ADVERTISEMENT

ಕ್ಯಾಬ್ ಕದ್ದು ಐದೇ ತಾಸಿನಲ್ಲಿ ಸಿಕ್ಕಿಬಿದ್ದ!

ಕ್ಯಾಬ್ ಬುಕ್ ಮಾಡಿ ದರೋಡೆ ಮಾಡುವ ಗ್ಯಾಂಗ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:46 IST
Last Updated 11 ಜುಲೈ 2017, 19:46 IST
ಆರೋಪಿಯನ್ನು ಸೆರೆ ಹಿಡಿದ ಗಸ್ತು ಪೊಲೀಸರು
ಆರೋಪಿಯನ್ನು ಸೆರೆ ಹಿಡಿದ ಗಸ್ತು ಪೊಲೀಸರು   

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಕ್ಯಾಬ್ ಬುಕ್ ಮಾಡಿದ ನಾಲ್ವರು ಚಾಲಾಕಿಗಳು, ಮಾರ್ಗಮಧ್ಯೆ ಚಾಲಕನಿಗೆ  ಬೆದರಿಸಿ ಕ್ಯಾಬ್ ಕದ್ದೊಯ್ದಿದ್ದರು. ತಕ್ಷಣ ಕಾರ್ಯಾಚರಣೆಗಿಳಿದ ಗಸ್ತು ಪೊಲೀಸರು,  ಸಿನಿಮೀಯ ರೀತಿಯಲ್ಲಿ ಅವರನ್ನು ಹಿಂಬಾಲಿಸಿ ಗ್ಯಾಂಗ್‌ನ ಸದಸ್ಯನೊಬ್ಬನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

‘ಲಗ್ಗೆರೆ ಸಮೀಪದ ಚೌಡೇಶ್ವರಿನಗರ ನಿವಾಸಿ ವಿನೋದ್ ಎಂಬಾತನನ್ನು ಬಂಧಿಸಿ, ಕ್ಯಾಬ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದೇವೆ. ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡ ನಾಗೇಶ್, ಗಣೇಶ್ ಹಾಗೂ ಕಾರ್ತಿಕ್ ಅವರ ಶೋಧ ನಡೆಯುತ್ತಿದೆ. ಈ ಗ್ಯಾಂಗ್ ಸೋಮವಾರ ರಾತ್ರಿ ಕೊಡಿಗೇಹಳ್ಳಿ ಕ್ರಾಸ್‌ ಬಳಿ ಚಾಲಕ ಹರೀಶ್‌ ಅವರನ್ನು ಬೆದರಿಸಿ ಕ್ಯಾಬ್ ಕದ್ದೊಯ್ಯುತ್ತಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾಗೇಶನದ್ದೇ ಸಂಚು:‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ಹೋಗಬೇಕು’ ಎಂದು ನಾಗೇಶ್ ಸೋಮವಾರ ರಾತ್ರಿ ಕ್ಯಾಬ್ ಬುಕ್ ಮಾಡಿದ್ದ. ಅಂತೆಯೇ ರಾತ್ರಿ 10.30ಕ್ಕೆ ಕ್ಯಾಬ್‌ (ಕೆಎ 50–ಎ–1562) ತೆಗೆದುಕೊಂಡು ಲಗ್ಗೆರೆಗೆ ಹೋದ ಹರೀಶ್, ನಾಲ್ವರನ್ನೂ ಹತ್ತಿಸಿಕೊಂಡು ಕೆಐಎಎಲ್‌ ಕಡೆಗೆ ಹೊರಟಿದ್ದರು.

ADVERTISEMENT

ಮಾರ್ಗಮಧ್ಯೆ ಲಾಂಗು–ಮಚ್ಚು ತೋರಿಸಿ ಚಾಲಕನನ್ನು ಬೆದರಿಸಿದ ಆರೋಪಿಗಳು, ಅವರನ್ನು ಕೊಡಿಗೇಹಳ್ಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಮನಸೋಇಚ್ಛೆ ಹಲ್ಲೆ ಮಾಡಿ, ₹ 5 ಸಾವಿರ ನಗದು ಮತ್ತು ಮೊಬೈಲ್ ಕಿತ್ತುಕೊಂಡಿದ್ದರು. ಕೊನೆಗೆ ಅವರನ್ನು ರಸ್ತೆಗೆ ದೂಡಿ ಕ್ಯಾಬ್ ಸಮೇತ ಪರಾರಿಯಾಗಿದ್ದರು.

ಆ ನಂತರ ಹರೀಶ್, ದಾರಿಹೋಕರ ಬಳಿ ಮೊಬೈಲ್ ಪಡೆದು ಪೊಲೀಸ್ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿದ್ದರು. ತಕ್ಷಣ ನಗರದ ಎಲ್ಲ ಠಾಣೆಗಳಿಗೂ ನಿಯಂತ್ರಣ ಕೊಠಡಿಯಿಂದ ಮಾಹಿತಿ ರವಾನೆಯಾಯಿತು.

ಹೀಗಿತ್ತು ಕಾರ್ಯಾಚರಣೆ: ರಾತ್ರಿ ಪಾಳಿಯಲ್ಲಿದ್ದ ಪೊಲೀಸರು ನಗರದ ವಿವಿಧೆಡೆ ನಾಕಾಬಂದಿ ಹಾಕಿಕೊಂಡು ಕ್ಯಾಬ್‌ಗಾಗಿ ಶೋಧ ನಡೆಸುತ್ತಿದ್ದರು.  ಕೆಂಗೇರಿ ಎಸ್‌ಐ ನಂಜುಂಡಸ್ವಾಮಿ ಹಾಗೂ ಕಾನ್‌ಸ್ಟೆಬಲ್‌ ಲೋಕೇಶ್ ಅವರು ಕೆಂಗೇರಿ ಟೋಲ್‌ಗೇಟ್ ಬಳಿ ನಿಂತಿದ್ದರು.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಾಲ್ವರು ಯುವಕರಿದ್ದ ಕ್ಯಾಬ್ ಅವರ ಮುಂದೆಯೇ ವೇಗವಾಗಿ ಹೋಗಿದೆ.  ಸಿಬ್ಬಂದಿ ನೋಂದಣಿ ಸಂಖ್ಯೆ ಗಮನಿಸಿದಾಗ, ಅವರೇ ದರೋಡೆಕೋರರು ಎಂಬುದು ಖಚಿತವಾಗಿದೆ.

‘ಚೀತಾ’ವೂ ಬಂತು: ಆ ಕೂಡಲೇ ಎಸ್‌ಐ ಹಾಗೂ ಕಾನ್‌ಸ್ಟೆಬಲ್  ಹೊಯ್ಸಳದಲ್ಲಿ ಆ ಕ್ಯಾಬ್ ಹಿಂಬಾಲಿಸಿದ್ದರು. ಇದೇ ವೇಳೆ ಎಎಸ್‌ಐ ಈಶ್ವರ್ ಹಾಗೂ ಗೃಹರಕ್ಷಕ ದಳದ ಕಿರಣ್ ಅವರು ಮೈಸೂರು ರಸ್ತೆಯಲ್ಲೇ ಚೀತಾ ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದರು. ಹೊಯ್ಸಳವು ಕ್ಯಾಬ್ ಹಿಂಬಾಲಿಸಿ ಹೋಗುತ್ತಿರುವುದನ್ನು ಕಂಡು ಅವರೂ ಚೀತಾದಲ್ಲಿ ಹೊರಟರು. ಆದರೆ, ಕೆಂಗೇರಿ ಜಂಕ್ಷನ್‌ ಬಳಿ ವಾಹನಗಳು ಅಡ್ಡ ಬಂದಿದ್ದರಿಂದ ಕ್ಯಾಬ್ ಕಣ್ಮರೆಯಾಗಿತ್ತು.

ಮತ್ತೆ ಸಿಕ್ಕರು: ಪೊಲೀಸರಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದ ದುಷ್ಕರ್ಮಿಗಳು, ಕೆಂಗೇರಿ ಕೆರೆ ದಂಡೆ ಬಳಿ ಕ್ಯಾಬ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಆದರೆ, ಗಸ್ತು ಸಿಬ್ಬಂದಿ ದರೋಡೆಕೋರರನ್ನು ಹುಡುಕಿಕೊಂಡು ಅದೇ ಮಾರ್ಗದಲ್ಲಿ ಬಂದಿದ್ದರು. ಅವರನ್ನು ನೋಡುತ್ತಿದ್ದಂತೆಯೇ ಮೂವರು ಪರಾರಿಯಾಗಿದ್ದು, ವಿನೋದ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಮೆಚ್ಚುವ ಕೆಲಸ
‘ಮಾಹಿತಿ ಸಿಕ್ಕ ಕೂಡಲೇ ಜಾಗೃತರಾಗಿ ದರೋಡೆಕೋರನನ್ನು ಬಂಧಿಸಿರುವ ಗಸ್ತು ಸಿಬ್ಬಂದಿಯ ಕಾರ್ಯವೈಖರಿ ನಿಜಕ್ಕೂ ಮೆಚ್ಚುವಂಥದ್ದು. ಕ್ಯಾಬ್ ಕದ್ದೊಯ್ದ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಆರೋಪಿಯನ್ನು ಅಲ್ಲಿನ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಹೇಳಿದ್ದಾರೆ.

ರೌಡಿಶೀಟರ್ ನಾಗೇಶ್

ಕೊಲೆ ಯತ್ನ, ಹಲ್ಲೆ, ದರೋಡೆ ಸೇರಿದಂತೆ ನಾಗೇಶನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ದರೋಡೆ ಪ್ರಕರಣದಲ್ಲಿ ಹಿಂದೆಯೂ ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. 2016ರಲ್ಲಿ ಕೆಂಗೇರಿ ಪೊಲೀಸ್‌ ಠಾಣೆಯ ರೌಡಿಗಳ ಪಟ್ಟಿಯಲ್ಲಿ ನಾಗೇಶ್‌ನ ಹೆಸರು ಸೇರಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.