ADVERTISEMENT

ಕ್ಲಾಸಿಕ್‌ ಆರ್ಚರ್ಡ್ಸ್‌ ಪ್ರವೇಶದ್ವಾರ ತೆರವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2016, 20:00 IST
Last Updated 21 ಅಕ್ಟೋಬರ್ 2016, 20:00 IST

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಕ್ಲಾಸಿಕ್‌ ಆರ್ಚರ್ಡ್ಸ್‌ ಬಡಾವಣೆಯ ರಸ್ತೆಯಲ್ಲಿ ನಿರ್ಮಿಸಿದ್ದ ಪ್ರವೇಶದ್ವಾರ ಹಾಗೂ ಭದ್ರತಾ ಸಿಬ್ಬಂದಿ ಕೊಠಡಿಯನ್ನು ಬಿಬಿಎಂಪಿ ಶುಕ್ರವಾರ ತೆರವುಗೊಳಿಸಿದೆ.

ಬನ್ನೇರುಘಟ್ಟ ರಸ್ತೆಯಿಂದ ಜಂಬೂಸವಾರಿ ದಿಣ್ಣೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪರ್ಯಾಯ ರಸ್ತೆಯಾಗಿದ್ದ ಈ 60 ಅಡಿ ರಸ್ತೆಯನ್ನು ಸಾರ್ವಜನಿಕರು ಬಳಕೆ ಮಾಡದಂತೆ ಪ್ರವೇಶದ್ವಾರ ನಿರ್ಮಾಣ ಮಾಡಲಾಗಿತ್ತು. ಅದನ್ನು ತೆರವು ಮಾಡಲಾಗಿದ್ದು, ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಕ್ಲಾಸಿಕ್ ಆರ್ಚರ್ಡ್ಸ್‌ ಬಡಾವಣೆ ನಿರ್ಮಾಣಕ್ಕೆ ಈ ಹಿಂದೆ ಗೊಟ್ಟಿಗೆರೆ ಗ್ರಾಮ ಪಂಚಾಯಿತಿ ಅನುಮೋದನೆ ನೀಡಿತ್ತು. ಬಳಿಕ 2006ರಲ್ಲಿ ಬಡಾವಣೆಯು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡಿತ್ತು. ನಿಯಮಗಳ ಪ್ರಕಾರ ರಸ್ತೆಯು ಬಿಬಿಎಂಪಿ ಸ್ವತ್ತಾಗಿದ್ದರೂ, ಬಡಾವಣೆ ಅಭಿವೃದ್ಧಿ ಮಾಡಿದವರು ಆ  ರಸ್ತೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಮಾಡಿದ್ದರು ಎಂದರು. 

2014ರಲ್ಲಿ ನೋಟಿಸ್ ಜಾರಿ ಮಾಡಿ, ಪ್ರವೇಶ ದ್ವಾರವನ್ನು ಭಾಗಶಃ ತೆರವುಗೊಳಿಸಲಾಗಿತ್ತು. ಬಳಿಕ ಮರಳಿನ ಮೂಟೆ ಇಟ್ಟು ಹಾಗೂ ಕಬ್ಬಿಣದ ಗೇಟು ಅಳವಡಿಸಿಕೊಂಡು ಸಾರ್ವಜನಿಕರನ್ನು ತಡೆಯುತ್ತಿದ್ದ ಬಡಾವಣೆ ನಿವಾಸಿಗಳ ಸಂಘ, ಹೈಕೋರ್ಟ್ ಮೊರೆ ಹೋಗಿತ್ತು ಎಂದು ತಿಳಿಸಿದರು.

‘ಉದ್ಯಾನ ಹಾಗೂ ರಸ್ತೆ ನಮಗೆ ಸೇರಬೇಕು. ಬಡಾವಣೆಯ ನಿವಾಸಿಗಳನ್ನು ಹೊರತುಪಡಿಸಿ ಉಳಿದವರನ್ನು ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ನಿವಾಸಿಗಳ ಸಂಘ ಹೇಳಿತ್ತು. ಆದರೆ, ಹೈಕೋರ್ಟ್ ರಸ್ತೆಯನ್ನು ಕೂಡಲೇ ಬಿಬಿಎಂಪಿ ವಶಕ್ಕೆ ನೀಡುವಂತೆ ಆದೇಶ ಮಾಡಿತ್ತು’ ಎಂದರು.

‘ಕಾನೂನು ಹೋರಾಟ ನಡೆಸುತ್ತೇವೆ’
ಕ್ಲಾಸಿಕ್‌ ಆರ್ಚರ್ಡ್ಸ್‌ ಬಡಾವಣೆ ಗೇಟೆಡ್‌ ಕಮ್ಯುನಿಟಿ (ಇಡೀ ಬಡಾವಣೆಗೆ ಕಾಂಪೌಂಡ್‌ ಇದ್ದು, ಅನುಮತಿ ಇದ್ದವರಿಗಷ್ಟೇ ಒಳಗೆ ಪ್ರವೇಶ) ಆಗಿದ್ದು, ಇಲ್ಲಿನ ರಸ್ತೆಗಳನ್ನು ಬಿಬಿಎಂಪಿ ಅಕ್ರಮವಾಗಿ ವಶಕ್ಕೆ ಪಡೆಯುತ್ತಿದೆ. ಈ ಕ್ರಮದ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದೇವೆ ಎಂದು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಬ್ಬು ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ವಶಕ್ಕೆ ಪಡೆಯದಂತೆ ನಿರ್ದೇಶನ ನೀಡಬೇಕು ಎಂದು ಕೋರ್ಟ್‌ಗೆ ಮೊರೆ ಹೋಗಲಾಗಿದೆ. ನ್ಯಾಯ ಸಿಗುವವರೆಗೆ ನಾವು ಹೋರಾಟ ನಡೆಸುತ್ತೇವೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲೂ ದಾವೆ ಹೂಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.