ADVERTISEMENT

ಕಳವು ಮಾಡಿದ್ದ ವಿಗ್ರಹ ವಾಪಸ್ ತಂದಿಟ್ಟ ಕಳ್ಳರು...

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2015, 20:00 IST
Last Updated 21 ನವೆಂಬರ್ 2015, 20:00 IST

ಬೆಂಗಳೂರು: ಗೋಪಾಲಪುರ 2ನೇ ಹಂತದ ದೇವಸ್ಥಾನದಲ್ಲಿ  ಯಲ್ಲಮ್ಮ ದೇವಿಯ ವಿಗ್ರಹ ಕಳವು ಮಾಡಿದ್ದ ದುಷ್ಕರ್ಮಿಗಳು, ಶುಕ್ರವಾರ ರಾತ್ರಿ ಮತ್ತೆ ವಿಗ್ರಹವನ್ನು ಕದ್ದ ಸ್ಥಳದಲ್ಲಿ ತಂದಿಟ್ಟಿದ್ದಾರೆ.

ದುಷ್ಕರ್ಮಿಗಳು ಭಾನುವಾರ (ನ.15) ದೇವಸ್ಥಾನದಲ್ಲಿ ವಿಗ್ರಹ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೇವಸ್ಥಾನದ ಒಳಭಾಗದಲ್ಲಿ ಆಲದ ಮರವಿದೆ. ಮರದ ಸುತ್ತ ಗೋಪುರ ಕಟ್ಟಲಾಗಿದೆ. ಮರದ ಸುತ್ತ ಬಿಟ್ಟಿರುವ  ಖಾಲಿ ಜಾಗದ ಮೂಲಕ ದೇವಸ್ಥಾನದ ಒಳಗೆ ಇಳಿದಿದ್ದ ದುಷ್ಕರ್ಮಿಗಳು, ವಿಗ್ರಹ ಕದ್ದೊಯ್ದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ಮಧ್ಯರಾತ್ರಿ ವಿಗ್ರಹ ಮತ್ತು ಬೆಳ್ಳಿಯ ವಸ್ತುಗಳನ್ನು ದೇವಸ್ಥಾನದ ಕಟ್ಟೆಯ ಮೇಲೆ ತಂದಿಟ್ಟಿದ್ದಾರೆ. ಶನಿವಾರ ಬೆಳಿಗ್ಗೆ ಸ್ಥಳೀಯರು ನೋಡಿ ಠಾಣೆಗೆ ವಿಷಯ ತಿಳಿಸಿದರು. ದೇವಸ್ಥಾನದ ಸುತ್ತ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಹೀಗಾಗಿ ದುಷ್ಕರ್ಮಿಗಳ ಬಗ್ಗೆ ಯಾವುದೇ ಸುಳಿಸುವ ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ದೇವರ ಮೇಲಿನ ಭಯದಿಂದಾಗಿ ಕಳವು ಮಾಡಿದವರು ವಾಪಸ್‌ ತಂದಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.