ADVERTISEMENT

ಕಾಡುವ ದುರ್ನಾತ; ಕುಟುಕುವ ಸೊಳ್ಳೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2015, 19:52 IST
Last Updated 1 ಫೆಬ್ರುವರಿ 2015, 19:52 IST

ಮಹದೇವಪುರ: ವರ್ತೂರು ಕೆರೆಗೆ ಇತ್ತೀಚಿನ ದಿನಗಳಲ್ಲಿ ಹೇರಳ ಪ್ರಮಾಣದಲ್ಲಿ ರಾಸಾಯನಿಕ ತ್ಯಾಜ್ಯ ಬಂದು ಸೇರುತ್ತಿದ್ದು ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ.

ಕೆರೆಯ ಸುತ್ತಮುತ್ತಲಿನ ಊರುಗಳಾದ ರಾಮಗೊಂಡ ನಹಳ್ಳಿ, ಸೊರಹುಣಸೆ, ಬಳಗೆರೆ, ಪಣತ್ತೂರು, ಮಧು ರಾನಗರ, ಸಿದ್ದಾಪುರ, ವರ್ತೂರು, ವೈಟ್‌ಫೀಲ್ಡ್‌, ಹಗದೂರು, ಇಮ್ಮಡಿಹಳ್ಳಿ, ನಾಗೊಂಡನಹಳ್ಳಿ ಗ್ರಾಮದ ನಿವಾಸಿಗಳನ್ನು ದುರ್ನಾತ ಕಾಡುತ್ತಿದೆ. ದಿನವೂ ಸಂಜೆಯಾ ಗುತ್ತಲೇ ಸೊಳ್ಳೆಗಳ ಹಾವಳಿಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಹಲವರು ಅಸ್ತಮಾ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಗ್ರಾಮಸ್ಥರು ನೋವು ತೋಡಿಕೊಳ್ಳುತ್ತಾರೆ.

ಕೆರೆಯ ಕಡೆಯಿಂದ ತಣ್ಣನೆಯ ಗಾಳಿಯೊಂದಿಗೆ ದುರ್ನಾ ತವೂ ಬರುತ್ತದೆ. ಮನೆಯಲ್ಲಿ ಹಗಲು ವೇಳೆಯ ಲ್ಲಿಯೂ ಸಹ ಸೊಳ್ಳೆಬತ್ತಿಯನ್ನು ಅಂಟಿಸಿಕೊಂಡು ಇರಬೇ ಕಾದ ಸ್ಥಿತಿ ನಮ್ಮದು ಎಂದು ವರ್ತೂರಿನ ಬಳಗೆರೆ ರಸ್ತೆಯ ನಿವಾಸಿ ಪಿ.ವಿ. ಮಂಜುಳಾ ಹೇಳುತ್ತಾರೆ.

ಊರಿನಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ರೈತರು ಹೆಚ್ಚಿದ್ದಾರೆ. ಹಸುಗಳ ರಕ್ತವನ್ನೂ ಸಹ ಹೀರುವ ಸೊಳ್ಳೆಗಳಿಂದ ರಕ್ಷಿಸಲು ಹಸುಗಳಿಗೂ ಸೊಳ್ಳೆ ಪರದೆಯನ್ನು ಬಳಸಬೇಕಿದೆ. ಆದರೆ ಅನೇಕ ಹಸುಗಳು ಪರದೆಗಳಿಗೆ ಒಗ್ಗಿಕೊಳ್ಳುವುದಿಲ್ಲ. ಹೀಗಾಗಿ ಹಸುಗಳ ಕೊಟ್ಟಿಗೆಯಲ್ಲಿಯೂ ಸೊಳ್ಳೆ ಬತ್ತಿಯನ್ನು ಉರಿಸಲೇಬೇಕಾದ ಅನಿವಾರ್ಯತೆ ಇದೆ ಎಂದು ರೈತ ಮುನಿರಾಜಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

ಹಸುಗಳ ಮೇವಿಗಾಗಿ ಕೆರೆಯಲ್ಲಿ ಬೆಳೆಯುವ ಹೊನಗೊನೆ ಸೊಪ್ಪನ್ನು ಅವಲಂಬಿಸಿದ್ದೆವು. ವಾರಕ್ಕೆ ಎರಡು ಬಾರಿ ಕೆರೆಗೆ ಹೋಗಿ ಕೆರೆಯ ದಂಡೆಯಲ್ಲಿ ಬೆಳೆದ ಸೊಪ್ಪನ್ನು ಕೊಯ್ದು ಕೊಂಡು ತರುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಕೆರೆಗೆ ಅತಿಯಾಗಿ ರಾಸಾಯನಿಕ ಸೇರುತ್ತಿದೆ. ಇದರಿಂದ ಮೇವಿನ ಸೊಪ್ಪು ಬೆಳೆಯದಂತಾಗಿದೆ. ಬೆಳೆದಿರುವ ಸೊಪ್ಪು ಕಪ್ಪಗಾಗಿ ಒಣಗಿ ಹೋಗುತ್ತಿದೆ ಎಂದು ಅವರು ಹೇಳುತ್ತಾರೆ.

‘ಈ ಮೊದಲು ಕೆರೆಯ ನೀರಿನಲ್ಲಿ ದನ, ಕರುಗಳ ಮೈಯನ್ನು ತೊಳೆಯಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೆರೆಯ ನೀರಿನಲ್ಲಿ ದನ, ಕರುಗಳ ಮೈ ತೊಳೆಯಲು ಮನಸ್ಸು ಬರುವುದಿಲ್ಲ. ಕೆರೆ ನೀರಿಗೆ ಒಮ್ಮೆ ಕೈಹಾಕಿದ ಬಳಿಕ ಐದಾರು ಬಾರಿ ಸಾಬೂನಿಂದ ತೊಳೆದುಕೊಂಡರೂ ದುರ್ವಾಸನೆ ಹೋಗುವುದಿಲ್ಲ ಎನ್ನುತ್ತಾರೆ ಮತ್ತೊಬ್ಬ ರೈತ ಶ್ರೀನಿವಾಸ್‌.
ಕೆರೆಯ ಪಶ್ಚಿಮ ಭಾಗದ ರಾಮಗೊಂಡನಹಳ್ಳಿಯಲ್ಲಿನ ಬಹುತೇಕ ಎಲ್ಲಾ ಅಪಾರ್ಟ್‌ಮೆಂಟ್‌ಗಳಿಂದ ದಿನವೂ ಹರಿದು ಬರುವ ಕೊಳಕು ನೀರು ಕೆರೆಯನ್ನು ಸೇರುತ್ತಿದೆ. ಹೀಗಾಗಿ ಹಗದೂರು, ನಾಗೊಂಡನಹಳ್ಳಿ ಗ್ರಾಮಗಳ ಹೊರವಲಯದ ಗದ್ದೆಗಳ ನಡುವೆ ಹರಿದು ಹೋಗುವ ಕೆರೆ ಕೋಡಿ ನೀರು ದುರ್ವಾಸನೆಯಿಂದ ಕೂಡಿರುತ್ತದೆ.

‘ಹದಿನೈದು ವರ್ಷಗಳ ಹಿಂದೆ ಕೆರೆಯಲ್ಲಿ ಶುದ್ಧವಾದ ನೀರಿತ್ತು. ಆ ನೀರಿನಿಂದ ಸಮೃದ್ಧವಾಗಿ ತರಕಾರಿ ಬೆಳೆಯನ್ನು ಬೆಳೆಯಲಾಗುತ್ತಿತ್ತು. ಆದರೆ ಈಗ ಯಾವೊಬ್ಬ ರೈತರೂ ತರಕಾರಿಯನ್ನು ಬೆಳೆಯುತ್ತಿಲ್ಲ’ ಎಂದು ಮುನಿರಾಜು ಹೇಳುತ್ತಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಕೆರೆಯಲ್ಲಿನ ಸಾವಿರಾರು ಮೀನುಗಳು ಸತ್ತು ಹೋದವು. ಅಂದಿನಿಂದ ಇದುವರೆಗೂ ಯಾವುದೇ ಬಗೆಯ ಮೀನುಗಳು ಬದುಕುತ್ತಿಲ್ಲ. ದಿನಬೆಳ ಗಾದರೆ ಕೆರೆಯಲ್ಲಿ ಕಣ್ಣಿಗೆ ಬೀಳುತ್ತಿದ್ದ ನೀರು ಕಾಗೆ, ನೀರು ಕೋಳಿ, ಸಣ್ಣ–ದೊಡ್ಡ ಬಾತು ಕೋಳಿ, ಬೆಳ್ಳಕ್ಕಿ ಇತ್ತೀಚಿನ ದಿನಗಳಲ್ಲಿ ಕಾಣುತ್ತಿಲ್ಲ ಎಂದು ಪಕ್ಷಿಪ್ರಿಯ ವಿ.ಎಸ್‌. ಸಂತೋಷಕುಮಾರ್‌ ಬೇಸರ ವ್ಯಕ್ತಪಡಿಸುತ್ತಾರೆ.

ಭೂಗಳ್ಳರಿಂದ ಒತ್ತುವರಿ: ಕೆರೆ ಎಲ್ಲಾ ದಿಕ್ಕುಗಳಿಂದಲೂ ಒತ್ತುವರಿಯಾಗಿದೆ. ಕೆರೆಯ ದಂಡೆಯನ್ನು ಹಂತ ಹಂತವಾಗಿ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುತ್ತಲೇ ಇರುವ ಭೂಗಳ್ಳರು ಕೆರೆಗೆ ಹಾಕಲಾಗಿರುವ ತಂತಿ ಬೇಲಿಯನ್ನು ಕಿತ್ತು ಹಾಕಿದ್ದಾರೆ. ಅಕ್ರಮವಾಗಿ ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ. ಈ ಅಕ್ರಮ  ಬೆಳವಣಿಗೆಯಿಂದಾಗಿ ಕೆರೆಯ ಸುತ್ತಳತೆಯೂ ಕಡಿಮೆಯಾಗುತ್ತಿದೆ ಎಂದು ಹಲವರು ದೂರುತ್ತಾರೆ.

ಕೆರೆ ಒತ್ತುವರಿ ಆಗುತ್ತಿರುವ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅಕ್ರಮ ಒತ್ತುವರಿಗೆ ಕಡಿವಾಣ ಬಿದ್ದಿಲ್ಲ ಎಂದು ವೆಂಕಟೇಶ ದೂರುತ್ತಾರೆ. ರಾಮಗೊಂಡನಹಳ್ಳಿಯ ಮುಖಂಡರೊಬ್ಬರು ಕೆರೆಯ ದಂಡೆ ಮೇಲಿನ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಬಡಾವಣೆ ಮಾಡಲು ಹೊರಟಿದ್ದು, ಇದಕ್ಕಾಗಿ ಕೆರೆಯ ಭೂಮಿಯಲ್ಲಿ ಅಗಲವಾದ ರಸ್ತೆಯನ್ನು ನಿರ್ಮಿಸುತ್ತಿದ್ದಾರೆ. ಅಧಿಕಾರಿಗಳಿಗೆ ಹೇಳಿದರೂ ಕಿವಿಗೊಡುತ್ತಿಲ್ಲ ಎಂದು ಜನ ಹೇಳುತ್ತಾರೆ. 

– ಹ.ಸ. ಬ್ಯಾಕೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.