ADVERTISEMENT

‘ಕಾಲಮಿತಿಯಲ್ಲಿ ಪೂರ್ಣಗೊಳಿಸಿ’

ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:35 IST
Last Updated 24 ಜುಲೈ 2017, 19:35 IST
‘ಕಾಲಮಿತಿಯಲ್ಲಿ ಪೂರ್ಣಗೊಳಿಸಿ’
‘ಕಾಲಮಿತಿಯಲ್ಲಿ ಪೂರ್ಣಗೊಳಿಸಿ’   

ಬೆಂಗಳೂರು:  ನಗರದ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನು ಮುಂದಿನ ವರ್ಷದ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಜಲಮಂಡಳಿ, ನಮ್ಮ ಮೆಟ್ರೊ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಸಂಸ್ಥೆ ಮತ್ತು ಇಲಾಖೆಗಳಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯ ವಿವರಗಳನ್ನು ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆಯಲ್ಲಿ  ಅವರು ಪಡೆದರು.

‘₹7,300 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿಯವರೆಗೆ ₹3,000 ಕೋಟಿ ಖರ್ಚು ಮಾಡಲಾಗಿದೆ’ ಎಂದು ಅಧಿಕಾರಿಗಳು ವಿವರ ನೀಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಕೆಲವು ಕಾಮಗಾರಿಗಳು ವಿಳಂಬವಾಗಿವೆ. ಅವೆಲ್ಲವನ್ನೂ ತ್ವರಿತಗೊಳಿಸಿ, ನಮ್ಮ ಸರ್ಕಾರದ ಅವಧಿ ಮುಗಿಯುವ ಮುನ್ನವೇ ಎಲ್ಲ ಯೋಜನೆಗಳನ್ನು ಮುಗಿಸಬೇಕು.

ಯಾವುದೇ ಕಾರಣ ನೀಡಿ ವಿಳಂಬ ಮಾಡುವುದು ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದರು. ಬೆಂಗಳೂರು ನಗರದಲ್ಲಿರುವ ಕೆರೆಗಳ ಸ್ಥಿತಿಗತಿ, ಅವುಗಳನ್ನು  ಪುನರುಜ್ಜೀವನಗೊಳಿಸುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಅವರು, ‘ಕೆರೆ ಅಭಿವೃದ್ಧಿ ಯೋಜನೆಗಳ ವಿಷಯದಲ್ಲಿ  ನಿರಾಸಕ್ತಿ ಸಲ್ಲದು’ ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ  ಬಯೊಕಾನ್ ಸಂಸ್ಥೆ ಅಧ್ಯಕ್ಷೆ ಕಿರಣ್ ಮುಜುಂದಾರ್‌ ಷಾ, ‘ಸರ್ಕಾರದ ಯೋಜನೆಗಳಿಂದ ಬೆಂಗಳೂರಿನ ಅಭಿವೃದ್ಧಿಯ ವೇಗ ಹೆಚ್ಚಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಸುಭಾಷ್ಚಂದ್ರ ಖುಂಟಿಆ, ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ.ಎಸ್.ಪಾಟೀಲ, ಸಿದ್ದಯ್ಯ, ಜನಾಗ್ರಹದ ಸ್ವಾತಿ ರಾಮನಾಥನ್ ಮತ್ತು ರೇವತಿ ಅಶೋಕ ಭಾಗವಹಿಸಿದ್ದರು.

***

‘ಉಕ್ಕಿನ ಸೇತುವೆ ನಿರ್ಮಿಸಿಯೇ ಸಿದ್ಧ’
‘ಯಾರೋ ನಾಲ್ಕೈದು ಜನ ವಿರೋಧ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಶಿವಾನಂದ ವೃತ್ತದ ಬಳಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆ ಕೈಬಿಡಲು ಸಾಧ್ಯವಿಲ್ಲ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಪ್ರತಿಪಾದಿಸಿದರು.

ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಯೋಜನೆಗಾಗಿ ಯಾವುದೇ ಮರಗಳನ್ನು ಕಡಿಯುತ್ತಿಲ್ಲ, ಪರಿಸರವೂ ಹಾಳಾಗುವುದಿಲ್ಲ. ಅಲ್ಲಿ ಸೇತುವೆ ನಿರ್ಮಿಸಿಯೇ ಸಿದ್ಧ’ ಎಂದರು.

‘ಉಕ್ಕಿನ ಸೇತುವೆ ನಿರ್ಮಾಣವಾಗುವ ಪ್ರದೇಶದ ಜನರು ನೀಡಿದ ಸಲಹೆಗಳನ್ನೂ ಸರ್ಕಾರ ಮುಕ್ತವಾಗಿ ಸ್ವೀಕರಿಸುತ್ತದೆ’ ಎಂದು ತಿಳಿಸಿದರು.
‘30 ಅಡಿ ರಸ್ತೆಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಬಗ್ಗೆ ಗೊಂದಲ ಅನಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.