ADVERTISEMENT

ಕಸಕ್ಕೆ ಬೆಂಕಿ: ನಿಷೇಧ ಹೇರಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:56 IST
Last Updated 21 ಸೆಪ್ಟೆಂಬರ್ 2017, 19:56 IST

ಬೆಂಗಳೂರು: ಜನವಸತಿ ಪ್ರದೇಶ ಅಥವಾ ಬಯಲು ಜಾಗದಲ್ಲಿ ಇನ್ನು ಮುಂದೆ ಕಸಕ್ಕೆ ಬೆಂಕಿ ಹಚ್ಚುವಂತಿಲ್ಲ. ಒಂದು ವೇಳೆ ಸರ್ಕಾರದ ಈ ಆದೇಶ ಉಲ್ಲಂಘಿಸಿ ಕಸಕ್ಕೆ ಬೆಂಕಿ ಹಚ್ಚಿದರೆ ₹5 ಲಕ್ಷದವರೆಗೂ ದಂಡ ತೆರಬೇಕು, ಇಲ್ಲವೇ 5 ವರ್ಷ ಜೈಲು ಮತ್ತು ದಂಡ ಪಾವತಿಸುವ ಶಿಕ್ಷೆ ಅನುಭವಿಸಬೇಕು!

ವಾಯು ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯ್ದೆ 1981ರ ಸೆಕ್ಷನ್‌ 19(5)ರಡಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆ ಆಧರಿಸಿ, ರಾಜ್ಯ ಸರ್ಕಾರ, ಕಸಕ್ಕೆ ಬೆಂಕಿ ಹಚ್ಚುವುದನ್ನು ನಿರ್ಬಂಧಿಸಿ, ಅಧಿಸೂಚನೆ ಹೊರಡಿಸಿದೆ.

‘ನಗರ ಪ್ರದೇಶಗಳ ಬಯಲು ಜಾಗಗಳಲ್ಲಿ ಕಸಕ್ಕೆ ಬೆಂಕಿ ಹಚ್ಚುವ ಪ್ರಕರಣ ಹೆಚ್ಚುತ್ತಿದ್ದು, ಇದರಿಂದ ಪರಿಸರ ಮಾಲಿನ್ಯವಾಗುತ್ತಿತ್ತು. ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿತ್ತು. ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು ಕಸ ಭೂಭರ್ತಿ ಮಾಡಿದ ಜಾಗಗಳಲ್ಲೂ ಕಸಕ್ಕೆ ಬೆಂಕಿ ಹಚ್ಚುವುದನ್ನು ಈ ಆದೇಶ ನಿರ್ಬಂಧಿಸಲಿದೆ’ ಎಂದು ರಾಜ್ಯ ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ ಪ್ರಾಧಿಕಾರ(ಎಸ್‌ಇಐಎಎ) ಸದಸ್ಯ ಕಾರ್ಯದರ್ಶಿ ರಾಮಚಂದ್ರ ತಿಳಿಸಿದ್ದಾರೆ.

ADVERTISEMENT

ಸರ್ಕಾರದ ಅಧಿಸೂಚನೆಯನ್ನು ತಕ್ಷಣ ಜಾರಿಗೆ ತರುವಂತೆ ಆಗಸ್ಟ್‌ 3ರಂದೇ ಮಹಾಲೇಖಪಾಲರು (ಎ ಅಂಡ್‌ ಇ), ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ, ಪಾಲಿಕೆ ಆಯುಕ್ತರು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿಗಳು, ಸ್ಥಳೀಯ ಸಂಸ್ಥೆಗಳ ಆಯುಕ್ತರು, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಮುಖ್ಯಸ್ಥರಿಗೆ ಆದೇಶದ ಪ್ರತಿ ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.