ADVERTISEMENT

ಕೊಲೆ ಆರೋಪಿ ಕವಿರಾಜ್‌ಗೆ ಹೈಕೋರ್ಟ್‌ ಜಾಮೀನು

​ಪ್ರಜಾವಾಣಿ ವಾರ್ತೆ
Published 28 ಮೇ 2015, 19:48 IST
Last Updated 28 ಮೇ 2015, 19:48 IST

ಬೆಂಗಳೂರು: ನಗರದ ಶಬನಾ ಡೆವಲಪರ್ಸ್‌ನ ಮುಖ್ಯಸ್ಥ ಸಮಿವುಲ್ಲಾ ಅವರ ಸ್ನೇಹಿತ ರವಿ ಎಂಬುವರನ್ನು 2007ರಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದ ಆರೋಪಿ ಕವಿರಾಜ್‌ಗೆ ಹೈಕೋರ್ಟ್‌ ಜಾಮೀನು ನೀಡಿದೆ.

ತಿಲಕ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಭೂಗತ ಪಾತಕಿ ರವಿ ಪೂಜಾರಿ ಸೂಚನೆ ಮೇರೆಗೆ ಕವಿರಾಜ್ ಈ ಕೊಲೆ ಮಾಡಿದ್ದ ಎಂಬ ಆರೋಪ ಇದೆ. ಜಾಮೀನು ಕೋರಿ ಕವಿರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ನಡೆಸಿದರು. ‘₨ 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ನೀಡಬೇಕು. ಅಧೀನ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕು’ ಎಂದು ಕವಿರಾಜ್‌ಗೆ ಷರತ್ತು ವಿಧಿಸಲಾಗಿದೆ.

ಕೊಲೆ ಪ್ರಕರಣದಲ್ಲಿ ಕವಿರಾಜನನ್ನು ಬಂಧಿಸಲಾಗಿತ್ತು. ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ, ಅಧೀನ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಜಾಮೀನು ರದ್ದುಪಡಿಸಲಾಗಿತ್ತು. ಜಾಮೀನು ಕೋರಿ ಕವಿರಾಜ್ ಹೈಕೋರ್ಟ್‌ ಮೊರೆ ಹೋಗಿದ್ದ. ‘ನನ್ನ ಕಕ್ಷಿದಾರರ ತಂದೆ ಸಾವನ್ನಪ್ಪಿದ್ದರು. ತಂದೆಯ ಅಂತಿಮ ಕಾರ್ಯ ಇದ್ದ ಕಾರಣ ವಿಚಾರಣೆಗೆ ಹಾಜರಾಗಲು ಆಗಲಿಲ್ಲ’ ಎಂದು ವಕೀಲ ಎಸ್.ಶಂಕರಪ್ಪ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.