ADVERTISEMENT

ಕಾಮಗಾರಿಗಳ ಶ್ವೇತಪತ್ರ ಹೊರಡಿಸುವೆ

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 20:23 IST
Last Updated 19 ಏಪ್ರಿಲ್ 2015, 20:23 IST
ಕಾಮಗಾರಿಗಳ ಶ್ವೇತಪತ್ರ ಹೊರಡಿಸುವೆ
ಕಾಮಗಾರಿಗಳ ಶ್ವೇತಪತ್ರ ಹೊರಡಿಸುವೆ   

ಹೊಳಲ್ಕೆರೆ: ‘ನಾನು ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು, ನಡೆಯುತ್ತಿರುವ ಕೆಲಸಗಳು, ಬಂದ ಅನುದಾನ, ರೂಪಿಸಿರುವ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸುವೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದರು.

ಪಟ್ಟಣದಲ್ಲಿ ಭಾನುವಾರ ರೂ 1.95 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ನಾನು ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಗ್ರಾಮದಲ್ಲೂ ಒಂದಿಲ್ಲೊಂದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಪ್ರತಿ ಗ್ರಾಮ ಪಂಚಾಯ್ತಿಗೆ ಸುಮಾರು ರೂ 1 ಕೋಟಿ ಅನುದಾನ ನೀಡಿದ್ದೇನೆ. ಮುಂದೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ನನ್ನ ಕೆಲಸಗಳು ಪಾರದರ್ಶಕವಾಗಿರಬೇಕು. ಜನಸಾಮಾನ್ಯರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಶ್ವೇತಪತ್ರ ಹೊರಡಿಸಲು ಸಿದ್ಧನಿದ್ದೇನೆ’ ಎಂದು ಸಚಿವ  ಆಂಜನೇಯ ಹೇಳಿದರು.

ಇದರಿಂದ ಸುಮಾರು 33 ಇಲಾಖೆಗಳ ಮೂಲಕ ನಡೆದಿರುವ ಕೆಲಸಗಳ ವಿವರಗಳನ್ನು ಎಲ್ಲರೂ ಗಮನಿಸಬಹುದು ಎಂದು ಅವರು ಹೇಳಿದರು.

‘ವಿದ್ಯುತ್‌ ಮತ್ತು ನೀರು ಕೊಡಿ ಬೇರೇನೂ ಬೇಡ ಎಂಬುದು ರೈತರ ಬೇಡಿಕೆ. ಇದರಂತೆ ಶಾಶ್ವತ ನೀರಾವರಿ ಒದಗಿಸಲು ಚಿಂತನೆ ನಡೆಸಿದ್ದೇನೆ’ ಎಂದರು.

‘ಹಿರೆಕೆರೆ ಅಭಿವೃದ್ಧಿಗೆ ರೂ 1 ಕೋಟಿ ನೀಡಿದ್ದೇನೆ. ಕೆರೆಯಲ್ಲಿನ ಜಾಲಿಗಿಡಗಳನ್ನು ತೆಗೆಯುವುದು, ಕೋಡಿ ಭದ್ರಪಡಿಸುವುದು. ಕೆರೆ ಒತ್ತುವರಿಯನ್ನು ತೆರವುಗೊಳಿಸಿ, ಗಡಿಯಲ್ಲಿ ಬೇಲಿ ನಿರ್ಮಿಸುವುದು. ಫೀಡರ್‌ ಚಾನಲ್‌ ದುರಸ್ತಿಯ ಕೆಲಸಗಳಿಗೆ ಹಣ ಬಳಸಬೇಕು. ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ತಾಲ್ಲೂಕಿನ ಕೆರೆ ತುಂಬಿಸುವ ಉದ್ದೇಶ ಇದ್ದು, ಅಷ್ಟರೊಳಗೆ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಮಾಡಬೇಕಿದೆ’ ಎಂದರು.

ತಲಾ ರೂ 15 ಲಕ್ಷ ವೆಚ್ಚದ ಆಡನೂರು–ಕುನುಗಲಿ ಫೀಡರ್‌ ಚಾನಲ್‌ ಅಭಿವೃದ್ಧಿ, ಚಿಕ್ಕನಕಟ್ಟೆ, ಸಾಸಲು ಗ್ರಾಮಗಳಲ್ಲಿ ಚೆಕ್‌ಡ್ಯಾಂ, ತಲಾ ರೂ 10 ಲಕ್ಷ ವೆಚ್ಚದ ಬಿ.ದುರ್ಗ, ಶಿವಪುರ, ಚಿಕ್ಕಂದವಾಡಿ, ಸಾದರಹಳ್ಳಿ, ದೇವರ ಹೊಸಹಳ್ಳಿ ಗ್ರಾಮಗಳಲ್ಲಿ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗಳಿಗೂ ಸಚಿವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ನಾನು ಪರ್ಸೆಂಟೇಜ್‌ ಮುಟ್ಟಲ್ಲ
‘ಕಾಮಗಾರಿಯಲ್ಲಿ ಗುಣಮಟ್ಟ ಇರಬೇಕು. ಹಣಕ್ಕೆ ತಕ್ಕಂತೆ ಕಾಮಗಾರಿ ಇರಬೇಕು’ ಎಂದು ಸಚಿವರು ಹೇಳುತ್ತಿದ್ದಂತೆ ಗುತ್ತಿಗೆದಾರರೊಬ್ಬರು ಎದ್ದುನಿಂತು ‘ಎಂಜಿನಿಯರ್‌ಗಳು 5 ಪರ್ಸೆಂಟ್‌ ಕೇಳ್ತಾರೆ ಅದನ್ನು ಮೊದಲು ನಿಲ್ಲಿಸಿ’ ಎಂದರು. ತಕ್ಷಣವೇ ಪ್ರತಿಕ್ರಿಯಿಸಿದ ಸಚಿವರು ‘ಅಯ್ಯೋ ಬಿಡಪ್ಪ, ಪರ್ಸೆಂಟೇಜ್‌ ಈಗ ಮಾಮೂಲಿ. ಪರ್ಸೆಂಟೇಜ್‌ ತಗೊಳ್ಳದೇ ಇರುವವರು ಯಾರಿದ್ದಾರೆ? ನೀವೂ ತಗೋತೀರಿ. ಅಧಿಕಾರಿಗಳೂ ತಗೋತಾರೆ. ರಾಜಕಾರಣಿಗಳಿಗೂ ಕಳಿಸ್ತಾರೆ. ರಾಜಕಾರಣಿಗಳು ಶುದ್ಧಹಸ್ತರಾದರೆ ಮಾತ್ರ ವ್ಯವಸ್ಥೆ ಸುಧಾರಿಸುತ್ತದೆ. ನಾನು ಮಾತ್ರ ಪರ್ಸೆಂಟೇಜ್‌ ಮುಟ್ಟಲ್ಲ’ ಎಂದು ಆಂಜನೇಯ ಹೇಳಿದರು. 

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಸ್‌.ಜೆ.ರಂಗಸ್ವಾಮಿ, ಭಾರತಿ ಕಲ್ಲೇಶ್‌, ಬಿಸಿಎಂ ಅಧಿಕಾರಿ ಮಹೇಶ್‌, ಎಂಜಿನಿಯರ್‌ ರೇಣುಕಾಚಾರ್ಯ, ಮಹೇಶ್ವರಪ್ಪ, ಪಟ್ಟಣ ಪಂಚಾಯ್ತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT