ADVERTISEMENT

ಕಬ್ಬನ್ ಉದ್ಯಾನದ ಪ್ರತಿಮೆಗಳಿಗೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:30 IST
Last Updated 18 ಏಪ್ರಿಲ್ 2014, 19:30 IST

ಬೆಂಗಳೂರು: ನಗರದ ಕಬ್ಬನ್ ಉದ್ಯಾನದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಲಾದ,  ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ವಿರೂಪಗೊಂಡ ಸ್ಥಿತಿಯಲ್ಲಿದ್ದ ಐವರು ಐತಿಹಾಸಿಕ ವ್ಯಕ್ತಿಗಳ ಪ್ರತಿಮೆಗಳ ಕಾಯಕಲ್ಪಕ್ಕೆ ತೋಟಗಾರಿಕಾ ಇಲಾಖೆ ಮುಂದಾಗಿದೆ.

ಉದ್ಯಾನದಲ್ಲಿರುವ ವಿಕ್ಟೋರಿಯಾ ರಾಣಿಯ ಪ್ರತಿಮೆಯ ಬಲಗೈ ತೋರುಬೆರಳು ಮುರಿದಿದ್ದು, ಬಲಗೈ­ನಲ್ಲಿ­ರುವ  ರಾಜದಂಡ ವಿರೂಪ­ಗೊಂಡಿದೆ. ಪ್ರತಿಮೆಯ ಸುತ್ತ ಬೊಂಬುಗಳ ಬೇಲಿ ನಿರ್ಮಿಸಲಾಗಿದೆ. ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆಯ ಬಲಗಾಲಿನ ಪಾದ ಹಾನಿಗೊಳಗಾಗಿದ್ದು, ಪ್ರತಿಮೆಯ  ಆವರಣದ ಬಾಗಿಲು ಮುರಿದಿದೆ.

ಕಬ್ಬನ್ ಉದ್ಯಾನದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗಿರುವ 3ನೇ ಕಿಂಗ್ ಎಡ್ವರ್ಡ್, ಮೇಜರ್ ಜನರಲ್ ಸರ್ ಮಾರ್ಕ್ ಕಬ್ಬನ್ ಮತ್ತು ದಿವಾನ್ ಕೆ.ಶೇಷಾದ್ರಿ ಅಯ್ಯರ್ ಅವರ ಪ್ರತಿಮೆಗಳ ಆವರಣಗಳ ಸುತ್ತ  ಬೇಲಿ­ಯಿಲ್ಲದೆ ಪ್ರತಿಮೆಗಳು ಅಭದ್ರತೆ ಎದುರಿ­ಸುತ್ತಿವೆ. ಬ್ರಿಟಿಷ್ ಮತ್ತು ಮೈಸೂರು ಸಂಸ್ಥಾನದ ಆಡಳಿತಗಳಿಗೆ ಸಾಕ್ಷಿಯಾದ ಈ ಐದೂ ಪ್ರತಿಮೆಗಳು ನಿರ್ವಹಣೆ­ಯಿಲ್ಲದೆ  ಕಳೆಗುಂದಿದ್ದು, ಹೊಳಪನ್ನು ಕಳೆದುಕೊಂಡಿವೆ. ಹಲವು ವರ್ಷಗಳ ನಂತರ ಎಚ್ಚೆತ್ತುಕೊಂಡಿರುವ ತೋಟ­ಗಾ­ರಿಕಾ ಇಲಾಖೆಯು ಪ್ರತಿಮೆ­ಗಳಿಗೆ ಹಿಂ­ದಿನ ಕಳೆ ಮರುಳಿಸುವ ಜವಾ­ಬ್ದಾರಿ­ಯನ್ನು ಕರ್ನಾಟಕ ಚಿತ್ರಕಲಾ ಪರಿ­ಷತ್ತಿಗೆ (ಸಿಕೆಪಿ) ವಹಿಸಲು ಮುಂದಾ­ಗಿದೆ.

ತೋಟಗಾರಿಕಾ ಇಲಾಖೆ ಉಪ­ನಿರ್ದೇಶಕ (ಕಬ್ಬನ್ ಉದ್ಯಾನ) ಮಹಾಂ­ತೇಶ್ ಮುರುಗೋಡ, ‘ಲಾಲ್‌­ಬಾಗ್ ಮತ್ತು ಕಬ್ಬನ್ ಉದ್ಯಾನ ಸಲಹಾ ಸಮಿತಿಯ ಅಧ್ಯಕ್ಷ ಎ.ಎನ್.­ಯಲ್ಲ­ಪ್ಪ­ರೆಡ್ಡಿ ಅವರ ಸಲಹೆಯ ಮೇರೆಗೆ ಪ್ರತಿಮೆಗಳನ್ನು ಸರಿಪಡಿಸುವ ಕೆಲಸ­ವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ವಹಿಸಲಾಗುತ್ತಿದೆ. ಕಾಯಕಲ್ಪದ ಹಂತ­ದಲ್ಲಿ ಪುರಾತತ್ವ ಇಲಾಖೆಯ ಸಲಹೆ­ಯನ್ನೂ ಪಡೆಯಲಾಗುವುದು’ ಎನ್ನುತ್ತಾರೆ.

‘ವಿರೂಪಗೊಂಡಿರುವ ಎರಡು ಪ್ರತಿಮೆ­ಗಳನ್ನು ಸರಿಪಡಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಬಣ್ಣ ಮಾಸಿರುವ ಉಳಿದ ಪ್ರತಿಮೆಗಳಿಗೆ ಹೊಳಪು ನೀಡಲಾಗುವುದು’ ಎಂದು ಯೋಜನೆಯನ್ನು ವಿವರಿಸುತ್ತಾರೆ.

‘ಸಿಕೆಪಿಯು ಒಂದು ವಾರದ ಒಳಗೆ ಪ್ರತಿಮೆಗಳನ್ನು ಪರಿಶೀಲಿಸಿ, ಯೋಜ­ನೆಯ ಹಂತಗಳು ಮತ್ತು ವೆಚ್ಚವನ್ನು  ಒಳಗೊಂಡ ವರದಿಯನ್ನು ಸಿದ್ಧಪಡಿಸಿ ತೋಟಗಾರಿಕಾ ಇಲಾಖೆಗೆ ಸಲ್ಲಿಸಲಿದೆ.  ಯೋಜನೆಗೆ ಅನುಮತಿ ದೊರೆತ ನಂತರ ಕೆಲಸ ಆರಂಭಿಸಲಾಗುತ್ತದೆ’ ಎನ್ನುತ್ತಾರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಹಾಯಕ ಕಾರ್ಯದರ್ಶಿ ಕಮಲೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.