ADVERTISEMENT

ಕೃಷಿ ಅರಣ್ಯೀಕರಣದಲ್ಲಿ ಭಾರತ ಮುಂಚೂಣಿ: ಜಾವೇದ್‌ ರಿಜ್ವಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 20:07 IST
Last Updated 23 ಮೇ 2017, 20:07 IST
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌.  ಶಿವಣ್ಣ(ಎಡದಿಂದ ಮೂರನೆಯವರು) ಕೃಷಿ ಅರಣ್ಯ ವ್ಯವಸ್ಥೆ ಕುರಿತ ಪುಸ್ತಕ ಬಿಡುಗಡೆ ಮಾಡಿದರು. ಡಾ.ಎನ್‌.ಆರ್‌. ಗಂಗಾಧರಪ್ಪ, ಜಾವೇದ್‌ ರಿಜ್ವಿ, ಎಸ್‌.ಭಾಸ್ಕರ್‌, ಒ.ಪಿ. ಚತುರ್ವೇದಿ ಇದ್ದಾರೆ
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌. ಶಿವಣ್ಣ(ಎಡದಿಂದ ಮೂರನೆಯವರು) ಕೃಷಿ ಅರಣ್ಯ ವ್ಯವಸ್ಥೆ ಕುರಿತ ಪುಸ್ತಕ ಬಿಡುಗಡೆ ಮಾಡಿದರು. ಡಾ.ಎನ್‌.ಆರ್‌. ಗಂಗಾಧರಪ್ಪ, ಜಾವೇದ್‌ ರಿಜ್ವಿ, ಎಸ್‌.ಭಾಸ್ಕರ್‌, ಒ.ಪಿ. ಚತುರ್ವೇದಿ ಇದ್ದಾರೆ   
ಬೆಂಗಳೂರು: ‘ಕೃಷಿ ಅರಣ್ಯೀಕರಣ ಜಾರಿ ಯಲ್ಲಿ ನಮ್ಮ ದೇಶ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿದೆ’ ಎಂದು ವಿಶ್ವ ಕೃಷಿ ಅರಣ್ಯ ಕೇಂದ್ರದ ದಕ್ಷಿಣ ಏಷ್ಯಾ ಪ್ರಾಂತ್ಯದ ನಿರ್ದೇಶಕ ಡಾ.ಜಾವೇದ್‌ ರಿಜ್ವಿ ಹೇಳಿದರು.
 
ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್), ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಝಾನ್ಸಿಯ ಕೇಂದ್ರೀಯ ಕೃಷಿ ಅರಣ್ಯ ಸಂಶೋಧನಾ ಸಂಸ್ಥೆಯ (ಸಿಎಆರ್‌ಐ) ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ನಾಲ್ಕು ದಿನಗಳ ‘ಕೃಷಿ ಅರಣ್ಯ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
 
‘ದೇಶದ ಕೃಷಿ ಅರಣ್ಯ ನೀತಿ ವಿಶ್ವ ದಲ್ಲೇ ಉತ್ತಮವಾದುದು. ಬೇರೆ ರಾಷ್ಟ್ರ ಗಳು ಸಹ ಈ ನೀತಿಯನ್ನು ಅನುಸರಿಸುತ್ತಿವೆ. ಕೃಷಿ ಅರಣೀಕರಣದ ಬಗ್ಗೆ ತಿಳಿಯಲು ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ಇಥಿಯೋಪಿಯಾದ ಕೃಷಿ ಸಚಿವರು ವ್ಯಕ್ತಪಡಿಸಿದ್ದಾರೆ’ ಎಂದರು.
 
‘ಕೃಷಿ ಅರಣ್ಯ ಎಂದರೆ ಟಿಂಬರ್‌ಗೆ ಸಂಬಂಧಿಸಿದ ಮರಗಳಷ್ಟೇ ಅಲ್ಲ. ಜೈವಿಕ ಇಂಧನಕ್ಕೆ ಪೂರೈಕವಾದ ಮರಗಳು, ಹಣ್ಣು, ತರಕಾರಿ ಬೆಳೆ– ಹೀಗೆ ಎಲ್ಲವೂ ಒಳಗೊಳ್ಳುತ್ತದೆ. ಅದೊಂದು ಜೈವಿಕ ವ್ಯವಸ್ಥೆ. ಯಾವ ಗಿಡ ನೆಟ್ಟರೆ ಆರ್ಥಿಕವಾಗಿ ಲಾಭವಾಗುತ್ತದೆ ಎಂಬುದರ ಕುರಿತು ರೈತರಿಗೆ ಅರಿವು ಮೂಡಿಸ ಬೇಕು’ ಎಂದು ಸಲಹೆ ನೀಡಿದರು.
 
‘ವಿಶ್ವ ಕೃಷಿ ಅರಣ್ಯ ಕೇಂದ್ರವು 70 ದೇಶಗಳಲ್ಲಿ ಕೆಲಸ ಮಾಡುತ್ತಿದೆ. ರೈತರಿಗೆ ಉಚಿತವಾಗಿ ಗಿಡಗಳನ್ನು ವಿತರಿಸುತ್ತಿದೆ.  ಮಹಾರಾಷ್ಟ್ರದಲ್ಲಿ 2 ಕೋಟಿ ಗಿಡಗಳನ್ನು ನೆಡಲಾಗಿದೆ. ಗಿಡ ನೆಟ್ಟರೆ ಸಾಲದು, ಅದರ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಸ್ಥಳೀಯರ ಸಹಕಾರ ಪಡೆಯಬೇಕು’ ಎಂದು ಹೇಳಿದರು.
 
ಐಸಿಎಆರ್ ಸಹಾಯಕ ಮಹಾನಿರ್ದೇಶಕ ಡಾ.ಎಸ್‌. ಭಾಸ್ಕರ್‌ ಮಾತನಾಡಿ, ‘ದೇಶದಲ್ಲಿ ಶೇ 33ರಷ್ಟು ಅರಣ್ಯ ಇರಬೇಕು. ಆದರೆ, ಈಗ ಶೇ 25ರಷ್ಟು ಅರಣ್ಯ ಇದೆ ಎಂದರು.
 
ಈ ಕೊರತೆಯನ್ನು ಸರಿದೂಗಿಸಲು ಕೃಷಿ ಅರಣ್ಯ ಸಹಕಾರಿ.  ಬಂಜರು ಭೂಮಿ ಯನ್ನೂ ಹಸಿರು ವಲಯ ವನ್ನಾಗಿ ಮಾಡಬಹುದು. ಈಗಾಗಲೇ ತಿರುಪತಿಯಲ್ಲಿ ಈ ಕೆಲಸ ಮಾಡಿದ್ದೇವೆ. ಕೆಲ ತಳಿಯ ಸಸ್ಯಗಳನ್ನು ಬೆಳೆಸುವಂತೆ ರೈತರಿಗೆ ಸೂಚಿಸುತ್ತಿದ್ದೇವೆ’ ಎಂದು ಅವರು ಹೇಳಿದರು.
****
‘ಕೃಷಿ ಅರಣ್ಯಕ್ಕೆ ಸಿಎಸ್‌ಆರ್‌ ಹಣ’

‘ದೇಶದ ಕಂಪೆನಿಗಳ ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್) ಹಣ ₹65,000 ಕೋಟಿಯಷ್ಟು ಇದೆ. ಈ ಹಣವನ್ನು ಅರಣ್ಯ ಕ್ಷೇತ್ರಕ್ಕೆ ಬಳಸಿಕೊಳ್ಳಬೇಕು’ ಎಂದು ಜಾವೇದ್‌ ರಿಜ್ವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.