ADVERTISEMENT

ಕುತ್ತಿಗೆ ಬಿಗಿದು ಪತಿ ಹತ್ಯೆ: ಪತ್ನಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:37 IST
Last Updated 24 ಮೇ 2017, 19:37 IST
ಬೆಂಗಳೂರು: ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದರು ಎಂಬ ಕಾರಣಕ್ಕೆ ಪತಿಯನ್ನು ಕೊಲೆಗೈದ ಆರೋಪದಡಿ ಕಲ್ಪನಾ (40) ಎಂಬುವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
 
ತುಮಕೂರಿನ ಕಲ್ಪನಾ, ಸೆಕ್ಯುರಿಟಿ ಏಜೆನ್ಸಿಯೊಂದರ ಮೇಲ್ವಿಚಾರಕ ಸತೀಶ್ (45) ಎಂಬುವರನ್ನು 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಇಬ್ಬರು ಮಕ್ಕಳ ಜತೆ ಯಶವಂತಪುರದ ಸುಬೇದಾರ್‌ಪಾಳ್ಯದಲ್ಲಿ ನೆಲೆಸಿದ್ದರು.
 
‘ಮಕ್ಕಳು ಅಜ್ಜಿ ಊರಿಗೆ ಹೋಗಿದ್ದರಿಂದ ಸೋಮವಾರ ದಂಪತಿ ಮಾತ್ರ ಮನೆಯಲ್ಲಿದ್ದರು. ರಾತ್ರಿ ಅವರಿಬ್ಬರ ನಡುವೆ ಜಗಳ ನಡೆದಿದ್ದು, ಸತೀಶ್ ಪತ್ನಿಯ ಕೆನ್ನೆಗೆ ಹೊಡೆದಿದ್ದರು. ಇದರಿಂದ ಕುಪಿತಗೊಂಡ ಕಲ್ಪನಾ, ಪತಿಯನ್ನು ಕೊಲ್ಲಲು ನಿರ್ಧರಿಸಿದ್ದರು. ಸತೀಶ್ ನಿದ್ರೆಗೆ ಜಾರುತ್ತಿದ್ದಂತೆಯೇ ರಾತ್ರಿ 1 ಗಂಟೆ ಸುಮಾರಿಗೆ ಚೂಡಿದಾರ್‌ನ ಪ್ಯಾಂಟ್‌ನಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದರು.
 
‘ಆ ನಂತರ ಅಳುತ್ತಾ ನೆರೆಮನೆಯ ಬಾಗಿಲು ಬಡಿದ ಅವರು, ‘ಗಂಡ ಉಸಿರಾಡುತ್ತಿಲ್ಲ’ ಎಂದು ಕಣ್ಣೀರಿಟ್ಟಿದ್ದರು. ನೆರವಿಗೆ ಬಂದ ಆ ಮನೆಯವರು, ಸತೀಶ್ ಅವರನ್ನು ಆಟೊದಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದರು.
 
 ಮರುದಿನ ಬೆಳಿಗ್ಗೆ 9 ಗಂಟೆಗೆ ಸಂಬಂಧಿ ಕಿಶೋರ್‌ ಎಂಬುವರಿಗೆ ಕರೆ ಮಾಡಿದ ಕಲ್ಪನಾ, ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದಾಗಿ ತಿಳಿಸಿದ್ದರು. ಕೂಡಲೇ ಕಿಶೋರ್ ಹಾಗೂ ಮೃತರ ಅಣ್ಣ ಕೃಪಾಶಂಕರ್ ತುಮಕೂರಿನಿಂದ ನಗರಕ್ಕೆ ಬಂದಿದ್ದರು.
 
‘ಸಾವಿನ ಹಿಂದೆ ಕಲ್ಪನಾ ಅವರ ಕೈವಾಡವಿರುವ ಬಗ್ಗೆ ಕೃಪಾಶಂಕರ್ ಅನುಮಾನ ವ್ಯಕ್ತಪಡಿಸಿದ್ದರು. ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ತಪ್ಪೊಪ್ಪಿಕೊಂಡರು’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.