ADVERTISEMENT

ಕೇರಿಯೊಳಗಿನ ನೋವೇ ಹಾಡಾಗಿದೆ: ಸುಬ್ಬು ಹೊಲೆಯಾರ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2013, 6:11 IST
Last Updated 1 ಮಾರ್ಚ್ 2013, 6:11 IST

ಬೆಂಗಳೂರು: `ನನ್ನೂರಿನ ಕೇರಿಯಲ್ಲಿ, ಕೇರಿಯೊಳಗಿನ ನನ್ನ ಗುಡಿಸಲಲ್ಲಿ ಅನುಭವಿಸಿದ ನೋವುಗಳೇ ಹಾಡಾಗಿ ಹೊರಹೊಮ್ಮಿದ್ದು, ಉಮ್ಮಳಿಸಿದ ದುಃಖವೆಲ್ಲ ಅಕ್ಷರರೂಪ ಪಡೆದಿದೆ' ಎಂದು ಕವಿ ಸುಬ್ಬು ಹೊಲೆಯಾರ್ ಭಾವುಕರಾಗಿ ಹೇಳಿದರು.

ಸಾಹಿತ್ಯ ಅಕಾಡೆಮಿ ಗುರುವಾರ ಏರ್ಪಡಿಸಿದ್ದ `ಕಥಾಸಂಧಿ-ಕವಿಸಂಧಿ: ನನ್ನ ದೃಷ್ಟಿಯಲ್ಲಿ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. `ನೊಂದ ಸಮುದಾಯದಿಂದ ಬಂದವನು ನಾನು. ಸಣ್ಣವನಿದ್ದಾಗ ಕೇರಿಯೇ ನನ್ನ ಜಗತ್ತಾಗಿತ್ತು. ಆ ದಿನಗಳಲ್ಲಿ ಏಕಾಂಗಿತನ ಸಾಕಷ್ಟು ಕಾಡಿತ್ತು. ಅವಮಾನದಿಂದ ಮನಸ್ಸು ಬೆಂದಿತ್ತು' ಎಂದು ಮೆಲುಕು ಹಾಕಿದರು.

`ನಾನು ಒಂಬತ್ತನೇ ತರಗತಿ ಓದುತ್ತಿದ್ದಾಗ ಕೋಲಾರದ ದಲಿತ ಮಹಿಳೆಯೊಬ್ಬರ ಮೇಲೆ ಮಾನಭಂಗ ಆಗಿತ್ತು. ಅದರ ವಿರುದ್ಧ ರಾಜ್ಯದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದವು. ಆ ಸಂದರ್ಭದಲ್ಲೇ ನಾನು ದಲಿತ ಸಂಘರ್ಷ ಸಮಿತಿ ಸೇರಿದೆ. ಹೊಲೆ ಮಾದಿಗರ ಹಾಡನ್ನು ರಾಜ್ಯದ ಬೀದಿ, ಬೀದಿಯಲ್ಲಿ ಹಾಡಿದೆವು. ದೊಡ್ಡ ಆಂದೋಲನವನ್ನು ಹುಟ್ಟು ಹಾಕಿದೆವು' ಎಂದು ಹೇಳಿದರು.

`ಶೆಟ್ಟಿ ಹೋಟ್ಲಿಗೆ ಹೋಗಿ ಕಾಫಿ ಕುಡಿಯುವಾಗ ಮಳೆ ಬಂದು ನನ್ನ ಇಬ್ಬರು ಗೆಳೆಯರು ಹೊಸ್ತಿಲೊಳಗೆ ಹೋದರು. ಅವರ ಕೈಗಳನ್ನೇ ಮುರಿಯಲಾಯಿತು. ನಾನು ದಲಿತ ಎನ್ನುವುದು ಗೊತ್ತಾದೊಡನೆ ಕ್ಷೌರವನ್ನು ಪೂರ್ತಿ ಮಾಡದೇ ಅರ್ಧಕ್ಕೆ ಎಬ್ಬಿಸಿ ಕಳುಹಿಸಲಾಗಿತ್ತು. ನನ್ನ ಜೀವನದಲ್ಲಿ ತುಂಬಾ ಗಾಢವಾಗಿ ತಟ್ಟಿದ ಸಂಗತಿಗಳು ಇವು' ಎಂದು ಸುಬ್ಬು ಹೇಳುವಾಗ ಸಭಿಕರ ಕಣ್ಣಾಲಿಗಳು ತುಂಬಿದ್ದವು.

`ಗಾಂಧಿಯನ್ನು ಒಂದು ಕಾಲಕ್ಕೆ ತುಂಬಾ ವಿರೋಧಿಸುತ್ತಿದ್ದೆ. ವಾಸ್ತವ ಸಂಗತಿ ತಿಳಿದ ಮೇಲೆ ಅವರ ಮೇಲಿನ ಮನೋಭಾವ ಬದಲಾಯಿತು. ಅಸ್ಪೃಶ್ಯತೆ ಹೋಗಲಾಡಿಸಲು ಗಾಂಧಿ ಒಳಗಿನಿಂದ ಕೆಲಸ ಮಾಡಿದರೆ, ಅಂಬೇಡ್ಕರ್ ಹೊರಗಿನಿಂದ ದುಡಿದರು' ಎಂದ ಅವರು, ತಮ್ಮ `ಗಾಂಧಿ ಬಂದಾಗ ಅಂಬೇಡ್ಕರ್ ಒಳಗಿದ್ದರು' ಕವನ ವಾಚಿಸಿದರು.

`ಸಣ್ಣವನಿದ್ದಾಗ ನಾನು ಅಯ್ಯಪ್ಪಸ್ವಾಮಿ ವ್ರತ ತೊಟ್ಟಿದ್ದೆ. ಆಗ ಎಲ್ಲರೂ ನನಗೆ ಸ್ವಾಮಿ ಅನ್ನೋರು. ಹಾಗೆ ಕರೆಸಿಕೊಳ್ಳುವಾಗ ನನಗೆ ಸಿಕ್ಕಾಪಟ್ಟೆ ಖುಷಿ ಆಗುತ್ತಿತ್ತು. ಆದರೆ, ವ್ರತ ಮುಗಿದ ಮೇಲೆ ಮತ್ತೆ ಬಾಯಿಗೆ ಬಂದಂತೆ ಬೈಗುಳ ತಿನ್ನಬೇಕಾಯಿತು' ಎಂದು ತಿಳಿಸಿದರು.

`ನನ್ನ ಜೀವನವನ್ನು ರೂಪಿಸಿದವರು ನಾಲ್ಕು ಮಂದಿ. ಸಿದ್ದಲಿಂಗ ದನಿ ಕೊಟ್ಟ, ಮಹದೇವ ಮನಸ್ಸು ಕೊಟ್ಟ, ಕೃಷ್ಣಪ್ಪ ಕಸುವು ಕೊಟ್ಟ, ಲಂಕೇಶ ಸೂಕ್ಷ್ಮ ಮತಿ ಕೊಟ್ಟ. ಅವರಿಗೆ ನನ್ನ ಶರಣು' ಎಂದು ಅವರು ಭಾವನೆಗಳ ಸೋನೆಯಲ್ಲಿ ಮಿಂದರು. `ದಲಿತ ಸಂಘಟನೆ ನನಗೆ ಎಲ್ಲವನ್ನೂ ಕಲಿಸಿತು. ಅದು ನನ್ನ ತಾಯಿ ಸಮಾನ' ಎಂದರು.

`ನಮ್ಮವ್ವನಿಗೆ ಯಾರಾದರೂ ಕಾಫಿ ಕೊಟ್ಟರೆ ಅವರ ಮನೆ ಅಂಗಳದ ಕಸಗೂಡಿಸಿ ಬರುತ್ತಿದ್ದರು. `ಯಾಕವ್ವ ಹಾಗೆ ಮಾಡಿದಿ' ಎಂದು ಕೇಳಿದರೆ, `ಯಾರ ಋಣಾನೂ ಇಟ್ಕೊಬಾರ‌್ದಪ್ಪ' ಎನ್ನುತ್ತಿದ್ದಳು. ಅವ್ವ ಹೇಳಿಕೊಟ್ಟ ಬದುಕಿನ ಪಾಠ ಅದು' ಎಂದು ತಿಳಿಸಿದರು. `ನೊಂದವರೆಲ್ಲ ದಲಿತರೇ' ಎಂದ ಸುಬ್ಬು, `ದಲಿತ ಸಂಘಟನೆಯಲ್ಲಿ ಮಾನವೀಯ ಮೌಲ್ಯಗಳು ಮಡುವುಗಟ್ಟಿದ್ದವು' ಎಂದು ಹೆಮ್ಮೆಯಿಂದ ಹೇಳಿದರು.

`ಎದೆಗೆ ಬಿದ್ದ ಅಕ್ಷರ ಕೃತಿ ಹೊರಬಂದ ಮೇಲೆ ದಲಿತ ಸಂಘಟನೆಗಳಲ್ಲಿ ಮತ್ತೆ ಸಂಚಲನ ಮೂಡಿದೆ' ಎಂದು ಪ್ರತಿಪಾದಿಸಿದರು.
ಮಾತು ಕಾವ್ಯದ ಕಡೆಗೆ ಹೊರಳಿತು. `ಬೇಂದ್ರೆ ಮತ್ತು ಕುವೆಂಪು ಕಾವ್ಯಗಳು ಕನ್ನಡದ ಎರಡು ಕಣ್ಣುಗಳು' ಎಂದು ಬಣ್ಣಿಸಿದರು. `ಜಾನಪದ ಸೊಗಡು ಮತ್ತು ಆಧ್ಯಾತ್ಮ ತಿರುಳು ಬೇಂದ್ರೆ ಕಾವ್ಯ ಲಕ್ಷಣ. ವೈಜ್ಞಾನಿಕ ಮನೋಭಾವ, ಪರಿಸರದ ಮೇಲಿನ ಪ್ರೇಮ ಕುವೆಂಪು ಕಾವ್ಯದ ಹೆಗ್ಗಳಿಕೆ. ನಂತರದ ದಿನಗಳಲ್ಲಿ ಸಾವಿರಾರು ಕಾವ್ಯ ಮಾರ್ಗಗಳು ಈ ಸಾಗರಗಳನ್ನು ಸೇರಿವೆ' ಎಂದು ವಿಶ್ಲೇಷಿಸಿದರು.

`ಮೌಖಿಕ ಹಾಗೂ ಅಕ್ಷರ ಕಾವ್ಯಗಳಲ್ಲಿ ಮೌಖಿಕ ಕಾವ್ಯಗಳೇ ನನ್ನನ್ನು ಗಾಢವಾಗಿ ತಟ್ಟಿವೆ. ಮೌಖಿಕ ಸಾಹಿತ್ಯಕ್ಕೆ ಭಾವನೆ ಮತ್ತು ಅನುಭವದ ಲೇಪ ಹೆಚ್ಚು' ಎಂದು ಪ್ರತಿಪಾದಿಸಿದರು. ತಾವೇ ರಚಿಸಿದ ಕರಿಬೆಲ್ಲ, ಎಲ್ಲರ ಪಾದಕ್ಕೆ, ಕಂಬಾಲ ಬೆಂಕಿ, ಸಾಸಿವೆ ಕಾಳು ಹೊತ್ತ ಹೊರಟವನು, ಹಾಗೆಲ್ಲ ಜರಿಯಬೇಡಿ ನನ್ನ ದೇವರು ಕನ್ನಡ ಕವನವನ್ನು ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.