ADVERTISEMENT

ಕಾಮಗಾರಿ ಅಂತೂ ಮುಕ್ತಾಯಕ್ಕೆ ಬಂತು

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:55 IST
Last Updated 21 ಜೂನ್ 2017, 19:55 IST
ಕಾಮಗಾರಿ ಅಂತೂ ಮುಕ್ತಾಯಕ್ಕೆ ಬಂತು
ಕಾಮಗಾರಿ ಅಂತೂ ಮುಕ್ತಾಯಕ್ಕೆ ಬಂತು   

ಬೆಂಗಳೂರು: ಎರಡೂವರೆ ವರ್ಷಗಳಿಂದ ತೆವಳುತ್ತಾ ಸಾಗಿದ್ದ ಮಾಗಡಿ ರಸ್ತೆ ಹಾಗೂ ಸಿದ್ದಯ್ಯ ಪುರಾಣಿಕ್ ರಸ್ತೆ ಜಂಕ್ಷನ್‌ನ ಕೆಳಸೇತುವೆ (ಅಂಡರ್‌ಪಾಸ್‌) ಕಾಮಗಾರಿ ಕೊನೆಗೂ ಪೂರ್ಣಗೊಳ್ಳುವ ಹಂತ ತಲುಪಿದೆ.

ಈ ಯೋಜನೆಯ ಕಾಮಗಾರಿಗೆ 2013ರ ಅಕ್ಟೋಬರ್‌ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದರು. 15 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಬೇಕು ಎಂಬ ಗಡುವು ವಿಧಿಸಿದ್ದರು. ಆದರೆ, ಆ ಕೂಡಲೇ ಕಾಮಗಾರಿಗೆ ಚಾಲನೆ ಸಿಕ್ಕಿರಲಿಲ್ಲ. 2015ರ ಮಾರ್ಚ್‌ ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಕಾಮಗಾರಿ ಕುಂಟುತ್ತಾ ಸಾಗಿತ್ತು. ಇದರಿಂದಾಗಿ ವಾಹನ ಸವಾರರು ಹೆಚ್ಚಿನ ತೊಂದರೆ ಅನುಭವಿಸಿದ್ದರು.

ಆರು ತಿಂಗಳ ಹಿಂದೆ ಮೇಯರ್‌ ಜಿ. ಪದ್ಮಾವತಿ ಸ್ಥಳ ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಬಳಿಕ ಕಾಮಗಾರಿ ವೇಗ ಪಡೆದುಕೊಂಡಿತ್ತು.

ADVERTISEMENT

ಈಗ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಅಂಡರ್‌ಪಾಸ್‌ನಲ್ಲಿ 20 ಮೀಟರ್‌ ರ್‍ಯಾಂಪ್‌ ಹಾಕುವ ಕಾಮಗಾರಿ ಬಾಕಿ ಇದೆ. ಎರಡೂ ಬದಿಯ ಸರ್ವಿಸ್‌ ರಸ್ತೆಗಳನ್ನು ಎತ್ತರಿಸಿ ಡಾಂಬರೀಕರಣ ಮಾಡಬೇಕಿದೆ.

‘ಕಾಮಗಾರಿಯಲ್ಲಿ ಸ್ವಲ್ಪ ವಿಳಂಬವಾಗಿದ್ದು ನಿಜ. ಈ ಮಾರ್ಗದಲ್ಲಿ 40 ಮರಗಳಿದ್ದವು. ಜಲಮಂಡಳಿಯ ಕುಡಿಯುವ ನೀರು ಹಾಗೂ ಒಳಚರಂಡಿ ಮಾರ್ಗಗಳ ಸ್ಥಳಾಂತರ ಮಾಡಬೇಕಿತ್ತು.   ಅಲ್ಲದೆ ಗಟ್ಟಿ ಕಲ್ಲುಗಳಿದ್ದವು. ಇವುಗಳನ್ನು ಒಡೆಯಲು ಅನುಮತಿ ಪಡೆಯಲು ಆರು  ತಿಂಗಳು ಬೇಕಾಯಿತು. ರಾತ್ರಿ ವೇಳೆಯಲ್ಲಷ್ಟೇ ಈ ಕೆಲಸ ಮಾಡಬೇಕಿತ್ತು’ ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ. ನಾಗರಾಜ್‌ ಸಮಜಾಯಿಷಿ ನೀಡಿದರು.

‘ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿತ್ತು. ಇಲ್ಲಿ ಬೆಳಿಗ್ಗೆ 9 ಹಾಗೂ 10ರ ನಡುವೆ 8,021 ಪಿಸಿಯು (ಪ್ಯಾಸೆಂಜರ್‌ ಕಾರ್‌ ಯುನಿಟ್‌) ಹಾಗೂ ಸಂಜೆ 6ರಿಂದ 7ರ ನಡುವೆ 8,195 ಪಿಸಿಯು ಇತ್ತು. ಇನ್ನು ಮುಂದೆ ಸರಾಗ ಸಂಚಾರ ಸಾಧ್ಯವಾಗಲಿದೆ’ ಎಂದರು.

ವಿಜಯನಗರ, ಕೆ.ಎಚ್‌.ಬಿ. ಕಾಲೊನಿ, ಗೋವಿಂದರಾಜನಗರ, ಪ್ರಶಾಂತನಗರ, ಕಾಮಾಕ್ಷಿಪಾಳ್ಯ, ಕಾಲೊನಿ,  ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.