ADVERTISEMENT

ಕಸ ವಿಲೇವಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಕಸ ವಿಲೇವಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಆಗ್ರಹ
ಕಸ ವಿಲೇವಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಆಗ್ರಹ   

ಬೆಂಗಳೂರು: ‘ಕಸ ವಿಲೇವಾರಿ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು’ ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಪುರಭವನದ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು.

‘ಬಿಬಿಎಂಪಿಯು ಪ್ರತಿ ವಾರ್ಡಿಗೆ ನಿಗದಿಪಡಿಸಿದ ಕಸ ವಿಲೇವಾರಿ ವಾಹನಗಳಿಗಿಂತ ಕಡಿಮೆ ವಾಹನಗಳ ಮೂಲಕ ಗುತ್ತಿಗೆದಾರರು ಕಸ ಸಾಗಿಸುತ್ತಿದ್ದಾರೆ. ಆದರೆ, ಪಾಲಿಕೆಗೆ ಹೆಚ್ಚು ವಾಹನಗಳ ಲೆಕ್ಕ ನೀಡಿ ಬಾಡಿಗೆ ಪಡೆಯುತ್ತಿದ್ದಾರೆ. ಹೀಗಾಗಿ, ಜಿಪಿಎಸ್‌ ಅಳವಡಿಸಿ ಗುತ್ತಿಗೆದಾರರ ಅಕ್ರಮಕ್ಕೆ ಕಡಿವಾಣ ಹಾಕಬೇಕು’ ಎಂದು ತ್ಯಾಜ್ಯ ನಿರ್ವಹಣಾ ತಜ್ಞರ ಸಮಿತಿಯ ಸದಸ್ಯ ಎನ್.ಎಸ್.ರಮಾಕಾಂತ್ ಒತ್ತಾಯಿಸಿದರು.

‘ನಗರದಲ್ಲಿ 32 ಸಾವಿರ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ದಾಖಲೆಗಳಲ್ಲಿವೆ. ಆ ಪೈಕಿ 22 ಸಾವಿರ ಮಂದಿಯಷ್ಟೇ ಕೆಲಸ ಮಾಡುತ್ತಿದ್ದಾರೆ. ಉಳಿದವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರ ವೇತನವನ್ನು ಗುತ್ತಿಗೆದಾರರು ಕಬಳಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

‘ಕಸ ನಿರ್ವಹಣೆ ಬಗ್ಗೆ ಯಾವುದೇ ಸಲಹೆಗಳನ್ನು ನೀಡಿದರೂ, ಅವುಗಳನ್ನು ಅನುಸರಿಸಲು ಗುತ್ತಿಗೆದಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಅವರು ನಗರದಲ್ಲಿ ಕಸ ರಾಶಿ ಬೀಳುವಂತೆ ಮಾಡುತ್ತಿದ್ದಾರೆ. ಸಮಸ್ಯೆಗೆ ಗುತ್ತಿಗೆದಾರರೇ ನೇರ ಕಾರಣ’ ಎಂದು ದೂರಿದರು.

‘ಸರಿಯಾಗಿ ಕಸ ನಿರ್ವಹಣೆ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಯಾವುದೇ ಟೆಂಡರ್‌ಗಳಲ್ಲಿ ಭಾಗವಹಿಸದಂತೆ ಅವರಿಗೆ ನಿರ್ಬಂಧ ಹೇರಬೇಕು. ತಜ್ಞರು ನೀಡುವ ಸಲಹೆಗಳನ್ನು ಪಾಲಿಕೆಯ ಎಲ್ಲ ಸದಸ್ಯರು ಬೆಂಬಲಿಸಬೇಕು’ ಎಂದು ಹೇಳಿದರು.

***

ಎಲ್ಲ ಪೌರಕಾರ್ಮಿಕರಿಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಬೇಕು. ಕಾರ್ಮಿಕರ ಬ್ಯಾಂಕಿನ ಖಾತೆಗಳಿಗೆ ನೇರವಾಗಿ ವೇತನ ವರ್ಗಾಯಿಸಬೇಕು
– ಎನ್.ಎಸ್.ರಮಾಕಾಂತ್, ತ್ಯಾಜ್ಯ ನಿರ್ವಹಣಾ ತಜ್ಞರ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.