ADVERTISEMENT

ಕೆರೆಗಳಿಗೆ ತಡೆಬೇಲಿ: ಕಂದಾಯ ಇಲಾಖೆಯಿಂದ ಅಸಹಕಾರ

ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಉದ್ದೇಶದ ಯೋಜನೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 20:22 IST
Last Updated 3 ಜೂನ್ 2015, 20:22 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ 79 ಕೆರೆಗಳಿಗೆ ತಡೆಬೇಲಿ ನಿರ್ಮಿಸಲು ಸಿದ್ಧವಾಗಿದೆ. ಆದರೆ, ಈ ಕೆಲಸ ಆರಂಭಿಸಲು ಕಂದಾಯ ಇಲಾಖೆಯು ಸಕಾರಾತ್ಮಕ ಪ್ರತಿಕ್ರಿಯೆ ತೋರಿಸುತ್ತಿಲ್ಲ ಎಂದು ಬಿಡಿಎ ಅಧಿಕಾರಿಗಳು ಆರೋಪಿಸಿದರು.

‘ನಗರದ 79 ಕೆರೆಗಳಿಗೆ ತಡೆಬೇಲಿ ನಿರ್ಮಿಸಲು ನಾವು ಸಿದ್ಧರಾಗಿದ್ದೇವೆ ಎಂದು ಕಂದಾಯ ಇಲಾಖೆಗೆ ಅನೇಕ ಪತ್ರಗಳನ್ನು ಬರೆದಿದ್ದೇವೆ. ಆದರೆ, ಈವರೆಗೆ ಆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ಅನುಮತಿ ನೀಡಿದಾಗ ಮಾತ್ರ ಬೇಲಿ ನಿರ್ಮಾಣ ಕಾರ್ಯ ಆರಂಭಿಸಲು ಸಾಧ್ಯ’ ಎಂದು ಬಿಡಿಎ ಎಂಜಿನಿಯರ್‌ ಪಿ.ಎನ್.ನಾಯಕ್ ತಿಳಿಸಿದರು.

‘ನಗರದ ಅನೇಕ ಕೆರೆಗಳು ಬಿಡಿಎ, ಬಿಬಿಎಂಪಿ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರ ಇವುಗಳಲ್ಲಿ ಯಾವುದಕ್ಕೆ ಸೇರಿವೆ ಎಂದು ಗುರುತಿಸಲಾಗದಷ್ಟು ಗೊಂದಲದಲ್ಲಿವೆ. ಬೇಲಿ ನಿರ್ಮಿಸಿದ ಮೇಲೆ ಈ ಗೊಂದಲ ನಿವಾರಣೆ ಮಾಡಿಕೊಳ್ಳಬಹುದು. ನಂತರ ಕೆರೆಗಳ

ಅಭಿವೃದ್ಧಿ, ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ’ ಎಂದರು.

‘ಈವರೆಗೆ ಒತ್ತುವರಿಗೆ ಒಳಗಾದ ಅನೇಕ ಕೆರೆಗಳಿಗೆ ಬೇಲಿಯೇ ಇಲ್ಲ. ಬೇಲಿ ನಿರ್ಮಿಸಿದರೆ ಒತ್ತುವರಿಗೆ ತಡೆಹಾಕಬಹುದು. ಈ ವರೆಗೆ ತಡೆಬೇಲಿಯಿಂದ 38 ಕೆರೆಗಳು ಸಂರಕ್ಷಣೆಯಾಗಿವೆ. ಇನ್ನುಳಿದ 79 ಕೆರೆಗಳಿಗೆ ಯಾವುದೇ ರಕ್ಷಣೆ ಇಲ್ಲದಾಗಿದೆ’ ಎಂದು ನಾಯಕ್ ಹೇಳಿದರು.

‘ಕೆರೆಗಳ ಗಡಿ ಗುರುತಿಸಿದ ನಂತರವಷ್ಟೇ ಬೇಲಿ ನಿರ್ಮಿಸುವ ಕೆಲಸ ಆರಂಭಗೊಳ್ಳುತ್ತದೆ. ವರ್ತೂರು, ಅಗರ ಮತ್ತಿತರ ಕೆರೆಗಳನ್ನು ಸಂಪರ್ಕಿಸುವ ಬೆಳ್ಳಂದೂರು ಕೆರೆ 11 ಕಿ.ಮೀ ಸುತ್ತಳತೆ ಹೊಂದಿದೆ. ಇದಕ್ಕೆ ತಡೆಬೇಲಿ ನಿಲ್ಲಿಸಬೇಕಾದರೆ ಸುಮಾರು 3 ತಿಂಗಳು ಬೇಕಾಗುತ್ತದೆ. ಈ ಕೆರೆಗೆ ಬೇಲಿ ನಿರ್ಮಿಸಲು ಸುಮಾರು ₨ 3 ಕೋಟಿ ವೆಚ್ಚವಾಗಲಿದೆ’ ಬಿಡಿಎ ಮೂಲಗಳು ತಿಳಿಸುತ್ತದೆ.
ಪ್ರತಿ ಮೀಟರ್‌ ಬೇಲಿ ನಿರ್ಮಾಣಕ್ಕೆ ₨800–1000 ವೆಚ್ಚ ತಗಲುತ್ತದೆ. ಹೀಗಾಗಿ, ಪ್ರತಿ ಕೆರೆಗೆ ತಡೆಬೇಲಿ ನಿರ್ಮಿಸಲು ಸುಮಾರು ₨1–5 ಕೋಟಿ ಖರ್ಚಾಗುತ್ತದೆ. ನಗರದ 79 ಕೆರೆಗಳಿಗೂ ತಡೆಬೇಲಿ ನಿರ್ಮಿಸಬೇಕಾದರೆ ಸುಮಾರು ₨100 ಕೋಟಿ ಬೇಕಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದರು.

ಕೆರೆಗಳ ನಿರ್ವಹಣೆಯು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದು. ಅದು ಯಾಕೆ ಈ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸುವ ಅಧಿಕಾರಿಗಳು, ಅರಣ್ಯ ಭೂಮಿ ಸಂರಕ್ಷಣೆ ಸೇರಿದಂತೆ ಹತ್ತಾರು ಕೆಲಸಗಳು ನಾವೇ ನಿರ್ವಹಿಸಬೇಕೆಂದರೆ ತುಂಬಾ ಕಷ್ಟವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT