ADVERTISEMENT

ಕಾಂಗ್ರೆಸ್ ಜೊತೆ ಮೈತ್ರಿಗೆ ದೇವೇಗೌಡ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:34 IST
Last Updated 1 ಸೆಪ್ಟೆಂಬರ್ 2015, 19:34 IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ತಮ್ಮ ಪಕ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಅಡ್ಡಿಯಿಲ್ಲ, ಬಿಜೆಪಿ ಜೊತೆ ಮಾತುಕತೆ ಇಲ್ಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮಂಗಳವಾರ ಪ್ರಕಟಿಸಿದರು.

‘ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ಸೇರಿ, ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದ ಅವ್ಯವಹಾರಗಳನ್ನು ಸರಿಪಡಿಸುವುದಾದರೆ ನನ್ನ ತಕರಾರಿಲ್ಲ. ಆದರೆ ನಮ್ಮ ಪಕ್ಷದವರು ಯಾವುದೇ ಸ್ಥಾನಕ್ಕೆ ಚೌಕಾಶಿ ಮಾಡಬಾರದು, ಜೆಡಿಎಸ್‌ನ ಅಸ್ತಿತ್ವ ಉಳಿಸಿಕೊಂಡು ಮುಂದುವರಿಯಬೇಕು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಮೈತ್ರಿ ವಿಚಾರದಲ್ಲಿ ನಮ್ಮ ಮೊದಲ ಆದ್ಯತೆ ಕಾಂಗ್ರೆಸ್’ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ ಮಾರನೆಯ ದಿನವೇ ದೇವೇಗೌಡರು ಈ ಹೇಳಿಕೆ ನೀಡಿದ್ದಾರೆ.

‘ಮೈತ್ರಿ ಕುರಿತು ಕಾಂಗ್ರೆಸ್‌ ಮುಖಂಡರು ನನ್ನ ಬಳಿ ಬಂದು ಮಾತುಕತೆ ನಡೆಸುವ ಅಗತ್ಯ ಇಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ (ಕುಮಾರಸ್ವಾಮಿ) ಜೊತೆ ಮಾತನಾಡಿದರೆ ಸಾಕು. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಯಾವುದೇ ಮುಖಂಡರು ಮೈತ್ರಿ ವಿಚಾರವಾಗಿ ಇದುವರೆಗೆ ತಮ್ಮನ್ನು ಸಂಪರ್ಕಿಸಿಲ್ಲ. ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡರು ಭೇಟಿಯಾಗಲು ಬಂದಿದ್ದರು, ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಪರೇಷನ್ ಕಮಲದ ಭೀತಿ: ‘ಜೆಡಿಎಸ್‌ನ 5–6 ಪಾಲಿಕೆ ಸದಸ್ಯರನ್ನು ಸೆಳೆದುಕೊಳ್ಳುವ ಶಕ್ತಿ ಇದೆ ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳಿದ್ದು ನನಗೆ ಗೊತ್ತಾಯಿತು. ಆ ಸಂದರ್ಭದಲ್ಲಿ ನಮ್ಮ ಪಕ್ಷದ ಶಾಸಕರು, ಪಾಲಿಕೆ ಸದಸ್ಯರನ್ನು ರೆಸಾರ್ಟ್‌ಗೆ ಕರೆದೊಯ್ಯುವ ಪ್ರಸ್ತಾಪ ಮಂಡಿಸಿದರು. ಅದಕ್ಕೆ ನಾನು ಒಪ್ಪಿದೆ’ ಎಂದು ದೇವೇಗೌಡ ಹೇಳಿದರು.

2008ರಲ್ಲಿ ಬಿಜೆಪಿಯವರು ‘ಆಪರೇಷನ್ ಕಮಲ’ದ ಹೆಸರಿನಲ್ಲಿ ವಿರೋಧ ಪಕ್ಷಗಳ ಶಾಸಕರನ್ನು ಸೆಳೆದಿದ್ದು ನೆನಪಿನಲ್ಲಿತ್ತು. ಹಾಗಾಗಿ, ಪಕ್ಷ ಉಳಿಸಿಕೊಳ್ಳಲು ಆದ್ಯತೆ ನೀಡಿ ಎಂದು ಮುಖಂಡರಿಗೆ ಸೂಚಿಸಲಾಯಿತು ಎಂದರು.

ಉಪ ಮೇಯರ್, ಸಮಿತಿ ಸದಸ್ಯತ್ವ
ಪಾಲಿಕೆಯಲ್ಲಿ ಜೆಡಿಎಸ್‌ನ ಸಂಖ್ಯಾಬಲ ಆಧರಿಸಿ ಕೆಲವು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ, ಸದಸ್ಯತ್ವ ಸಿಕ್ಕೇ ಸಿಗುತ್ತದೆ. ಇದು ಪಕ್ಷದ ಹಕ್ಕು ಎಂದು ದೇವೇಗೌಡ ಸ್ಪಷ್ಟಪಡಿಸಿದರು.

‘ಉಪ ಮೇಯರ್ ಸ್ಥಾನಕ್ಕೆ ಬೇಡಿಕೆ ಇಡುತ್ತೀರಾ?’ ಎಂದು ಪ್ರಶ್ನಿಸಿದಾಗ, ‘ಯಾವುದೇ ಸ್ಥಾನ ಅಪೇಕ್ಷಿಸುವುದಿಲ್ಲ’ ಎಂದರು. ‘ಕಾಂಗ್ರೆಸ್ಸಿನವರೇ ಕೊಟ್ಟರೆ ಒಪ್ಪುವಿರಾ?’ ಎಂದು ಕೇಳಿದಾಗಲೂ, ‘ನಾವಾಗಿ ಸ್ಥಾನ ಕೇಳುವುದಿಲ್ಲ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT