ADVERTISEMENT

ಕೆಎಟಿ ಹುದ್ದೆ ಭರ್ತಿ: ಶೀಘ್ರ ಕ್ರಮಕ್ಕೆ ಸೂಚನೆ

ಹೈಕೋರ್ಟ್‌ ಸುದ್ದಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:54 IST
Last Updated 27 ಜುಲೈ 2015, 19:54 IST

ಬೆಂಗಳೂರು: ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಅಧ್ಯಕ್ಷರು ಮತ್ತು ಆಡಳಿತ ಸದಸ್ಯರ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್  ಸೂಚಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು ಸೋಮವಾರ ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ  ನಡೆಸಿತು.

ಕೇಂದ್ರ ಸರ್ಕಾರ ಈ ಕುರಿತಂತೆ ಕೈಗೊಂಡಿರುವ ಕ್ರಮಗಳನ್ನು ಸಹಾಯಕ ಸಾಲಿಸಿಟರ್‌ ಜನರಲ್‌ ಕೃಷ್ಣ ಎಸ್‌.ದೀಕ್ಷಿತ್‌  ಅವರು ನ್ಯಾಯಪೀಠದ ಗಮನಕ್ಕೆ ತಂದರು.

‘ನ್ಯಾಯಾಂಗ ಸದಸ್ಯರಾಗಿ ಜಿ.ಶಾಂತಪ್ಪ ಅವರನ್ನು ನೇಮಕ ಮಾಡಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಡಾ.ಕೆ.ಭಕ್ತವತ್ಸಲ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಆದರೆ ಈ ಬಗ್ಗೆ ಸಿಬಿಐ ಮತ್ತು ವಿಚಕ್ಷಣಾ ದಳದ ವರದಿ ಇನ್ನೂ ಕೇಂದ್ರ ಸರ್ಕಾರದ ಕೈ ಸೇರಿಲ್ಲ’ ಎಂದು ಅವರು ತಿಳಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಎಂ.ಎಸ್‌.ಭಾಗವತ್‌ ಅವರು, ‘ಅಕ್ಟೋಬರ್‌ ತಿಂಗಳ ಕೊನೆಗೆ ಈಗಿನ ಆಡಳಿತ ಸದಸ್ಯರ ಅವಧಿ ಕೊನೆಗೊಳ್ಳುತ್ತಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಸರ್ಕಾರ ಆದಷ್ಟು ಕ್ಷಿಪ್ರವಾಗಿ ಈ ಸಂಬಂಧ  ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಿ’ ಎಂದು ಸರ್ಕಾರದ ಪರ ಹಾಜರಾಗಿದ್ದ ಪ್ರಧಾನ ವಕೀಲ ಆರ್.ದೇವದಾಸ್‌ ಅವರಿಗೆ ಸೂಚಿಸಿತು. ಆಗಸ್ಟ್‌ 4ಕ್ಕೆ ಪ್ರಕರಣವನ್ನು ಮುಂದೂಡಲಾಗಿದೆ.

ಜಮೀನು ವಾಪಸಿಗೆ ಆದೇಶ: ಕೈಗಾರಿಕಾ ಉದ್ದೇಶಕ್ಕೆ ನೀಡಿದ್ದ 3 ಎಕರೆ 23 ಗುಂಟೆ ಜಮೀನನ್ನು ವಾಪಸು ಸರ್ಕಾರಕ್ಕೇ ನೀಡುವಂತೆ ಕೆಐಎಡಿಬಿಗೆ ಆದೇಶಿಸಿದೆ.

ನಗರದ ಬೆಟ್ಟಂದೂರು ಅಗ್ರಹಾರ ಪ್ರದೇಶದ ಸರ್ವೇ ನಂ 42ರಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 2006ರಲ್ಲಿ ಈ ಜಮೀನನ್ನು ನೀಡಲಾಗಿತ್ತು.  ಇದನ್ನು ಕೆಐಎಡಿಬಿ ಅದೇ ವರ್ಷ ಜಾಯ್‌ ಐಸ್‌ ಕ್ರೀಂ ಕಂಪೆನಿಗೆ ಮಾರಾಟ ಮಾಡಿತ್ತು. ಜಾಯ್‌ ಐಸ್‌ಕ್ರೀಂ ಕಂಪೆನಿಯು ಇದನ್ನು ಪ್ರೆಸ್ಟೀಜ್‌ ಕಂಪೆನಿಗೆ ಹಸ್ತಾಂತರಿಸಿತ್ತು.  ನಂತರ ಪ್ರೆಸ್ಟೀಜ್‌ ಕಂಪೆನಿಯು ಇದನ್ನು ವೈಲ್ಡ್‌ ಫ್ಲವರ್‌ ಕಂಪೆನಿಗೆ ಪರಭಾರೆ ಮಾಡಿತ್ತು. ಈ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಕರ್ನಾಟಕ ಪ್ರಜಾರಾಜ್ಯ ವೇದಿಕೆ ಅಧ್ಯಕ್ಷ ಎಂ.ಆರ್‌.ರಫೀಕ್‌ ಹಾಗೂ ಕರ್ನಾಟಕ ಕಾರ್ಮಿಕ ದಲಿತ ಜಾಗೃತ ವೇದಿಕೆ ಅಧ್ಯಕ್ಷ ಎ.ಸಿ.ರಾಜು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

ಸೋಮವಾರ ಅರ್ಜಿ ವಿಲೇವಾರಿ ಮಾಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅವರ ನೇತೃತ್ವದ ವಿಭಾಗೀಯ ಪೀಠ, ‘ಮಂಜೂರಾತಿ ನಿಯಮಗಳು ಉಲ್ಲಂಘನೆಯಾಗಿದ್ದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’  ಎಂದು ಸರ್ಕಾರಕ್ಕೆ ಸೂಚಿಸಿದೆ.

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ: ರಾಜ್ಯದಲ್ಲಿ ಖಾಲಿ ಇರುವ ಸಿವಿಲ್‌ ಜಡ್ಜ್‌ ಹುದ್ದೆಗಳಿಗೆ ಭಾನುವಾರ (ಜುಲೈ 26) ನಡೆದ ಪೂರ್ವಭಾವಿ ಪರೀಕ್ಷೆಯ ಕೀ ಉತ್ತರಗಳನ್ನು ಹೈಕೋರ್ಟ್‌  ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.

ಆಕ್ಷೇಪಣೆಗಳು ಇದ್ದಲ್ಲಿ ಜುಲೈ 28ರ (ಮಂಗಳವಾರ) ಸಂಜೆ 5 ರೊಳಗೆ   rghck@kar.nic.in ಇಮೇಲ್‌ ಕಳುಹಿಸಬಹುದು. ಹೆಚ್ಚಿನ ವಿವರಗಳಿಗೆ karnatakajudicary.kar.nic.in ನಲ್ಲಿ ಗಮನಿಸಬಹುದು.
*
‘ಪಾಸ್‌ಪೋರ್ಟ್ ಜಪ್ತಿ: ಪೊಲೀಸರಿಗೆ ಅಧಿಕಾರವಿಲ್ಲ’
ಬೆಂಗಳೂರು: ‘ಅಪರಾಧ ಪ್ರಕರಣದ ಆರೋಪ ಎದುರಿಸುತ್ತಿರುವ ನಾಗರಿಕರ ಪಾಸ್‌ಪೋರ್ಟ್‌ಗಳನ್ನು ಜಪ್ತಿ ಮಾಡಿ ವಶದಲ್ಲಿ ಇರಿಸಿಕೊಳ್ಳಲು ಪೊಲೀಸರಿಗೆ ಅಧಿಕಾರವಿಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕ್ರಿಮಿನಲ್ ಪ್ರಕರಣವೊಂದರಲ್ಲಿ ಭಾಗಿಯಾದ ವ್ಯಕ್ತಿಯೊಬ್ಬರ ಪಾಸ್‌ಪೋರ್ಟ್‌ ವಶಪಡಿಸಿಕೊಂಡಿದ್ದ ಪೊಲೀಸರ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.  ಈ ಅರ್ಜಿಯನ್ನು  ನ್ಯಾಯಮೂರ್ತಿ ಎ.ಎನ್‌.ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠವು ವಿಲೇವಾರಿ ಮಾಡಿದೆ.

‘ಪಾಸ್‌ಪೋರ್ಟ್‌ ತಮ್ಮ ವಶದಲ್ಲಿ ಇರಿಸಿಕೊಳ್ಳುವ ಅಧಿಕಾರ ಕೇವಲ ಪಾಸ್‌ಪೋರ್ಟ್ ಇಲಾಖೆಗಷ್ಟೇ ಇದೆ. ಒಂದು ವೇಳೆ ಪೊಲೀಸರು ಯಾವುದೇ ಆರೋಪದಡಿ ಪಾಸ್‌ಪೋರ್ಟ್ ವಶಪಡಿಸಿಕೊಂಡರೆ ಅವುಗಳನ್ನು ಕೂಡಲೇ ಇಲಾಖೆಯ ಸುಪರ್ದಿಗೆ ಒಪ್ಪಿಸಬೇಕು. ಒಂದು ವೇಳೆ ಪೊಲೀಸರು ವಶದಲ್ಲಿರಿಸಿಕೊಳ್ಳುವ ಸಂದರ್ಭ ಇದ್ದರೆ ಅದಕ್ಕೆ ಸಕಾರಣ ಏನಿದೆ ಎಂಬುದನ್ನು ವಿವರಿಸಬೇಕು’ ಎಂದು   ಆದೇಶದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT