ADVERTISEMENT

ಕಾಮಗಾರಿ ಲೋಪ: ಬತ್ತಿದ ಕೋನಸಂದ್ರ ಕೆರೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 20:15 IST
Last Updated 23 ಏಪ್ರಿಲ್ 2017, 20:15 IST
ನೀರಿಲ್ಲದೆ ಬರಿದಾಗಿರುವ ಕೋನಸಂದ್ರ ಕೆರೆ
ನೀರಿಲ್ಲದೆ ಬರಿದಾಗಿರುವ ಕೋನಸಂದ್ರ ಕೆರೆ   

ಬೆಂಗಳೂರು: ಆ ಕೆರೆಯನ್ನು ಅಭಿವೃದ್ಧಿ ಪಡಿಸಲು ಖರ್ಚು ಮಾಡಿದ್ದು ₹5.5 ಕೋಟಿ. ಆದರೆ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆನೀರು ಕೆರೆಗೆ ಸೇರುತ್ತಿಲ್ಲ. ಇದರಿಂದ ಕೆರೆ ಬತ್ತಿ ಹೋಗಿದೆ.

ಕೆಂಗೇರಿ ಸಮೀಪದ ಕೋನಸಂದ್ರ ಕೆರೆಯ ದುಸ್ಥಿತಿ ಇದು. ಅಭಿವೃದ್ಧಿ ಹೆಸರಿನಲ್ಲಿ ಜೀವಂತವಾಗಿದ್ದ ಕೆರೆಯನ್ನು ಬರಿದಾಗುವಂತೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ 2009–10ನೇ ಸಾಲಿನಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಸುತ್ತಮುತ್ತಲಿನ ಹಳ್ಳಿಗಳ ಇಳಿಜಾರು ಪ್ರದೇಶಗಳಿಂದ ನೀರು ಹರಿಯಲು ಕಾಲುವೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಒತ್ತುವರಿಯನ್ನು ತಪ್ಪಿಸುವುದು ಹಾಗೂ ಜನರ ಓಡಾಟಕ್ಕೆ ಅನುಕೂಲವಾಗುವ ಉದ್ದೇಶದಿಂದ ಕೆರೆಯ ಸುತ್ತಲೂ ಏರಿ ನಿರ್ಮಿಸಲಾಗಿತ್ತು. ಈ ಏರಿಯೇ ಈಗ ಮಾರಕವಾಗಿ ಪರಿಣಮಿಸಿದೆ.

ಸರಾಗವಾಗಿ ಹರಿದು ಬರುತ್ತಿದ್ದ ಮಳೆನೀರಿಗೆ ಏರಿಯು ತಡೆಗೋಡೆಯಂತಿದೆ. ನೆಲಮಟ್ಟದಿಂದ ಮೂರು ಅಡಿ ಎತ್ತರಕ್ಕೆ ಏರಿ ನಿರ್ಮಾಣ ಮಾಡಲಾಗಿದೆ. ಆದರೆ, ನೀರು ಕೆರೆಗೆ ಬಂದು ಸೇರುವ ಜಾಗದಲ್ಲಿ ತೂಬುಗಳನ್ನು ನಿರ್ಮಿಸಿಲ್ಲ. ಇದರಿಂದ ಚಿಟ್ಟುಪಾಳ್ಯ, ವಿನಾಯಕ ಬಡಾವಣೆ, ಕೋನಸಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬಿದ್ದ ಮಳೆನೀರು ಸರಿಯಾಗಿ ಹರಿಯುತ್ತಿಲ್ಲ. ಕೋಡಿಪಾಳ್ಯ, ಶ್ರೀಧರಗುಡ್ಡದ ಕಡೆಯಿಂದ ಬರುವ ನೀರು ಮಾತ್ರ ಕೆರೆಗೆ ಹೋಗುತ್ತಿದೆ.

ವಾಯುವಿಹಾರಿಗಳ ನೆಚ್ಚಿನ ತಾಣ: ‘ಇದು ವಾಯುವಿಹಾರಿಗಳ ನೆಚ್ಚಿನ ತಾಣವಾಗಿತ್ತು. ಅಲ್ಲದೆ, ದರ್ಗಾಕ್ಕೆ ಬರುವ ಭಕ್ತರಿಗೂ ಇಲ್ಲಿನ ಅಹ್ಲಾದಕರ ವಾತಾವರಣ ಇಷ್ಟವಾಗಿತ್ತು. ಆದರೆ, ಈಗ ಕೆರೆ ಬತ್ತಿರುವುದರಿಂದ ದರ್ಗಾಕ್ಕೆ ಬರುವ ಭಕ್ತರ ಸಂಖ್ಯೆಯಲ್ಲೂ ಇಳಿಕೆಯಾಗಿದೆ’ ಎಂದು ಸ್ಥಳೀಯ ನಿವಾಸಿ ಮೆಹಮೂದ್‌ ಹೇಳಿದರು.

ಸ್ಥಳೀಯ ನಿವಾಸಿ ರಾಬರ್ಟ್‌ ಮಾತನಾಡಿ, ‘ಅಭಿವೃದ್ಧಿಯ ಹೆಸರಿನಲ್ಲಿ ಹಳ್ಳ ಕೊಳ್ಳಗಳನ್ನು ನಾಶ ಮಾಡಲಾಗಿದೆ. ಭಾರಿ ಮಳೆ ಬಿದ್ದ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗುತ್ತದೆ. ಜನರ ದೈನಂದಿನ ಚಟುವಟಿಕೆಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ’ ಎಂದು ದೂರಿದರು.

ಕುರಿಗಾಹಿ ರಷೀದ್‌, ‘ಈ ಕೆರೆ ಸದಾ ಮೈದುಂಬಿ ಕಂಗೊಳಿಸುತ್ತಿತ್ತು. ಆದರೆ, ಈಗ ಜಲಮೂಲ ಬರಿದಾಗಿರುವುದನ್ನು ನೋಡಲು ಆಗುತ್ತಿಲ್ಲ. ದನ–ಕರು, ಕುರಿಗಳಿಗೆ ನೀರು ಇಲ್ಲದಂತಾಗಿದೆ’ ಎಂದು ಅಳಲು ತೋಡಿಕೊಂಡರು.

ರಾಜಕಾಲುವೆಗಳು ಮಾಯ
ಕೆರೆ ಸುತ್ತಮುತ್ತ ಬಡಾವಣೆಗಳು ನಿರ್ಮಾಣಗೊಳ್ಳುತ್ತಿವೆ. ಕೆಲವರು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಕಾಲುವೆ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ ಇದೆ. ಸಣ್ಣಪುಟ್ಟ ಝರಿಗಳು ಸಹ ನಾಶವಾಗಿವೆ. ಇದರಿಂದ ನೀರಿನ ನೈಸರ್ಗಿಕ ಹರಿವಿಗೆ ಧಕ್ಕೆ ಉಂಟಾಗಿದೆ.
– ಕೆ.ಸಿ. ರಂಗಸ್ವಾಮಿ

*
ಕೆರೆ ಪಕ್ಕದಲ್ಲೇ ಚರಂಡಿ ಕಾಮಗಾರಿ ನಡೆಯುತ್ತಿದೆ. ಕಾಲುವೆಯ ನೀರು ಕೆರೆಗೆ ಹೋಗುವಂತೆ ತೂಬು ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ.
–ಆರ್ಯ ಶ್ರೀನಿವಾಸ್‌,
ಪಾಲಿಕೆ ಸದಸ್ಯ, ಹೆಮ್ಮಿಗೆಪುರ ವಾರ್ಡ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.