ನಂತ­ರ­ದಿಂದ ಇದುವರೆಗೂ 16 ಕಾರ್ಯಕ್ರಮಗಳು ನಡೆ­ದಿವೆ. ಈ ಎಲ್ಲಾ ಕಾರ್ಯಕ್ರಮಗಳಿಂದ ಒಟ್ಟು ರೂ. 3.5 ಲಕ್ಷ ಸಂಗ್ರಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಉದ್ಯಾನದಲ್ಲಿ ನಡೆಯುವ ಮ್ಯಾರಥಾನ್‌ಗಳಿಂದ ಆಗುತ್ತಿರುವ ತೊಂದರೆಯ ಕುರಿತು ಹಾಗೂ ಆಗುತ್ತಿ­ರುವ ತ್ಯಾಜ್ಯದ ಸಮಸ್ಯೆಯ ಕುರಿತು ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘದವರು ಮಾಹಿತಿ ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರು. ಹೀಗಾಗಿ, ಷರತ್ತು ವಿಧಿಸಿ ಅನುಮತಿ ನೀಡಲಾಗುತ್ತಿದೆ’ ಎಂದರು.

‘ಕಬ್ಬನ್‌ ಉದ್ಯಾನದಲ್ಲಿ ತಿಂಗಳಿಗೆ ಕನಿಷ್ಠವೆಂದರೂ ಸುಮಾರು 15 ಕಾರ್ಯಕ್ರಮಗಳು ನಡೆಯುತ್ತಿದ್ದವು. ಕೆಲವರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಅನುಮತಿ ಪಡೆದರೆ, ಹಲವರು ಪಡೆದಿರುತ್ತಿರಲಿಲ್ಲ. ಕೇಳಿದರೆ ಪೊಲೀಸರ ಅನುಮತಿ ಪಡೆದಿದ್ದೇವೆ ಎಂದು ತಮಗೆ ಬೇಕಾದ ದಿನ ನೇರವಾಗಿ ಕಬ್ಬನ್‌ ಉದ್ಯಾನಕ್ಕೆ ಆಗಮಿಸಿ ಬೃಹತ್ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಉದ್ಯಾನವನ್ನು ಹಾಳು ಮಾಡುತ್ತಿದ್ದರು’ ಎಂದು ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಎಸ್‌.ಉಮೇಶ್‌ ತಿಳಿಸಿದರು.

‘ಜಾಗ ನೀಡದಿರುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿ, ಅವರಿಗೆ ಮನವಿ ಸಲ್ಲಿಸಿ­ದೆವು. ನಗರದಲ್ಲಿ ಮ್ಯಾರಥಾನ್‌ಗಳನ್ನು ನಡೆಸಲು ಬೇಕಾದಷ್ಟು ಜಾಗಗಳಿವೆ. ಆದರೆ, ಕಬ್ಬನ್‌ ಉದ್ಯಾನ ಇರುವುದು ಒಂದೇ, ಇಲ್ಲಿ ಕಾರ್ಯಕ್ರಮ ನಡೆಸಿ ಉದ್ಯಾನವನ್ನು ಹಾಳು ಮಾಡುವುದು ತರವಲ್ಲ’ ಎಂದು ಹೇಳಿದರು.

‘ಬೃಹತ್ ಕಾರ್ಯಕ್ರಮಗಳಿಗೆ ರೂ. 25 ಸಾವಿರ ಶುಲ್ಕ ವಿಧಿಸಿರುವುದು ಉತ್ತಮವಾಗಿದೆ. ಅದೇ ರೀತಿ ಉದ್ಯಾನ­ದಲ್ಲಿ ನಡೆಯುವ ಸಣ್ಣ ಪುಟ್ಟ ಕಾರ್ಯಕ್ರಮ­ಗಳಿಗೂ ಅಲ್ಪ ಮೊತ್ತದ ಶುಲ್ಕ ವಿಧಿಸಲಿ. ಜತೆಗೆ ಸರ್ಕಾರಿ ಕಾರ್ಯಕ್ರಮಗಳು ನಡೆಯುವಾಗ ಉದ್ಯಾ ನದ ಹಿತಕ್ಕೆ ಧಕ್ಕೆಯಾಗದಂತೆ ನಿಯಮ ಉಲ್ಲಂಘಿಸ­ದಂತೆ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಉದ್ಯಾನ ಅಭಿವೃದ್ಧಿಗೆ ಬಳಕೆ’
ಮ್ಯಾರಥಾನ್, ಜಾಗೃತಿ ಓಟ ಮತ್ತಿತರ ಕಾರ್ಯಕ್ರಮಗಳಿಂದ ಉದ್ಯಾನಕ್ಕೆ ಹಾನಿಯಾ­ಗುತ್ತಿತ್ತು. ಉದ್ಯಾನದ ಹಿತ ಕಾಪಾಡುವುದಕ್ಕಾಗಿ ಸರ್ಕಾರೇತರ ಕಾರ್ಯಕ್ರಮಗಳಿಗೆ ರೂ. 25 ಸಾವಿರ ಶುಲ್ಕ ವಿಧಿಸಲಾಗಿದೆ. ಇದರಿಂದ ಸಂಗ್ರಹವಾಗುವ ಹಣವನ್ನು ಸುವರ್ಣ ಕರ್ನಾಟಕ ಉದ್ಯಾನ ಪ್ರತಿಷ್ಠಾನ ಟ್ರಸ್ಟ್‌ಗೆ ಸಂದಾಯ ಮಾಡಲಾಗು­ವುದು. ಈ ಹಣವನ್ನು ಕಬ್ಬನ್‌ ಉದ್ಯಾನ ಸೇರಿ ದಂತೆ ಇಲಾಖೆ ವ್ಯಾಪ್ತಿಗೆ ಬರುವ ಉದ್ಯಾನಗಳ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು.

-– ಮಹಾಂತೇಶ ಮುರುಗೋಡ,  ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ (ಕಬ್ಬನ್‌ ಉದ್ಯಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT