ADVERTISEMENT

ಕಾನೂನು ಉಲ್ಲಂಘಿಸಿ ಶಾಲೆ ನಡೆಸಲು ಅನುಮತಿ: ಹೈಕೋರ್ಟ್‌ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 20:23 IST
Last Updated 24 ಏಪ್ರಿಲ್ 2014, 20:23 IST

ಬೆಂಗಳೂರು: ನಗರದ ಎಸ್‌.ಆರ್‌. ಬಡಾವಣೆಯಲ್ಲಿ ಶಾಲೆಯೊಂದಕ್ಕೆ ಕಾನೂನು ಉಲ್ಲಂಘಿಸಿ ಅನುಮತಿ ನೀಡಲಾಗಿದೆ ಎಂದು ದೂರಿ ಸೇಂಟ್‌ ಜವೇರಿಯಾ ಇಂಗ್ಲಿಷ್‌ ಪ್ರೌಢಶಾಲೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರು ಶಿಕ್ಷಣ ಇಲಾಖೆಗೆ ನೋಟಿಸ್‌ ಜಾರಿಗೆ ಗುರುವಾರ ಆದೇಶಿಸಿದ್ದಾರೆ.

ಎಸ್‌.ಆರ್‌. ಬಡಾವಣೆಯಲ್ಲಿ ಇಸ್ಲಾಮಿಕ್‌ ಉರ್ದು ಕಿರಿಯ ಪ್ರಾಥಮಿಕ ಶಾಲೆ ಕಾನೂನು ಮೀರಿ ತಲೆ ಎತ್ತಿದ್ದರ ಬಗ್ಗೆ ಇಲಾಖೆಗೆ ದೂರು ನೀಡಲಾಗಿತ್ತು. ಜೊತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೂ ದೂರು ನೀಡಲಾಯಿತು. ದೂರಿನ ಬಗ್ಗೆ ಪರಿಶೀಲಿಸುವಂತೆ ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ವಿಭಾಗದ ಉಪ ನಿರ್ದೇಶಕರಿಗೆ ಸೂಚಿಸಿದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಸಚಿವರಿಗೆ ವರದಿ ನೀಡಬೇಕಿದ್ದ ಉಪ ನಿರ್ದೇಶಕರು, ಉರ್ದು ಮಾಧ್ಯಮದ ಹೆಸರಲ್ಲಿ ಶಾಲೆ ನಡೆಸಲು ಅನುಮತಿ ನೀಡಿದ್ದಾರೆ. ಈ ಶಾಲೆ ತನ್ನ ಶಾಲಾ ಕಟ್ಟಡದ ಎದುರಲ್ಲೇ ಇದೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ಆಶಯಕ್ಕೆ ವಿರುದ್ಧ ಎಂದು ಜವೇರಿಯಾ ಶಾಲೆ ಅರ್ಜಿಯಲ್ಲಿ ಹೇಳಿದೆ. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.