ADVERTISEMENT

ಕ್ರಿಕೆಟ್‌ ಕ್ಲಬ್ ಅತಿಕ್ರಮಿಸಿದ್ದ ಮೈದಾನ ತೆರವು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2015, 19:56 IST
Last Updated 28 ನವೆಂಬರ್ 2015, 19:56 IST

ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಮತ್ತು  ಸುಜಿತ್ ಸೋಮಸುಂದರ್ ಅವರಿಗೆ ಸೇರಿದ ‘ಸ್ಟಾರ್ಟಿಂಗ್ ಲೈನ್‌ ಸ್ಪೋರ್ಟ್ಸ್‌’ ಕ್ಲಬ್‌ ಅತಿಕ್ರಮಿಸಿಕೊಂಡಿದ್ದ, ಇಂದಿರಾನಗರ 1ನೇ ಹಂತದ ಬಿಬಿಎಂಪಿಗೆ ಸೇರಿದ ಮೈದಾನವನ್ನು ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಶನಿವಾರ ತೆರವುಗೊಳಿಸಿದರು.

ತೆರವಾದ ಸ್ಥಳದಲ್ಲಿ ಕ್ಲಬ್‌ನ ತಾತ್ಕಾಲಿಕ ಕಚೇರಿ ಇತ್ತಲ್ಲದೆ, ಕ್ರಿಕೆಟ್‌ ಅಭ್ಯಾಸಕ್ಕಾಗಿ ನೆಟ್‌ ಹಾಕಲಾಗಿತ್ತು. ಸಾರ್ವಜನಿಕ ಮೈದಾನದ ಅರ್ಧದಷ್ಟು ಸ್ಥಳವನ್ನು ಕ್ಲಬ್ ಅತಿಕ್ರಮಿಸಿಕೊಂಡಿದೆ ಎಂದು ಆರೋಪಿಸಿದ್ದ  ಇಂದಿರಾನಗರ ನಿವಾಸಿಗಳ ಸಂಘ, ಈ ಸ್ಥಳವನ್ನು ತೆರವುಗೊಳಿಸಬೇಕು ಎಂದು ಬಿಬಿಎಂಪಿಗೆ ದೂರು ಕೊಟ್ಟಿತ್ತು.

‘ಕ್ಲಬ್‌ಗಾಗಿ ಬಿಬಿಎಂಪಿ ಅನುಮತಿ ನೀಡಿದೆ ಎಂದು ಅವರು ಹೇಳಿದ್ದರು. ಆದರೆ, ನಾವು ಯಾವುದೇ ಅನುಮತಿ ನೀಡಿಲ್ಲ ಎಂಬುದಾಗಿ ಬಿಬಿಎಂಪಿ ಸ್ಪಷ್ಟಪಡಿಸಿದೆ’ ಎಂದು ಸಂಘದ ವಕ್ತಾರ ಬಾಬು ಕುಮಾರ್ ಹೇಳಿದರು.

ಮೈದಾನ ತೆರವುಗೊಳಿಸುವುದಾಗಿ ಹೇಳಿದ್ದ ಬಿಬಿಎಂಪಿ ಅಧಿಕಾರಿಗಳು, ಅದಕ್ಕಾಗಿ ಪೊಲೀಸ್ ಭದ್ರತೆ ಕೋರಿದ್ದರು. ಹಾಗಾಗಿ ಸುಮಾರು 10 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಇಂದಿರಾನಗರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.