ADVERTISEMENT

ಕಾರು ಪೂಲಿಂಗ್‌ಗೆ ಜಾಲತಾಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 20:22 IST
Last Updated 26 ಜನವರಿ 2015, 20:22 IST

ಬೆಂಗಳೂರು: ನಗರದಲ್ಲಿ ಸಮಾನ ಮಾರ್ಗದಲ್ಲಿ  ಸಂಚರಿಸುವ ಪ್ರಯಾಣಿ­ಕ­ರಿಗೆ ನೆರವಾಗಲು ಸಾಮಾಜಿಕ ಜಾಲ­ತಾಣ­ವೊಂದು ಆರಂಭವಾಗಿದೆ. ಈ ಜಾಲ­ತಾಣದ ನೆರವನ್ನು ಪಡೆದು ಜನರು ಕಾರು ಪೂಲಿಂಗ್‌ ಮಾದರಿಯಲ್ಲೇ ಪ್ರಯಾಣ ಮಾಡಬಹುದು.

ಈ ಜಾಲ ತಾಣದ ಹೆಸರು letsride.in. ಜನರು ಜಾಲತಾಣದ ನೆರವಿನಿಂದ ತಮ್ಮ ಮಾರ್ಗದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಹುಡುಕಿ­ಕೊಳ್ಳಬಹುದು ಹಾಗೂ ಅವರ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಬಹುದು.

ಪುಣೆ, ಮುಂಬೈ, ಹೈದರಾಬಾದ್, ನವದೆಹಲಿಯಲ್ಲಿ ಈ ತಾಣ ಈಗಾಗಲೇ  ಪ್ರಸಿದ್ಧವಾಗಿದೆ. ಬೆಂಗಳೂರಿನಲ್ಲೂ ಪ್ರಖ್ಯಾತಿ ಗಳಿಸುತ್ತಿದೆ. ಈ ತಾಣಕ್ಕೆ ಈಗಾಗಲೇ 3 ಸಾವಿರ ಮಂದಿ ಸೇರ್ಪಡೆಯಾಗಿದ್ದಾರೆ. ಜನರಿಗೆ ನೆರವಾಗಲು ಮೂರು ವಾರಗಳಲ್ಲಿ ಮೊಬೈಲ್‌ ಅಪ್ಲಿಕೇಶನ್‌ ಹೊರತರಲು ಸಿದ್ಧತೆ ನಡೆದಿದೆ.

‘ನಗರದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಗಂಟೆಗಟ್ಟಲೆ ಒದ್ದಾಡುತ್ತಿದ್ದಾರೆ. ಇಂತಹ ಜನರಿಗೆ ನೆರವಾಗಲು ಜಾಲತಾಣ ರೂಪಿಸಲಾಗಿದೆ. ಜನರು ಕಾರು, ಬೈಕ್‌ ಅಥವಾ ಆಟೊದಲ್ಲಿ ಜತೆಯಲ್ಲಿ ಪ್ರಯಾಣಿಸಬಹುದು’ ಎಂದು ಜಾಲತಾಣದ ಸಂಸ್ಥಾಪಕರಲ್ಲಿ ಒಬ್ಬರಾದ ರಾಜ್‌ಕುಮಾರ್‌ ಮುಂಡೇಲ್‌ ತಿಳಿಸಿದರು.

‘ಈ ಸಂಬಂಧ ಸಂಚಾರ ಪೊಲೀಸರ ನೆರವು ಪಡೆಯಲು ಯೋಜಿಸಲಾಗಿದೆ. ಇತ್ತೀಚೆಗೆ ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ) ಬಿ.ದಯಾನಂದ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಾಗಿದೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, 9049351066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.