ADVERTISEMENT

ಕೆಂಪೇಗೌಡ ಸಮಾಧಿ ಸ್ಥಳಕ್ಕೆ ಒಕ್ಕಲಿಗರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 20:21 IST
Last Updated 26 ನವೆಂಬರ್ 2015, 20:21 IST

ಬೆಂಗಳೂರು: ‘ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ನ.30 ರಂದು ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದುವರೆಗೂ ಅಗೋಚರವಾಗಿ ಉಳಿದಿದ್ದ ಕೆಂಪೇಗೌಡರ ಸಮಾಧಿಯು  ಸಂಶೋಧಕರ ಪರಿಶ್ರಮದಿಂದ ಇತ್ತೀಚೆಗೆ ಬೆಳಕಿಗೆ ಬಂದಿದೆ. ಸಮಾಧಿ ಸ್ಥಳ ಪ್ರವಾಸಿ ತಾಣವಾಗಬೇಕು ಮತ್ತು ಸಾಹಿತಿ ಗಿರೀಶ ಕಾರ್ನಾಡ ಅವರು ಕೆಂಪೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸುವ ಸಲುವಾಗಿಯೂ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಮಾಗಡಿ ಕೋಟೆ ಮೈದಾನದಿಂದ ಸಮಾಧಿ ಪತ್ತೆಯಾಗಿರುವ ಕೆಂಪಾಪುರದವರೆಗೆ ಪಾದಯಾತ್ರೆ ನಡೆಯಲಿದೆ. ಇದರಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆಯಿದೆ’ ಎಂದು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಅ.ದೇವೇಗೌಡ ಮಾತನಾಡಿ, ‘ಕೆಂಪೇಗೌಡರು ಒಬ್ಬ ಜಾತ್ಯತೀತ ವ್ಯಕ್ತಿ. ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಕೆಲಸ. ಒಂದು ವೇಳೆ ಸರ್ಕಾರ ಈ ವಿಚಾರವನ್ನು ನಿರ್ಲಕ್ಷ ಮಾಡಿದರೆ, ರಾಜ್ಯ ಒಕ್ಕಲಿಗ ಸಂಘದಿಂದ ಆ ಸ್ಥಳವನ್ನು ದತ್ತು ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.