ADVERTISEMENT

ಕೃಷಿ ಮೇಳಕ್ಕೆ ಹರಿದು ಬಂತು ಜನಸಾಗರ

ಜನಜಂಗುಳಿಯಿಂದ ತುಂಬಿ ತುಳುಕಿದ ಪ್ರದರ್ಶನ ಮಳಿಗೆಗಳು; ಕೃಷಿ ಉತ್ಪನ್ನ ಮಾರಾಟವೂ ಬಲುಜೋರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:50 IST
Last Updated 17 ನವೆಂಬರ್ 2017, 20:50 IST
ಕೃಷಿ ಮೇಳಕ್ಕೆ ಹರಿದು ಬಂತು ಜನಸಾಗರ
ಕೃಷಿ ಮೇಳಕ್ಕೆ ಹರಿದು ಬಂತು ಜನಸಾಗರ   

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ರೈತರು, ಕೃಷಿ ಆಸಕ್ತರು ಮತ್ತು ವಿದ್ಯಾರ್ಥಿಗಳ ದಂಡೇ ಹರಿದು ಬರುತ್ತಿದೆ.

ಮೊದಲ ದಿನಕ್ಕಿಂತಲೂ ಎರಡನೇ ದಿನ ಕೃಷಿ ಮೇಳ ಜನಜಂಗುಳಿಯಿಂದ ತುಂಬಿ, ತುಳುಕುತ್ತಿದೆ. ಕೃಷಿ ಉತ್ಪನ್ನ ಮತ್ತು ಯಂತ್ರೋಪಕರಣಗಳ ಮಾರಾಟವೂ ಭರದಿಂದ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಷ್ಟೇ ಅಲ್ಲದೆ, ದೂರದ ಬೆಳಗಾವಿ, ರಾಯಚೂರು, ಗದಗ, ಚಿತ್ರದುರ್ಗ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು, ರೈತ ಮಹಿಳೆಯರು ಕೃಷಿ ಮೇಳಕ್ಕೆ ಬಂದಿದ್ದರು. ಶಾಲಾ, ಕಾಲೇಜು, ವಿ.ವಿ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕೃಷಿ ಯಂತ್ರೋಪಕರಣ ಮಳಿಗೆ, ಸಿರಿಧಾನ್ಯಗಳು ಮತ್ತು ಸಾವಯವ ಕೃಷಿ ಮಳಿಗೆ, ಹೈನುಗಾರಿಕೆ ಮಳಿಗೆ ಕೃಷಿ ಆಸಕ್ತರಿಂದ ತುಂಬಿದ್ದವು. ಬೆಳೆ ಪದ್ಧತಿ ಮತ್ತು ಯಂತ್ರೋಪಕಕರಣ, ತಂತ್ರಜ್ಞಾನ ಬಳಕೆ ಬಗ್ಗೆ ರೈತರು ತಜ್ಞರಿಂದ ಮಾಹಿತಿ ಪಡೆಯುತ್ತಿದ್ದರು.

ADVERTISEMENT

ಸಂಶೋಧನಾ ಕೇಂದ್ರದ ತಾಕುಗಳಲ್ಲಿ ಪ್ರಾಯೋಗಿಕವಾಗಿ ಬೆಳೆದಿರುವ ಭತ್ತ, ರಾಗಿ, ಮೆಕ್ಕೆಜೋಳ, ಸೂರ್ಯಕಾಂತಿ, ದಂಟಿನ ಸೊಪ್ಪು, ದ್ವಿದಳ ಧಾನ್ಯ ಹಾಗೂ ತರಕಾರಿ ಬೆಳೆಗಳನ್ನು ರೈತರು ವೀಕ್ಷಿಸಿದರು.

ಹೈಡ್ರೋಪೋನಿಕ್‌ ವಿಧಾನದಿಂದ ಎಂಟೇ ದಿನಗಳಲ್ಲಿ ಮೆಕ್ಕೆ ಜೋಳದಿಂದ ಹಸಿರು ತಾಜಾ ಮೇವು ಉತ್ಪಾದಿಸುವ ಘಟಕದ ಪ್ರಾತ್ಯಕ್ಷಿಕೆ ರೈತರ ಗಮನ ಸೆಳೆಯಿತು. 72 ಟ್ರೇಗಳಿರುವ ಈ ಘಟಕದಲ್ಲಿ ಪ್ರತಿ ದಿನ 35ರಿಂದ 40 ಕೆ.ಜಿ ಹಸಿರು ಮೇವು ಉತ್ಪಾದಿಸಬಹುದು. ಹಸು ಮತ್ತು ಕುರಿ ಸಾಕಣೆ ಮಾಡುವವರಿಗೆ ಮೇವು ಉತ್ಪಾದಿಸಿಕೊಳ್ಳಲು ಇದು ಸುಲಭ ಮಾರ್ಗ ಎಂದು ವರ್ಷಾ ಗ್ರೀನ್ಸ್‌ ಸಂಸ್ಥೆಯ ಪ್ರತಿನಿಧಿ ತಿಳಿಸಿದರು.

ಮಾವಿನ ಕಾಯಿಗಳಿಗೆ ಹಾನಿಯಾಗದಂತೆ ಒಬ್ಬ ವ್ಯಕ್ತಿ ಗಂಟೆಗೆ ಸುಮಾರು 750 ಮಾವಿನಕಾಯಿ ಕೀಳುವ ಮತ್ತು ಗಂಟೆಗೆ 20ರಿಂದ 25 ಕೆ.ಜಿ. ಸಪೋಟ ಕಾಯಿ ಕೀಳುವ ಸಾಧನಗಳನ್ನು ರೈತರು ಆಸಕ್ತಿಯಿಂದ ವೀಕ್ಷಿಸಿದರು. ಚೌಕಾಸಿ ಮಾಡದೆ ಖರೀದಿಸಿದರು.

ಮನೆಯ ತಾರಸಿ ಮತ್ತು ಕೈತೋಟಗಳಲ್ಲಿ ಬೆಳೆಯಬಹುದಾದ ತರಕಾರಿಗಳು, ಔಷಧ ಗಿಡಗಳು ಹಾಗೂ ಅಲಂಕಾರಿಕ ಗಿಡಗಳ ಬಗ್ಗೆ ಮಹಿಳೆಯರು ಮಾಹಿತಿ ಪಡೆದರು. ಕೆಲವರು ಅಂತಹ ಗಿಡಗಳನ್ನು ಮತ್ತು ತರಕಾರಿ ಬೀಜಗಳನ್ನು ಕೊಂಡಿದ್ದು ಕಂಡುಬಂತು.

ವಯವ, ಸಿರಿಧಾನ್ಯಗಳ ಸಿರಿ: ಸಿರಿಧಾನ್ಯ ಮತ್ತು ಸಾವಯವ ಕೃಷಿ ಮಳಿಗೆಗಳಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಯೂ ಭರದಿಂದ ನಡೆಯುತ್ತಿತ್ತು. ‘ಮೊದಲ ದಿನ ಸುಮಾರು 150 ಕೆ.ಜಿ ಸಾವಯವ ಬೆಲ್ಲ ಮಾರಾಟವಾಗಿತ್ತು. ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸುಮಾರು 450 ಕೆ.ಜಿ ಬೆಲ್ಲವನ್ನು ಮೇಳಕ್ಕೆ ಬಂದವರು ಖರೀದಿಸಿದ್ದಾರೆ. ಸಿರಿಧಾನ್ಯಗಳ ಖರೀದಿಗೂ ಜನರು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಮಂಡ್ಯದ ವಿ.ಸಿ ಫಾರಂ ಜಾಗರಿ ಪಾರ್ಕ್‌ ಸಿಬ್ಬಂದಿ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಂಪ್ರದಾಯಿಕ ಕೃಷಿಯಿಂದ ಆಧುನಿಕ ಕೃಷಿಗೆ ಹೊರಳಿದ ಮೇಲೆ ಕಣ್ಮರೆಯಾಗಿಯೇ ಹೋಗಿದ್ದ ಬಹುತೇಕ ಎಲ್ಲ ಸಿರಿಧಾನ್ಯಗಳು ಪ್ರದರ್ಶನ ಮಳಿಗೆಯಲ್ಲಿ ರಾರಾಜಿಸುತ್ತಿದ್ದವು. ಕೊರಲೆ ಕೆ.ಜಿ.ಗೆ ₹200, ನವಣೆ ಕೆ.ಜಿ. ₹70, ಸಾಮೆ, ಹಾರಕ, ಊದಲು, ಬರಗು ಪ್ರತಿ ಕೆ.ಜಿ.ಗೆ ₹100, ಸಾವಯವ ರಾಜಮುಡಿ ಅಕ್ಕಿ ಕೆ.ಜಿ. ₹70, ಸಾವಯವ ಕರಿಮೆಣಸು ಕೆ.ಜಿ. ₹1,000 ದರದಲ್ಲಿ ಮಾರಾಟವಾದವು.

**

ಇಲಿ, ಹೆಗ್ಗಣ ಹಿಡಿಯುವ ಸಾಧನಕ್ಕೆ ಮುಗಿಬಿದ್ದರು!

ಕೊಡಗು ಜಿಲ್ಲೆಯ ಸಂಗೀತ ಹೌಸ್‌ನವರು ಪ್ರದರ್ಶನಕ್ಕೆ ಇಟ್ಟಿದ್ದ ‘ಬ್ಲಾಕ್‌ ಕ್ಯಾಟ್‌–ರ‍್ಯಾಟ್‌ ಟ್ರ್ಯಾಪ್‌’ (ಇಲಿ, ಹೆಗ್ಗಣ ಹಿಡಿಯುವ ಸಾಧನ)ಗಳನ್ನು ಜನರು ಮುಗಿಬಿದ್ದು ಕೊಂಡರು. ಈ ಸಾಧನದ ಬೆಲೆ ₹400 ಇತ್ತು.

‘ಮನೆ, ಗೋಡಾನ್‌ ಹಾಗೂ ಜಮೀನುಗಳಲ್ಲಿ ಕಾಣಿಸಿಕೊಳ್ಳುವ ಇಲಿ, ಹೆಗ್ಗಣಗಳ ಹಾವಳಿ ನಿಯಂತ್ರಿಸಲು ಇದು ಪರಿಣಾಮಕಾರಿಯಾಗಿದೆ. 8ರಿಂದ 10 ವರ್ಷ ಬಾಳಿಕೆ ಬರುತ್ತವೆ. ಎರಡು ದಿನಗಳಿಂದ ಸುಮಾರು 250ರಿಂದ 300 ರ‍್ಯಾಟ್‌ ಟ್ರ್ಯಾಪ್‌ಗಳನ್ನು ಖರೀದಿಸಿದ್ದಾರೆ’ ಎಂದು ಸಂಗೀತ ಹೌಸ್‌ನ ಕೆ.ವಿಜಯ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.