ADVERTISEMENT

ಕಾಲ್‌ ಸೆಂಟರ್‌ ಉದ್ಯೋಗಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 20:11 IST
Last Updated 27 ಏಪ್ರಿಲ್ 2015, 20:11 IST

ಬೆಂಗಳೂರು: ಕಾಲ್‌ ಸೆಂಟರ್‌ ಉದ್ಯೋಗಿ ಸುಮಾ ಮರ್ಸಿ (28) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಣಸವಾಡಿ ಸಮೀಪದ ಮಂಗಳಾಲೇಔಟ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೂಲತಃ ಧಾರವಾಡದ ಸುಮಾ, ನಗರದ ಎಂಫಾಸಿಸ್‌ ಕಾಲ್‌ ಸೆಂಟರ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಅವರು ನಾಲ್ಕು ವರ್ಷಗಳ ಹಿಂದೆ ಹುಬ್ಬಳ್ಳಿಯ ಕಿರಣ್‌ ಎಂಬುವರನ್ನು ವಿವಾಹವಾಗಿದ್ದರು. ಅವರಿಗೆ ಎರಡು ವರ್ಷದ ಮಗ ಇದ್ದಾನೆ.

ಪತಿಯೊಂದಿಗೆ ಪಿಕ್‌ನಿಕ್‌ ಹೋಗಲು ಬಯಸಿದ್ದ ಸುಮಾ, ಜತೆಗೆ ಪತಿಯ ತಂಗಿಯ ಮಕ್ಕಳನ್ನು ಕರೆದೊಯ್ಯುವುದಾಗಿ ಅವರ ಅತ್ತೆಯನ್ನು ಕೇಳಿದ್ದರು. ಅದಕ್ಕೆ ಅವರ ಅತ್ತೆ ಬೇಡ ಎಂದಿದ್ದರು. ಈ ಕಾರಣಕ್ಕೆ ಅವರ ನಡುವೆ ಜಗಳವಾಗಿತ್ತು. ರಾತ್ರಿ ಎಲ್ಲರೂ ಮಲಗಿದ ಮೇಲೆ ಸುಮಾ ಅವರು ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಅಳಿಯ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಮಗಳು ಮುಂಗೋಪಿಯಾಗಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ದುಃಖವಾಗುತ್ತಿದೆ’ ಎಂದು ಸುಮಾ ಅವರ ತಂದೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಾಣಸವಾಡಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಮತ್ತೊಂದು ಪ್ರಕರಣ: ಯಲಹಂಕ ನ್ಯೂಟೌನ್‌ನಲ್ಲಿ ಭಾನುವಾರ ಸಂಜೆ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಂಜಿತಾ (18) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ರಂಜಿತಾ ನೇಣು ಹಾಕಿಕೊಂಡಿದ್ದಾಳೆ. ಆಕೆಯ ತಾಯಿ ಕೆಲಸ ಮುಗಿಸಿಕೊಂಡು ರಾತ್ರಿ ವಾಪಸ್‌ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು  ಪೊಲೀಸರು ತಿಳಿಸಿದ್ದಾರೆ. ಯಲಹಂಕ ನ್ಯೂಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.