ADVERTISEMENT

ಕೃಷಿ ಸಂಶೋಧನೆ ಬೆಂಬಲಿಸದ ಸರ್ಕಾರ

ಜೈವಿಕ ಮೇಳದಲ್ಲಿ ಕೃಷಿ ವಿಜ್ಞಾನಿ ಡಾ. ಮಹದೇವಪ್ಪ ಬೇಸರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST
ಸಂವಾದದಲ್ಲಿ ಭಾಗವಹಿಸಿದ್ದ ರೈತರೊಬ್ಬರು ವಿಜ್ಞಾನಿಗಳಿಗೆ ಪ್ರಶ್ನೆ ಕೇಳಿದರು
ಸಂವಾದದಲ್ಲಿ ಭಾಗವಹಿಸಿದ್ದ ರೈತರೊಬ್ಬರು ವಿಜ್ಞಾನಿಗಳಿಗೆ ಪ್ರಶ್ನೆ ಕೇಳಿದರು   

ಬೆಂಗಳೂರು:  ‘ನಮ್ಮ ಸಂಶೋಧನೆಗಳನ್ನು  ರೈತರಿಗೆ ತಲುಪಿಸಲು ಸರ್ಕಾರವೇ ಅಡ್ಡಿಯಾಗಿದೆ’  ಎಂದು ಹಿರಿಯ ಕೃಷಿ ವಿಜ್ಞಾನಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ. ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿ ‘ಬೆಂಗಳೂರು ಇಂಡಿಯಾ ಬಯೋ 2016’ ಮೇಳದಲ್ಲಿ ಕೃಷಿಕರೊಂದಿಗೆ ಸಂವಾದದಲ್ಲಿ  ಅವರು ಮಾತನಾಡಿದರು.
‘ಪ್ರತೀ 8–10 ವರ್ಷಕ್ಕೆ ಹೊಸ ತಳಿಗಳು ಬರಬೇಕು. ಆದರೆ, ಸರ್ಕಾರ  ಸಹಕಾರ ನೀಡುತ್ತಿಲ್ಲ.

ಬಿ ಟಿ ಹತ್ತಿ ಬೀಜವನ್ನು ಪರಿಚಯಿಸಿ ಹದಿಮೂರು ವರ್ಷಗಳಾಗಿವೆ. ಯಾವುದೇ ಹಾನಿಯಾಗಿಲ್ಲ. ಇಳುವರಿ ಹೆಚ್ಚಾಗಿದೆ. ಆದರೆ, ಹಾನಿಯಾಗುತ್ತದೆ ಎಂದು ಅಪಪ್ರಚಾರ ಮಾಡಿದ ಕಾರಣ ವಿಜ್ಞಾನಿಗಳ ಕೈ ಕಟ್ಟಿದಂತಾಗಿದೆ. ಇಲ್ಲದಿದ್ದರೆ ಮತ್ತೊಂದು ತಳಿ ಬರುತ್ತಿತ್ತು’ ಎಂದರು.

‘ಹೊಸ ತಳಿ ಸಂಶೋಧನೆ ಮಾಡಲು ಸರ್ಕಾರವೇ ಕೋಟಿಗಟ್ಟಲೆ ಹಣ ನೀಡುತ್ತದೆ. ಆದರೆ, ಆ ತಳಿಯನ್ನು ರೈತರಿಗೆ ತಲುಪಿಸಲು ಅನುಮತಿ ನೀಡುತ್ತಿಲ್ಲ.  ಹೊಸ ತಳಿಗೆ ಅಡ್ಡಿಯಾಗುತ್ತಿರುವ ಸರ್ಕಾರ ಮತ್ತು ಚಳವಳಿಗಾರರನ್ನು ತಡೆಯದಿದ್ದರೆ   ಆವಿಷ್ಕಾರಗಳು ಸಾಧ್ಯವಿಲ್ಲ’ ಎಂದು ಕೃಷಿ ವಿಜ್ಞಾನಿ ಡಾ. ವಸಂತ ಕುಮಾರ್‌ ತಿಮ್ಕಾಪುರ ಹೇಳಿದರು.

‘ಜೀವಾಣುಗಳನ್ನು ಒಂದು ಜೀವಿಯಿಂದ ಮತ್ತೊಂದು ಜೀವಿಗೆ ವರ್ಗಾವಣೆ ಮಾಡುವುದು ಸಾಧ್ಯ. ಕೀಟ ನಿರೋಧಕ ಶಕ್ತಿ ನೀಡಲು ಜೀವಾಣು ಬಳಸುವುದು ತಪ್ಪಲ್ಲ’ ಎಂದ ಅವರು,  ‘ಕಿಡ್ನಿ ಕಸಿ, ಹೃದಯ ಕಸಿ ಸಾಧ್ಯವಾಗುತ್ತದೆ ಎಂದಾದರೆ, ಕೃಷಿಯಲ್ಲಿ ಯಾಕೆ ಬೇಡ’ ಎಂದು ಕೃಷಿ ವಿಜ್ಞಾನಿ ಡಾ. ಟಿ.ಎಂ. ಮಂಜುನಾಥ್‌ ಪ್ರಶ್ನಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಬಿ ಟಿ ಹತ್ತಿ ಬೆಳೆಗಾರರು, ವಿಜ್ಞಾನಿಗಳಾದ ಡಾ. ಅಶ್ವಥ್ ಚೆನ್ನಾ ರೆಡ್ಡಿ, ಡಾ. ಕೆ.ಸಿ. ರವಿ, ಡಾ.ಕಾಮೇಶ್ವರ ರಾವ್, ಡಾ.ಮಿಟ್ಟೂರ್‌ ಜಗದೀಶ್‌, ಡಾ.ಕೆ.ಎಸ್‌. ಮೋಹನ್, ಡಾ. ಕಂಕನೂರ್‌ ರವಿ ಭಾಗವಹಿಸಿದ್ದರು. ಇಡೀ ಸಂವಾದ ಕನ್ನಡದಲ್ಲಿಯೇ ನಡೆದದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.