ADVERTISEMENT

ಕಸ ಪ್ರತ್ಯೇಕಿಸಿ ಕೊಡದಿದ್ದರೆ ಜೈಲು!

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 20:05 IST
Last Updated 26 ನವೆಂಬರ್ 2015, 20:05 IST

ಬೆಂಗಳೂರು: ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ಕೊಡುವಲ್ಲಿ ಐದು ಸಲ ಪ್ರಮಾದ ಎಸಗಿದರೆ ಅಂಥವರು ಜೈಲು ಪಾಲಾಗುವ ಅಪಾಯ ಇದೆ.

ಪೌರ ನಿಗಮಗಳ (ತಿದ್ದುಪಡಿ) ಕಾಯ್ದೆಯು ನಗರ ಸ್ಥಳೀಯ ಸಂಸ್ಥೆಗಳಿಗೆ ಈ ಶಿಕ್ಷೆ ನೀಡುವ ಅಧಿಕಾರವನ್ನು ನೀಡಿದೆ. ತ್ಯಾಜ್ಯ ವಿಂಗಡಣೆಯಲ್ಲಿ ಮೊದಲ ಸಲ ವಿಫಲವಾದರೆ ₹ 100 ದಂಡ ಹಾಗೂ ಎರಡನೇ ಸಲ ಅದೇ ಅಪರಾಧ ಎಸಗಿದರೆ ₹ 500 ದಂಡ ಹಾಕಲು ಅವಕಾಶ ಇದೆ. ಐದು ಸಲ ಪ್ರಮಾದ ಎಸಗಿದವರಿಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ರಸ್ತೆಬದಿ ಕಸ ಹಾಕುವುದು, ಉಗಿಯುವುದು, ಮಲ–ಮೂತ್ರ ವಿಸರ್ಜನೆ ಮಾಡುವುದು ಮೊದಲಾದ ಕೃತ್ಯಗಳನ್ನೂ ಅಪರಾಧ ಎಂದು ಪರಿಗಣಿಸಲಾಗಿದ್ದು, ಅದಕ್ಕೂ ದಂಡ ಹಾಕಲು ಅವಕಾಶ ಕಲ್ಪಿಸಲಾಗಿದೆ. ಕಟ್ಟಡ ತ್ಯಾಜ್ಯ ಎಲ್ಲೆಂದರಲ್ಲಿ ಸುರಿದರೆ ಅದು ಕೂಡ ಶಿಕ್ಷಾರ್ಹ ಅಪರಾಧವಾಗಿದ್ದು, ಭಾರಿ ದಂಡ ಹಾಕಲಾಗುತ್ತದೆ.

ಕಸ ವಿಂಗಡಣೆ ಮಾಡಿಕೊಡುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಂದಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಸಂಬಂಧ ಜನಜಾಗೃತಿ ಉಂಟು ಮಾಡಲು ನಿರ್ಧರಿಸಿದೆ.   

ಸಾರ್ವಜನಿಕರಲ್ಲಿ ತ್ಯಾಜ್ಯ ವಿಂಗಡಣೆ ಕುರಿತು ಅರಿವು ಮೂಡಿಸಲು ಪಶ್ಚಿಮ ವಲಯದಲ್ಲಿ ಈಗಾಗಲೇ ಕಸದ ವಾಹನಗಳಿಗೆ ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿದೆ. ಕಸ ಪ್ರತ್ಯೇಕಿಸಿ ಕೊಡುವ ಮಹತ್ವವನ್ನು ಸಾರುವ ಜತೆಗೆ ಕಾಯ್ದೆಯ ಪ್ರಕಾರ ಶಿಕ್ಷೆ ನೀಡಲು ಅವಕಾಶ ಇರುವುದನ್ನೂ ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ.

ಐ ಗಾಟ್‌ ಗಾರ್ಬೇಜ್‌: ನಗರದ ಶುಚಿತ್ವ ಕಾಪಾಡಲು ನಾಗರಿಕರಿಗೆ ಅಗತ್ಯವಾದ ನೆರವು ನೀಡಲು ಮೈಂಡ್‌ಟ್ರೀ ಸಂಸ್ಥೆ ‘ಐ ಗಾಟ್‌ ಗಾರ್ಬೇಜ್‌’ ಎಂಬ ಆನ್‌ಲೈನ್‌ ವೇದಿಕೆಯನ್ನು ಸೃಷ್ಟಿಸಿದೆ. ಮನೆ, ಅಪಾರ್ಟ್‌ಮೆಂಟ್‌, ಕಚೇರಿ ತ್ಯಾಜ್ಯದ ವಿಲೇವಾರಿಗೆ ಏನೆಲ್ಲ ಅವಕಾಶಗಳಿವೆ ಎಂಬುದನ್ನು ತಿಳಿಸಲಾಗಿದೆ.

ಹಸಿ ಕಸವನ್ನು ಸಾವಯವ ಗೊಬ್ಬರ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡಲಾಗುತ್ತದೆ. ಒಣ ಕಸವನ್ನು ನೀವು ದೇಣಿಗೆ ನೀಡಲು ಸಿದ್ಧರಿದ್ದರೆ ಕಸ ಒಯ್ಯುವವರನ್ನು ಮನೆಗೆ ಕಳುಹಿಸಲಾಗುತ್ತದೆ. ಅಪಾರ್ಟ್‌ಮೆಂಟ್‌ನಲ್ಲಿ ಎಲ್ಲರೂ ಒಟ್ಟಾಗಿ ಕಸ ಸಂಸ್ಕರಣೆಗೆ ಮುಂದಾದರೆ ಅಗತ್ಯ ನೆರವು ನೀಡಲು, ನಿತ್ಯ ಕಸ ಪಡೆಯಲು ಹಸಿರು ಸೇನೆ ಸಿದ್ಧವಿದೆ. ಮನೆ ಮನೆಯಿಂದ ಪುನರ್‌ಬಳಕೆ ಮಾಡಬಹುದಾದ ತ್ಯಾಜ್ಯ ಸಂಗ್ರಹಿಸಲು 5,200ಕ್ಕೂ ಅಧಿಕ ಕಾರ್ಮಿಕರು ಈಗ ‘ಐ ಗಾಟ್‌ ಗಾರ್ಬೇಜ್‌’ ಜತೆ ನೋಂದಣಿ ಮಾಡಿಕೊಂಡಿದ್ದಾರೆ.

ಬಿಟಿಎಂ ಲೇಔಟ್‌, ಬಸವನಗುಡಿ ಮತ್ತಿತರ ಪ್ರದೇಶದಲ್ಲಿ ಈ ಆನ್‌ಲೈನ್‌ ವೇದಿಕೆಯಿಂದ ಸುಮಾರು 3,400 ಅಧಿಕ ಮನೆಗಳ ಕಸ ಸಂಸ್ಕರಣೆ ಮಾಡಲಾಗುತ್ತಿದೆ. ವೆಬ್‌ಸೈಟ್‌ ವಿಳಾಸ: Igotgarbage.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.