ADVERTISEMENT

ಕೈಗಾರಿಕೆ ಸ್ಥಾಪನೆಗೆ ಅಡೆತಡೆ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 19:30 IST
Last Updated 20 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ‘ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಅನುಷ್ಠಾನಕ್ಕೆ ತಂದಿದ್ದರೂ ಉದ್ಯಮ ಸ್ಥಾಪನೆಯಲ್ಲಿ ಹಲವು ಅಡೆತಡೆಗಳು ಎದುರಾಗಿ­ದ್ದರಿಂದ ಹೀರೊ ಮೋಟೊ ಕಾರ್ಪ್‌ ಹಾಗೂ ಪೋಸ್ಕೊದಂತಹ ಪ್ರಮುಖ ಸಂಸ್ಥೆಗಳು ರಾಜ್ಯ­ದಿಂದ ಹೊರ ನಡೆಯಬೇಕಾಯಿತು’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ­ಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಎಸ್‌.ಸಂಪತ್‌­ರಾಮನ್‌ ಅಸಮಾಧಾನ ವ್ಯಕ್ತಪಡಿಸಿದರು.

ಎಫ್‌ಕೆಸಿಸಿಐನಿಂದ ಶನಿವಾರ ಏರ್ಪಡಿಸಲಾ­ಗಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು. ‘ಹೀರೊ ಮೋಟೊ ಕಾರ್ಪ್‌ ಹಾಗೂ ಪೋಸ್ಕೊ ಸಂಸ್ಥೆಗಳಿಂದ ದೊಡ್ಡ ಪ್ರಮಾಣದ ಬಂಡವಾಳ ಹರಿದು ಬರುತ್ತಿತ್ತು. ಉದ್ಯೋಗ ಸೃಷ್ಟಿಯೂ ಆಗುತ್ತಿತ್ತು. ರಾಜ್ಯಕ್ಕೆ ಸಿಕ್ಕ ಅವಕಾಶ­ವನ್ನು ಸರ್ಕಾರ ಸಮರ್ಥವಾಗಿ ಬಳಸಿಕೊಳ್ಳದ ಪರಿಣಾಮ ಆ ಸಂಸ್ಥೆಗಳು ಬೇರೆ ಸ್ಥಳವನ್ನು ಹುಡುಕಿಕೊಂಡು ಹೋಗಬೇಕಾಯಿತು’ ಎಂದು ಹೇಳಿದರು.

‘ಭವಿಷ್ಯದಲ್ಲಿ ಮತ್ತೆ ಇಂತಹ ತಪ್ಪುಗಳು ನಡೆ­ಯ­ದಂತೆ ಎಚ್ಚರಿಕೆ ವಹಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಅವರು ಕಿವಿಮಾತು ತಿಳಿಸಿದರು. ‘ಎಫ್‌ಕೆಸಿಸಿಐನಿಂದ ಸರ್‌ ಎಂ. ವಿಶ್ವೇಶ್ವರಯ್ಯ ಆರ್ಥಿಕ ಸಂಶೋಧನಾ ಕೇಂದ್ರವನ್ನು ಆರಂಭಿಸ­ಲಾ­ಗಿದೆ’ ಎಂದೂ ಪ್ರಕಟಿಸಿದರು. ಸರ್‌ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಸ್ವೀಕರಿಸಿದ ಭಾರತ್‌ ಫೋರ್ಜ್‌ ಸಂಸ್ಥೆಯ ವ್ಯವ­ಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ, ‘ನಮ್ಮ ಕಾಲದ ಅಧಿಕಾರಶಾಹಿ ವ್ಯವಸ್ಥೆ ಈ ಹಿಂದೆಯೂ ಇದ್ದಿದ್ದರೆ ವಿಶ್ವೇಶ್ವರಯ್ಯನವರಿಗೆ ಅಷ್ಟೊಂದು ಸಾಧನೆ ಮಾಡಲು ಆಗುತ್ತಿರಲಿಲ್ಲ’ ಎಂದು ಹೇಳಿದರು.

‘ವಿವಿಧ ಇಲಾಖೆಗಳ ಸಚಿವರು, ಅಧಿಕಾರಿ­ಗಳಿಂದ ಎದುರಾಗುವ ಅಡೆತಡೆ ನಿವಾರಿಸಿ­ಕೊಂಡು ಉದ್ಯಮವನ್ನು ಯಶಸ್ಸಿನತ್ತ ಕೊಂಡೊ­ಯ್ಯು­ವುದು ಸುಲಭವಲ್ಲ’ ಎಂದು ಅಭಿಪ್ರಾಯ­ಪಟ್ಟರು. ‘ದೇಶದ ಜನಸಂಖ್ಯೆಯಲ್ಲಿ ಶೇ 60ರಿಂದ 70ರಷ್ಟು ಜನ ಯುವಕರಿದ್ದು, ಉತ್ಪಾದನಾ ವಲಯದಲ್ಲಿ ನಮ್ಮ ಸಾಮರ್ಥ್ಯ ಪ್ರದರ್ಶಿಸ­ಬೇಕಿದೆ’ ಎಂದ ಅವರು, ‘2022ರ ವೇಳೆಗೆ ದೇಶದ ನಿವ್ವಳ ಆಂತರಿಕ ಉತ್ಪನ್ನಕ್ಕೆ ಉತ್ಪಾದನಾ ವಲಯದಿಂದ ಶೇ 25ರಷ್ಟು ಕೊಡುಗೆ ನೀಡುವ ಗುರಿ ಇದೆ’ ಎಂದು ವಿವರಿಸಿದರು.

‘ರೈಲ್ವೆ ಯೋಜನೆಗೆ ಬಂಡವಾಳ: ಚೀನಾ – ಜಪಾನ್‌ ಪೈಪೋಟಿ’

ಬೆಂಗಳೂರು: ‘ಭಾರತೀಯ ರೈಲ್ವೆ ಯೋಜನೆಗಳಿಗೆ ಬಂಡವಾಳ ಹೂಡಲು ಚೀನಾ ಹಾಗೂ ಜಪಾನ್ ದೇಶಗಳ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ವಿದೇಶಿ ಬಂಡವಾಳದ ಮೂಲಕ ರೈಲ್ವೆ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡುವ ಪ್ರಸ್ತಾವಕ್ಕೆ ಬಲ ಬಂದಿದೆ’ ಎಂದು ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.

ಶನಿವಾರ ಎಫ್‌ಕೆಸಿಸಿಐ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ‘ಮುಂಬೈ–ಅಹ್ಮದಾಬಾದ್‌ ನಡುವಿನ ಬುಲೆಟ್‌ ರೈಲು ಯೋಜನೆಗೆ ಬಂಡವಾಳ ತೊಡಗಿ­ಸಲು ಜಪಾನ್‌ ಆಸಕ್ತಿ ತೋರಿದೆ. ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಈಗಾಗಲೇ ಮಾರ್ಗ ಸಮೀಕ್ಷೆ ಕಾರ್ಯವನ್ನು ಆರಂಭಿಸಿದ್ದು, 2015ರ ಜೂನ್‌ 15ರಂದು ವರದಿ ನೀಡಲಿದೆ’ ಎಂದು ಹೇಳಿದರು.

‘ಅತಿವೇಗದ (ಹೈ ಸ್ಪೀಡ್‌) ರೈಲು ಮಾರ್ಗಗಳ ನಿರ್ಮಾಣಕ್ಕೆ ಚೀನಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಚೆನ್ನೈ–ಬೆಂಗಳೂರು–ಮೈಸೂರು ಸೇರಿದಂತೆ ಹಲವು ಮಾರ್ಗಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಕಾಲಮಿತಿಯಲ್ಲಿ ಯೋಜನೆ ಪೂರೈಸುವ ಗುರಿ ನಮ್ಮದಾ­ಗಿದೆ. ‘ರೈಲ್ವೆ ಯೋಜನೆಗಳ ತ್ವರಿತಗತಿ ಅನುಷ್ಠಾನಕ್ಕೆ ವಿದೇಶಿ ಬಂಡವಾಳ ಮಾತ್ರವಲ್ಲದೆ ಸಾರ್ವ­ಜನಿಕ ಖಾಸಗಿ ಸಹಭಾಗಿತ್ವ ಕೂಡ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಧಾನಿ ನರೇಂದ್ರ ಮೋದಿ ಅವರ ರೂಪ­ದಲ್ಲಿ ದೇಶಕ್ಕೆ ಒಳ್ಳೆಯ ನಾಯಕತ್ವ ಸಿಕ್ಕಿದೆ. ರಾಜಕೀಯ ಅಸ್ಥಿರತೆ ಕೂಡ ದೂರವಾಗಿದೆ. ಪ್ರಧಾನಿ ನಮ್ಮ ಮೇಲೆ ಇಟ್ಟಿರುವ ಭರವಸೆ­ಯನ್ನು ಈಡೇರಿಸಲಿದ್ದೇವೆ’ ಎಂದು ಹೇಳಿದರು.

ಯೋಜನಾ ಆಯೋಗದ ಸದಸ್ಯರಾಗಿದ್ದ ಡಾ. ನರೇಂದ್ರ ಜಾಧವ್‌ ಸರ್‌ ಎಂ.ವಿ ಸ್ಮಾರಕ ಉಪನ್ಯಾಸ ನೀಡಿದರು. ‘ದೇಶಕ್ಕೆ ಹರಿದುಬಂದ ಬಂಡವಾಳ ಅಮೆರಿಕದ ಕಠಿಣ ಆರ್ಥಿಕ ನೀತಿ­ಯಿಂದಾಗಿ ವಾಪಸು ಹೋಗುವ ಭೀತಿಯಿದ್ದು, ತೈಲ ಬೆಲೆಯ ಏರಿಳಿತ ಸಹ ದೇಶದ ಅರ್ಥ­ವ್ಯವಸ್ಥೆ ಮೇಲೆ ಬಹುದೊಡ್ಡ ಪರಿಣಾಮ ಬೀರ­ಲಿದೆ. ಈ ಸವಾಲನ್ನು ಹೇಗೆ ನಿಭಾಯಿಸಲಾಗು­ತ್ತದೆ ಎಂಬುದರ ಮೇಲೆ ಭವಿಷ್ಯದ ಪ್ರಶ್ನೆ ಅಡಗಿದೆ’ ಎಂದು ವಿವರಿಸಿದರು.

‘ದೇಶದ ಯುವಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಿಕ್ಷಣ ಹಾಗೂ ಕೌಶಲ ವೃದ್ಧಿ­ಯತ್ತ ಗಮನಹರಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು. ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ, ‘ಕೈಗಾರಿಕೆ ಅಭಿವೃದ್ಧಿಯಲ್ಲಿನ ಎಲ್ಲ ಅಡೆತಡೆ ನಿವಾರಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಉದ್ಯಮಿಗಳ ಅಗತ್ಯವನ್ನು ಪೂರೈಸಲು ಒಂದೇ ಸ್ಥಳದಲ್ಲಿ ಪೂರೈಸಲು ‘ಇ–ಪ್ಲಾಟ್‌ಫಾರ್ಮ್‌’ ಎಂಬ ಏಕಗವಾಕ್ಷಿ ಯೋಜನೆಯನ್ನು ಡಿಸೆಂಬರ್‌ 31ರಿಂದ ಆರಂಭಿಸಲಾಗುತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.