ADVERTISEMENT

ಕಾವೇರಿ ಥಿಯೇಟರ್ ಜಂಕ್ಷನ್‌ ಕೆಳಸೇತುವೆ ಸಂಚಾರ ಬಂದ್‌

​ಪ್ರಜಾವಾಣಿ ವಾರ್ತೆ
Published 29 ಮೇ 2016, 20:23 IST
Last Updated 29 ಮೇ 2016, 20:23 IST
ಕಾವೇರಿ ಥಿಯೇಟರ್‌ ಜಂಕ್ಷನ್‌್ ಕೆಳಸೇತುವೆಯಲ್ಲಿ ಸಂಚಾರ ನಿರ್ಬಂಧಿಸಿ ಸಂಚಾರ ಪೊಲೀಸರು ನಾಮಫಲಕ ಹಾಕಿರುವುದು
ಕಾವೇರಿ ಥಿಯೇಟರ್‌ ಜಂಕ್ಷನ್‌್ ಕೆಳಸೇತುವೆಯಲ್ಲಿ ಸಂಚಾರ ನಿರ್ಬಂಧಿಸಿ ಸಂಚಾರ ಪೊಲೀಸರು ನಾಮಫಲಕ ಹಾಕಿರುವುದು   

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಕಾವೇರಿ ಥಿಯೇಟರ್‌ ಜಂಕ್ಷನ್‌್ ಬಳಿಯ ಕೆಳಸೇತುವೆಯಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ. 

ಶನಿವಾರ (ಮೇ 28) ಮಾಡಿದ್ದ ಪ್ರಾಯೋಗಿಕ ಮಾರ್ಗ ಬದಲಾವಣೆ ವೇಳೆ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಅದರಿಂದ ಮೇಖ್ರಿ ವೃತ್ತ, ಬಿಡಿಎ ರಸ್ತೆ, ರಾಜಭವನ ಹಾಗೂ ಸುತ್ತಮುತ್ತಲ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಆದರೆ,  ಕಾವೇರಿ ಥಿಯೇಟರ್‌ ಜಂಕ್ಷನ್‌ ಬಳಿಯ ಕೆಳಸೇತುವೆಯಲ್ಲಿ ಮಾತ್ರ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ನಗರ ಸಂಚಾರ ವಿಭಾಗದ ಹೆಚ್ಚುವರಿ ಕಮಿಷನರ್‌ ಆರ್‌. ಹಿತೇಂದ್ರ , ‘ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಾಹನ ದಟ್ಟಣೆ ಹೆಚ್ಚಿರುತ್ತದೆ. ಅದನ್ನು ತಗ್ಗಿಸಲು ಪ್ರಾಯೋಗಿಕ ಮಾರ್ಗ ಬದಲಾವಣೆ ಮಾಡಲಾಗಿತ್ತು. ಕೆಲವೆಡೆ ಸಮಸ್ಯೆ ಉಂಟಾಯಿತು.

ಅಲ್ಲೆಲ್ಲ ಸಿಗ್ನಲ್‌ಗಳಲ್ಲಿ ಕೆಲ ಮಾರ್ಪಾಡು ಮಾಡಲಾಗಿದೆ. ಜತೆಗೆ ಕಾವೇರಿ ಥಿಯೇಟರ್‌ ಜಂಕ್ಷನ್‌ ಬಳಿಯ ಕೆಳಸೇತುವೆ ಸಂಚಾರ ನಿರ್ಬಂಧಿಸಿರುವುದನ್ನು ಹೊರತುಪಡಿಸಿ ಇತರೆಡೆ ಯಾವುದೇ ಬದಲಾವಣೆ ಮಾಡಿಲ್ಲ’ ಎಂದು ಹೇಳಿದರು.

‘ಯಶವಂತಪುರ,  ಮಲ್ಲೇಶ್ವರ, ಸದಾಶಿವನಗರದ ಪ್ರಯಾಣಿಕರು ಆ ಕೆಳಸೇತುವೆ ಮೂಲಕ ಹಾದು ಬಳ್ಳಾರಿ ರಸ್ತೆಗೆ ಸೇರುತ್ತಾರೆ. ಸೇತುವೆ ಅವೈಜ್ಞಾನಿಕವಾಗಿದ್ದರಿಂದ ದಟ್ಟಣೆ ಉಂಟಾಗುತ್ತದೆ. ಹೀಗಾಗಿ ಸೇತುವೆಯಲ್ಲಿ ಕೆಲದಿನಗಳವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಯಶವಂತಪುರದಿಂದ ಬರುವವರು ಮೇಖ್ರಿ ವೃತ್ತ ಹಾಗೂ ಮಲ್ಲೇಶ್ವರದವರು ಶೇಷಾದ್ರಿಪುರ ರಸ್ತೆ ಮೂಲಕ ಸಂಚರಿಸಬೇಕು’ ಎಂದು ಅವರು ವಿವರಿಸಿದರು. 

‘ಪ್ರತಿದಿನ ಸೇತುವೆ ಮೂಲಕ ಹೋಗುತ್ತಿದ್ದೆ. ಈಗ ಅಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಸಮಸ್ಯೆ ಉಂಟಾಗಿದೆ. ಸೇತುವೆ ಪಕ್ಕದ ರಸ್ತೆ ಮೂಲಕ 1.3 ಕಿ.ಮೀ ಸುತ್ತುವರಿದು ಬಳ್ಳಾರಿ ರಸ್ತೆಗೆ ಸೇರಬೇಕು. ಹೀಗಾಗಿ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ’ ಎಂದು ಸದಾಶಿವನಗರದ ಬೈಕ್‌ ಸವಾರ ಶಶಿಧರ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.