ADVERTISEMENT

ಗಂಗಬೈರಯ್ಯಗೆ ಜಾಮೀನು

ರಸಾಯನ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:53 IST
Last Updated 29 ಆಗಸ್ಟ್ 2016, 19:53 IST

ಬೆಂಗಳೂರು: ದ್ವಿತೀಯ ಪಿ.ಯು. ರಸಾಯನ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದ ಆರೋಪಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮಾಜಿ ಸದಸ್ಯ ಗಂಗಬೈರಯ್ಯ ಅವರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಗಂಗಬೈರಯ್ಯ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಬಿ.ಶ್ರೀನಿವಾಸೇಗೌಡ ಅವರಿದ್ದ ಏಕಸದಸ್ಯ ಪೀಠವು ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಾಜರಾಗಿದ್ದ ಸಿ.ಎಚ್.ಹನುಮಂತರಾಯ, ‘ಅರ್ಜಿದಾರರು 66 ವರ್ಷದ ಹಿರಿಯ ನಾಗರಿಕ ಮತ್ತು ಎರಡು ಬಾರಿ ಪಾಲಿಕೆ ಸದಸ್ಯರಾಗಿದ್ದವರು.  ಇವರನ್ನು ಬಂಧಿಸಿದ ನಂತರ ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿಲ್ಲ. ಇವರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದ್ದು ಜಾಮೀನು ನೀಡಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು, ‘ಆರೋಪಿಯು ₹ 2 ಲಕ್ಷ ಮೊತ್ತದ ಬಾಂಡ್‌, ಇಷ್ಟೇ ಮೊತ್ತಕ್ಕೆ ಇಬ್ಬರ ವೈಯಕ್ತಿಕ ಭದ್ರತೆ ನೀಡಬೇಕು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ತನಿಖಾಧಿಕಾರಿ ಹಾಗೂ ಅಧೀನ ಕೋರ್ಟ್‌ ವಿಚಾರಣೆಗೆ ತಪ್ಪಿಸಿಕೊಳ್ಳದೆ ಹಾಜರಾಗಬೇಕು’ ಎಂಬ ಷರತ್ತುಗಳೊಡನೆ ಜಾಮೀನು ನೀಡಿದರು.

ಡಾ.ರಾಜ್‌ಕುಮಾರ್‌ ವಾರ್ಡ್‌ ಅನ್ನು ಎರಡು ಬಾರಿ ಪಾಲಿಕೆ ಸದಸ್ಯರಾಗಿ ಪ್ರತಿನಿಧಿಸಿರುವ ಗಂಗಬೈರಯ್ಯ ಕಳೆದ ತಿಂಗಳ 27ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಬಂಧಿತರಾದ ಕೊನೆಯ ಆರೋಪಿ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.