ADVERTISEMENT

ಕಾಫಿ ಕುಡಿಸಿ ಒಡವೆ ಕದ್ದಳು!

ಒಂದೇ ಮನೆಯಲ್ಲಿ ಎರಡು ಸಲ ದೋಚಿದ ಕಳ್ಳಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:42 IST
Last Updated 8 ಅಕ್ಟೋಬರ್ 2015, 19:42 IST

ಬೆಂಗಳೂರು: ಕದ್ದ ಓಲೆಗಳನ್ನು ಹಿಂದಿರುಗಿಸುವ ನೆಪದಲ್ಲಿ ವಾಪಸಾದ ಮನೆಗೆಲಸದಾಕೆ, ಮನೆ ಒಡೆಯ ಹಾಗೂ ಅವರ ಕುಟುಂಬ ಸದಸ್ಯರಿಗೆ ಮತ್ತಿನ ಔಷಧ ಬೆರೆಸಿದ ಕಾಫಿ ಕುಡಿಸಿ 30 ಸಾವಿರ ನಗದು ಹಾಗೂ  300 ಗ್ರಾಂ ಚಿನ್ನಾಭರಣ ದೋಚಿದ್ದಾಳೆ.

ಈ ಸಂಬಂಧ ಗಾಯತ್ರಿನಗರ ನಿವಾಸಿ ಕಾಂತಿ ಎಂಬುವರು ದೂರು ಕೊಟ್ಟಿದ್ದಾರೆ.  ಆರು ತಿಂಗಳ ಹಿಂದೆ ಇವರ ಮನೆಗೆ ಕೆಲಸಕ್ಕೆ ಸೇರಿದ ಜನನಿ ಎಂಬಾಕೆ, 20 ದಿನಗಳ ಹಿಂದೆ ಓಲೆಗಳನ್ನು ಕಳವು ಮಾಡಿ ಪರಾರಿಯಾಗಿದ್ದಳು.  ಕಳೆದ ವಾರ ಮತ್ತೆ ಕೆಲಸಕ್ಕೆ ಬಂದ ಆಕೆ, ‘ಹಣದಾಸೆಗೆ ಓಲೆ ಕಳವು ಮಾಡಿದ್ದೆ. ದಯವಿಟ್ಟು ನನ್ನನ್ನು ಕ್ಷಮಿಸಿ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ’ ಎಂದು ಓಲೆ ಹಿಂದಿರುಗಿಸಿದ್ದಳು. ಕದ್ದ ವಸ್ತುಗಳನ್ನು ವಾಪಸ್‌ ಕೊಟ್ಟಿದ್ದರಿಂದ ಕಾಂತಿ ಮತ್ತೆ ಆಕೆಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು.

ಎಂದಿನಂತೆ ಬುಧವಾರ ಬೆಳಿಗ್ಗೆ ಕಾಫಿ ಮಾಡಿದ್ದ ಜನನಿ, ಅದರಲ್ಲಿ ಮತ್ತಿನ ಔಷಧ ಬೆರೆಸಿದ್ದಳು. ನಂತರ ಅದನ್ನು ಕಾಂತಿ, ಅವರ ಪತ್ನಿ ಜಯಲಲಿತಾ, ತಂದೆ ಜಯರಾಮ್ ಹಾಗೂ ಮಗ ರಾಹುಲ್‌ಗೆ ಕುಡಿಯಲು ಕೊಟ್ಟಿದ್ದಳು. ಆ ಕಾಫಿ ಕುಡಿದ ಸ್ವಲ್ಪ ಹೊತ್ತಿನಲ್ಲೇ ನಾಲ್ಕೂ ಮಂದಿ ಪ್ರಜ್ಞೆ ತಪ್ಪಿದರು.

ಆ ನಂತರ ಜನನಿ, ಅಲ್ಮೆರಾದಲ್ಲಿದ್ದ 30 ಸಾವಿರ ನಗದು, 300 ಗ್ರಾಂ ಒಡವೆ ಹಾಗೂ ಅರ್ಧ ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾಳೆ. ಮನೆ ಸಮೀಪವೇ ಕಾಂತಿ ಅವರ ತಮ್ಮನ ಕುಟುಂಬ ನೆಲೆಸಿದೆ. 10 ಗಂಟೆ ಸುಮಾರಿಗೆ ಮನೆಗೆ ಬಂದ ಅವರು, ಅಸ್ವಸ್ಥರಾಗಿ ಬಿದ್ದಿದ್ದ ನಾಲ್ಕೂ ಮಂದಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ಚಿಕಿತ್ಸೆ ನಂತರ ಚೇತರಿಸಿಕೊಂಡ ಕುಟುಂಬ ಸದಸ್ಯರು, ಸಂಜೆ ಮನೆಗೆ ಮರಳಿದಾಗ ಕಳವು ಸಂಗತಿ ಬೆಳಕಿಗೆ ಬಂದಿದೆ. ಕೇರಳ ಮೂಲದ ಜನನಿ, ಕಾಂತಿ ಅವರ ಮನೆಯಲ್ಲೇ ನೆಲೆಸಿದ್ದಳು. ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.