ADVERTISEMENT

ಕಸ್ಟಮ್ಸ್‌ ಪ್ರಕ್ರಿಯೆಗೆ ಶೇ 89ರಷ್ಟು ಮಂದಿ ಸಂತೃಪ್ತ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 20:00 IST
Last Updated 19 ಜನವರಿ 2017, 20:00 IST
ಕಸ್ಟಮ್ಸ್‌ ಮುಖ್ಯ ಆಯುಕ್ತ ಆರ್‌.ಬಿ.ತಿವಾರಿ ಅವರು  (ಎಡದಿಂದ ಎರಡನೆಯವರು) ಸಮೀಕ್ಷಾ ವರದಿ ಬಿಡುಗಡೆಗೊಳಿಸಿದರು. ಏಮ್ಸ್‌್ ರಿಜಿಸ್ಟ್ರಾರ್‌್ ಶಿರಿ ಕುರಿಯನ್‌,   ಡಾ.  ಡಾ. ಕಿರಣಾ ರೆಡ್ಡಿ, ಕಸ್ಟಮ್ಸ್‌್  ಜಂಟಿ ಆಯುಕ್ತ ಹರ್ಷವರ್ಧನ್‌ ಉಮ್ರೆ ಚಿತ್ರದಲ್ಲಿದ್ದಾರೆ
ಕಸ್ಟಮ್ಸ್‌ ಮುಖ್ಯ ಆಯುಕ್ತ ಆರ್‌.ಬಿ.ತಿವಾರಿ ಅವರು (ಎಡದಿಂದ ಎರಡನೆಯವರು) ಸಮೀಕ್ಷಾ ವರದಿ ಬಿಡುಗಡೆಗೊಳಿಸಿದರು. ಏಮ್ಸ್‌್ ರಿಜಿಸ್ಟ್ರಾರ್‌್ ಶಿರಿ ಕುರಿಯನ್‌,   ಡಾ. ಡಾ. ಕಿರಣಾ ರೆಡ್ಡಿ, ಕಸ್ಟಮ್ಸ್‌್ ಜಂಟಿ ಆಯುಕ್ತ ಹರ್ಷವರ್ಧನ್‌ ಉಮ್ರೆ ಚಿತ್ರದಲ್ಲಿದ್ದಾರೆ   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಬಗ್ಗೆ ಮೊದಲ ಬಾರಿಗೆ ನಡೆಸಲಾದ  ‘ಅಂತರರಾಷ್ಟ್ರೀಯ ಪ್ರಯಾಣಿಕರ ಸಂತೃಪ್ತಿಯ ಸಮೀಕ್ಷೆ’ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಯಿತು.

ವಿಮಾನ ನಿಲ್ದಾಣ ಹಾಗೂ ವೈಮಾನಿಕ ಕಾರ್ಗೊ ಸಂಕೀರ್ಣದ ಕಸ್ಟಮ್ಸ್ ಆಯುಕ್ತರ ಕಚೇರಿ, ಬಿ-ಸ್ಕೂಲ್ ಏಮ್ಸ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಸಹಯೋಗದಲ್ಲಿ ಸೆಪ್ಟೆಂಬರ್‌ 12ರಿಂದ  26ರವರೆಗೆ ಈ ಸಮೀಕ್ಷೆ ನಡೆಸಲಾಗಿತ್ತು.

ಪೀಣ್ಯದ ಏಮ್ಸ್‌ ಇನ್‌ಸ್ಟಿಟ್ಯೂಟ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರದಿ ಬಿಡುಗಡೆಗೊಳಿಸಿದ ಇನ್‌ಸ್ಟಿಟ್ಯೂಟ್‌ ಸಿಇಒ ಡಾ. ಕಿರಣಾ ರೆಡ್ಡಿ, ‘ಕಸ್ಟಮ್ಸ್‌ ಅಧಿಕಾರಿಗಳ ಕೋರಿಕೆಯಂತೆ ಸೆಂಟರ್ ಫಾರ್ ಕನ್ಸಲ್ಟಿಂಗ್ ಅಡಿಯಲ್ಲಿ ಸಂಶೋಧನೆ ನಡೆಸಲಾಗಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಪ್ರಯಾಣಿಕರ ಸಂತೃಪ್ತಿಯ ಮಟ್ಟ ಎಷ್ಟು ಎಂಬುದು ಗೊತ್ತಾಗಿದೆ’ ಎಂದರು.

‘ಚೀನಾ, ದಕ್ಷಿಣ ಕೊರಿಯಾ, ಜರ್ಮನಿ, ರಷ್ಯಾ ಸೇರಿದಂತೆ 1,184 ಅಂತರರಾಷ್ಟ್ರೀಯ ಪ್ರಯಾಣಿಕರ ಅಭಿಪ್ರಾಯ ಪಡೆಯಲಾಗಿದೆ. ಅದರಲ್ಲಿ  ಶೇ 78ರಷ್ಟು ಪುರುಷರು ಹಾಗೂ ಶೇ 22ರಷ್ಟು ಮಹಿಳೆಯರಿದ್ದಾರೆ. ಜತೆಗೆ  ಶೇ 45ರಷ್ಟು ವಿದೇಶಿಯರು, ಶೇ 45ರಷ್ಟು ಭಾರತೀಯರು ಮತ್ತು ಶೇ 10ರಷ್ಟು ಅನಿವಾಸಿ ಭಾರತೀಯರಿದ್ದಾರೆ’ ಎಂದು  ಕಿರಣಾ ವಿವರಿಸಿದರು.

ಸಮೀಕ್ಷೆಯ ಮುಖ್ಯಾಂಶಗಳು:
* ಶೇ 40ರಷ್ಟು ಮಂದಿ ಟಿಕೆಟ್ ಪಡೆಯುವಾಗಲೇ ಸೀಮಾ ಸುಂಕ ನಿಯಮಗಳನ್ನು ಅರಿಯಲು ಬಯಸುತ್ತಾರೆ. ಶೇ 20ರಷ್ಟು ಮಂದಿ ವಿದೇಶದಲ್ಲಿ ಕೊಳ್ಳುವಾಗ ಆಲೋಚಿಸುತ್ತಾರೆ. ಶೇ 13ರಷ್ಟು ಮಂದಿ ಇಮಿಗ್ರೇಷನ್ ಕ್ಲಿಯರೆನ್ಸ್ ಸಮಯದಲ್ಲಿ ವೆಬ್‌ಸೈಟ್‌ ನೋಡುತ್ತಾರೆ.

*  ಶೇ 69ರಷ್ಟು ಪ್ರಯಾಣಿಕರು  ಕಸ್ಟಮ್ಸ್ ವೆಬ್‌ಸೈಟ್‌ನಲ್ಲಿ  ಮಾಹಿತಿ ಚೆನ್ನಾಗಿದೆ ಎಂದಿದ್ದಾರೆ. ಶೇ 18ರಷ್ಟು ಮಂದಿ ವೆಬ್‌ಸೈಟ್‌  ಸುಮಾರಾಗಿದೆ ಎಂದಿದ್ದಾರೆ.

*  ಶೇ 75ರಷ್ಟು ಪ್ರಯಾಣಿಕರು, ಸೀಮಾ ಸುಂಕ ಕುರಿತು ಮುಂಚೆ ಮಾಹಿತಿ, ಸರಳ ಪ್ರಕ್ರಿಯೆ, ಸುಂಕ ಲೆಕ್ಕ ಹಾಕುವಲ್ಲಿ ಪಾರದರ್ಶಕತೆ ಅಗತ್ಯ ಎಂದಿದ್ದಾರೆ.

* ಶೇ 74ರಷ್ಟು ಪ್ರಯಾಣಿಕರು ಸೀಮಾ ಸುಂಕ ಪರಿಶೀಲನಾ ಪ್ರಕ್ರಿಯೆ ಸುರಕ್ಷಿತವಾಗಿದೆ ಎಂದಿದ್ದಾರೆ.

*ಶೇ 88ರಷ್ಟು ಮಂದಿ ಆ್ಯಪ್‌ ಮೂಲಕವೇ ಸೀಮಾ ಸುಂಕದ ಮಾಹಿತಿ ಸಿಗಬೇಕು ಎಂದು ಬಯಸಿದ್ದಾರೆ.

ಶಿಫಾರಸುಗಳು
*  ಎಲೆಕ್ಟ್ರಾನಿಕ್ ವಸ್ತು, ಆಭರಣಗಳ ವಿಷಯದಲ್ಲಿ ಪಾರದರ್ಶಕತೆ ಬರಬೇಕು.

* ಸೀಮಾ ಸುಂಕ ನಿಯಮಗಳು ಮತ್ತು ನಿಬಂಧನೆಗಳ ಕುರಿತು ಕಸ್ಟಮ್ಸ್  ಸಿಬ್ಬಂದಿಗೆ ಮೊದಲು ತರಬೇತಿ ನೀಡಬೇಕು

*  ರೆಡ್ ಚಾನೆಲ್ ಪ್ರಯಾಣಿಕರ ಸಮಯದ ಮಿತಿ ಕಡಿಮೆ ಮಾಡಬೇಕು.

*  ಸೀಮಾ ಸುಂಕದ ಮಾಹಿತಿ ಪಡೆಯಲು ಮೊಬೈಲ್‌ ಆ್ಯಪ್‌ ರೂಪಿಸಬೇಕು.

*  ರಾತ್ರಿ ಪಾಳಿಯಲ್ಲಿ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಬೇಕು.

* ಸೀಮಾ ಸುಂಕವನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅಲ್ಲದೇ ವಿದೇಶಿ ವಿನಿಮಯದಲ್ಲೂ ಪಾವತಿಸಲು ಅವಕಾಶ ಕಲ್ಪಿಸಬೇಕು. ಜತೆಗೆ ಈ ಪ್ರಕ್ರಿಯೆ ಸುಲಭಗೊಳಿಸಲು ಕಸ್ಟಮ್ಸ್ ಪ್ರದೇಶದಲ್ಲಿ ಎಟಿಎಂಗಳನ್ನು ತೆರೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT