ADVERTISEMENT

‘ಖಾದಿ ಉತ್ಸವ –17’: ಅಚ್ಚ ಖಾದಿಯ ರಂಗು ಅನಾವರಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 20:29 IST
Last Updated 24 ಏಪ್ರಿಲ್ 2017, 20:29 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚೆ ಖರೀದಿಸಿದರು. ಖಾದಿ ಮಂಡಳಿ ಅಧ್ಯಕ್ಷ  ಯಲುವನಹಳ್ಳಿ ಎನ್‌. ರಮೇಶ್ ಇದ್ದರು    –ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚೆ ಖರೀದಿಸಿದರು. ಖಾದಿ ಮಂಡಳಿ ಅಧ್ಯಕ್ಷ ಯಲುವನಹಳ್ಳಿ ಎನ್‌. ರಮೇಶ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಖಾದಿಯ ಬಟ್ಟೆ, ಕೌದಿ, ಕಂಬಳಿ... ಅಲ್ಲಿ ಎತ್ತ ಕಣ್ಣು ಹಾಯಿಸಿದರೂ ಗ್ರಾಮೀಣ ಜನರ ಕೈಯಲ್ಲಿ ಅರಳಿದ್ದ  ವಸ್ತ್ರಗಳೇ  ಕಾಣಿಸುತ್ತಿದ್ದವು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಸ್ವಾತಂತ್ರ್ಯ ಉದ್ಯಾನದಲ್ಲಿ ಏರ್ಪಡಿಸಿರುವ ‘ಖಾದಿ ಉತ್ಸವ –17’ ರಾಷ್ಟ್ರ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಮತ್ತು ಮಾರಾಟದಲ್ಲಿ ಕಂಡುಬಂದ ದೃಶ್ಯವಿದು.

ಖಾದಿ ಬಟ್ಟೆ ತಯಾರಿಸುವ ಬಗೆ ಹೇಗೆ ಎಂಬ ಮಾಹಿತಿ ಮೊದಲ ಮಳಿಗೆಯಲ್ಲಿ ದೊರೆಯುತ್ತದೆ. ಈ ಬಗ್ಗೆ ಮಾಹಿತಿ ನೀಡಲು ನಂಜನಗೂಡು, ಬದನವಾಳುವಿನ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘದ ಸದಸ್ಯರು ದಾರ ಸುತ್ತುವ ಯಂತ್ರ, ನೇಯ್ಗೆ ಯಂತ್ರ ಹಾಗೂ ಚರಕದೊಂದಿಗೆ ಬಂದಿದ್ದರು.

ADVERTISEMENT

‘ಈ ಯಂತ್ರದಲ್ಲಿ ದೊಡ್ಡದಾದ ದಾರದ ಉಂಡೆಯನ್ನು ಸುತ್ತಲಾಗುತ್ತದೆ. ನಂತರ ಚರಕದಲ್ಲಿ ಅಡ್ಡಹಾಕುವ ಚಿಕ್ಕ ದಾರದ ಉಂಡೆಯನ್ನು ಸುತ್ತಿಕೊಂಡು ನಂತರ ಅದನ್ನು ನೇಯ್ಗೆ  ಯಂತ್ರದಲ್ಲಿ ನೇಯಲಾಗುತ್ತದೆ’ ಎಂದು ಸಂಘದ ಸದಸ್ಯರೊಬ್ಬರು ವಿವರಿಸಿದರು.

ಬಿದಿರಿನ ಬುಟ್ಟಿಗಳು, ಕಿವಿಯೋಲೆ, ಸರ, ಗೃಹ ಆಲಂಕಾರಿಕ ವಸ್ತುಗಳು, ಕುಂಬಾರನ ಕೈಚಳಕದಲ್ಲಿ ಅರಳುವ ಹೂವಿನ ಕುಂಡಗಳು, ಮಣ್ಣಿನ ಹೂಜಿಗಳು ಆಕರ್ಷಿಸುತ್ತವೆ.

ಆಧುನಿಕತೆಗೆ ತಕ್ಕಂತೆ ಖಾದಿಯಲ್ಲೂ ವಿವಿಧ ವಿನ್ಯಾಸ, ಪ್ರಿಂಟ್‌ಗಳನ್ನು ಹೊತ್ತ ಕುರ್ತಾ, ಸೀರೆ, ಬಗೆಬಗೆ ಟಾಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಮಸ್ಲಿನ್ ಖಾದಿಯ ಸೀರೆಗಳ ಸೊಬಗು ಮನಸೂರೆಗೊಳ್ಳುತ್ತದೆ.

ಖಾದಿಯಲ್ಲೂ ಆಯ್ಕೆ ಬಯಸುವವರಿಗೆ ಅರಳೆ ಖಾದಿ, ಪಾಲಿ ಖಾದಿ, ಉಣ್ಣೆ ಖಾದಿ ಉತ್ಪನ್ನಗಳೂ ಇವೆ. ಇವುಗಳ ಮೇಲೆ ಶೇ 35ರಷ್ಟು ರಿಯಾಯಿತಿ ಇದೆ.  ರೇಷ್ಮೆ ಖಾದಿಗೆ ಶೇ 20ರಷ್ಟು ರಿಯಾಯಿತಿ ನೀಡಲಾಗಿದೆ.

ಇತ್ತೀಚೆಗೆ ತೀರಾ ಅಪರೂಪವೆನಿಸಿರುವ ಕರಿ ಕಂಬಳಿಗಳೂ ಮೇಳದಲ್ಲಿ ಗಮನ ಸೆಳೆಯುತ್ತಿವೆ.  ಉಣ್ಣೆಯಿಂದ ತಯಾರಿಸಿದ ಕಂಬಳಿ, ಕೌದಿಗಳನ್ನು ನೋಡಿದಾಕ್ಷಣ ಗ್ರಾಮೀಣ ಬದುಕು ಒಮ್ಮೆಲೇ ಕಣ್ಣ ಮುಂದೆ ಬರುತ್ತದೆ.

ರಂಗಿನಲ್ಲಿ ಮಿಂದೆದ್ದ ಇಳಕಲ್ ಸೀರೆಗಳನ್ನು ಇಲ್ಲಿ ಕಾಣಬಹುದು. ಇವುಗಳೊಂದಿಗೆ ರೇಷ್ಮೆ ಸೀರೆಗಳೂ ರಾರಾಜಿಸುತ್ತಿದ್ದವು. ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಸಿದ್ಧಗೊಂಡಿರುವ ರೇಷ್ಮೆ ಸೀರೆಗಳಲ್ಲೂ ಬಣ್ಣ  ವೈವಿಧ್ಯ ಸೊಗಸೆನಿಸಿತ್ತು. ಪಶ್ಚಿಮ ಬಂಗಾಳದ ಬಾಲಚೂರಿ ಹಾಗೂ ಪ್ರಿಂಟೆಡ್ ವಸ್ತ್ರಗಳೂ ಇದ್ದವು.

ಮರದ ಕೆತ್ತನೆಯ ವಸ್ತುಗಳು, ಪೀಠೋಪಕರಣಗಳು, ಚರ್ಮದ ಪರಿಕರಗಳು, ಗ್ರಾಮೀಣ ಕುಂಬಾರಿಕೆಯ ಕುಶಲ ವಸ್ತುಗಳು, ಕೈ ಚೀಲಗಳು, ಶುದ್ಧ ಜೇನುತುಪ್ಪ ಮತ್ತು ಔಷಧಿಗಳು ಉತ್ಸವದಲ್ಲಿದ್ದವು.

ಅನೇಕ ವರ್ಷಗಳಿಂದ ಖಾದಿ ಉದ್ಯಮದಲ್ಲಿ ದುಡಿದ ಪುಟ್ಟಮಾದಮ್ಮ ಮತ್ತು ಹೊನ್ನಮ್ಮ ಅವರಿಗೆ ‘ಸ್ಪಿನ್ನಿಂಗ್‌’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಖಾದಿ ಗ್ರಾಮೋದ್ಯೋಗ ಮಂಡಳಿಯ ನಿವೃತ್ತ ನೌಕರರಾದ ಶತಾಯುಷಿ ಎಚ್.ಪಿ.ಸುರಭಿ ಅವರನ್ನು ಗೌರವಿಸಲಾಯಿತು.

ಎಲ್ಲಿ, ಎಷ್ಟು ದಿನ ಉತ್ಸವ?
ಸ್ವಾತಂತ್ರ್ಯ ಉದ್ಯಾನದಲ್ಲಿ  ಮೇ 23ರವರೆಗೆ ಉತ್ಸವ ನಡೆಯುತ್ತದೆ. ರಜಾ ದಿನಗಳಲ್ಲಿ ಸಂಜೆ  ಖಾದಿ ಫ್ಯಾಷನ್‌ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಅಂಕಿಅಂಶ

2.50ಲಕ್ಷ- ಜನ ಖಾದಿ ಉತ್ಸವಕ್ಕೆ ಭೇಟಿ ನೀಡುವ ನಿರೀಕ್ಷೆ

₹1.10ಕೋಟಿ- ಖಾದಿ ಉತ್ಸವದ ಒಟ್ಟು ವೆಚ್ಚ

189- ಒಟ್ಟು ಮಳಿಗೆಗಳ ಸಂಖ್ಯೆ

79- ಹೊರ ರಾಜ್ಯದ ಮಳಿಗೆಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.