ADVERTISEMENT

ಗೊಂದಲ ಸೃಷ್ಟಿಸಿದ ಉಗ್ರರ ಹೆಸರು

ಐಐಎಸ್‌ಸಿ ದಾಳಿ ರೂವಾರಿ ಅಬು ಅಜೀಜ್ ಎಂದ ಹೆಡ್ಲಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:54 IST
Last Updated 12 ಫೆಬ್ರುವರಿ 2016, 19:54 IST

ಬೆಂಗಳೂರು: ‘ನಗರದ ಐಐಎಸ್‌ಸಿ ಬಳಿ ನಡೆದ ಉಗ್ರರ ದಾಳಿಯ ರೂವಾರಿ ಲಷ್ಕರ್‌–ಎ–ತಯಬಾದ (ಎಲ್‌ಇಟಿ) ಅಬು ಅಜೀಜ್’ ಎಂದು ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್‌ ಹೆಡ್ಲಿ ಹೇಳಿಕೆ ನೀಡಿರುವುದರಿಂದ  ಬೆಂಗಳೂರು ಪೊಲೀಸರು ಅಂದಿನ ಪ್ರಕರಣವನ್ನು ಪುನರ್‌ ಪರಿಶೀಲಿಸುವ ಸಾಧ್ಯತೆ ಇದೆ.

2005ರ ಡಿ.28ರಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬಳಿ ನಡೆದ ದಾಳಿಯಲ್ಲಿ ವಿಜ್ಞಾನಿ ಕೆ.ಸಿ.ಪುರಿ ಎಂಬುವರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು. ಆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ  ಆರೋಪ ಪಟ್ಟಿ ಸಲ್ಲಿಸಿದ್ದ ನಗರ ಪೊಲೀಸರು, ‘ಅಬು ಹಮ್ಜಾ ಹಾಗೂ ಶಬಾವುದ್ದೀನ್ ದಾಳಿಯ ಪ್ರಮುಖರು’ ಎಂದು ಹೇಳಿ ತನಿಖೆ ಪೂರ್ಣಗೊಳಿಸಿದ್ದರು.

ಆದರೆ, ವಿಡಿಯೊ ಕಾನ್ಫರೆನ್ಸ್ ಮೂಲಕ ಗುರುವಾರ ಮುಂಬೈ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಂಡ ಹೆಡ್ಲಿ, ಐಐಎಸ್‌ಸಿ ದಾಳಿಯಲ್ಲಿ ಅಬು ಅಜೀಜ್‌ನ ಹೆಸರು ಬಹಿರಂಗಪಡಿಸಿದ್ದಾನೆ.

‘ಅಜೀಜ್‌ ಯಾರು ಎಂಬುದು ಪತ್ತೆಯಾಗಬೇಕಿದೆ. ಅಬು ಅಜೀಜ್‌ ಹಾಗೂ ಅಬು ಹಮ್ಜಾ ಹೆಸರುಗಳಲ್ಲಿ ಸಾಮ್ಯತೆ ಇರುವುದರಿಂದ ಇಬ್ಬರೂ ಒಬ್ಬರೇ ಆಗಿರುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ನಗರ ಪೊಲೀಸರು ಪ್ರಕರಣವನ್ನು ಪುನರ್ ಪರಿಶೀಲಿಸುವುದು ಅನಿವಾರ್ಯ’ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಹಮ್ಜಾನೇ ದಾಳಿಕೋರ: ‘2007ರಲ್ಲಿ ಎಲ್‌ಐಟಿಯು ಪಾಕಿಸ್ತಾನದಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಹಮ್ಜಾ ಪಾಲ್ಗೊಂಡಿದ್ದ. ಮುಂಬೈ ದಾಳಿಯ ರೂವಾರಿ ಅಜ್ಮಲ್ ಕಸಬ್ ಸೇರಿದಂತೆ ಪಾಕಿಸ್ತಾನದ ಹಲವು ಉಗ್ರರು ಸಹ ಆ ಶಿಬಿರಕ್ಕೆ ಹೋಗಿದ್ದರು. ಆಗ ಹಮ್ಜಾ ತಾನು ಬೆಂಗಳೂರಿನ ಐಐಎಸ್‌ಸಿ ಬಳಿ ನಡೆಸಿದ್ದ ರೀತಿಯನ್ನು ಅವರ ಬಳಿ ಹೇಳಿಕೊಂಡಿದ್ದ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ನಾನು ಮತ್ತು ಮತ್ತೊಬ್ಬ ಅಧಿಕಾರಿ ಕಸಬ್‌ನನ್ನು ಖುದ್ದು ವಿಚಾರಣೆ ನಡೆಸಿದ್ದೆವು. ಆಗ ಆತ ಐಐಎಸ್‌ಸಿ ದಾಳಿಯಲ್ಲಿ ಹಮ್ಜಾನ ಪಾತ್ರವಿರುವುದನ್ನು ಬಾಯ್ಬಿಟ್ಟಿದ್ದ. ಆ ಶಿಬಿರದಲ್ಲಿದ್ದ ಇತರೆ ಉಗ್ರರು ಸಹ ಹಮ್ಜಾನ ಬಗ್ಗೆ ಹೇಳಿದ್ದರು. ನಗರದಲ್ಲಿ ದಾಳಿ ನಡೆಸಿ ಹೈದರಾಬಾದ್‌ಗೆ ತೆರಳಿದ್ದ ಹಮ್ಜಾ, ಅಲ್ಲಿಂದ ರೈಲಿನಲ್ಲಿ ಬಿಹಾರ ತಲುಪಿದ್ದ. ನಂತರ ನೇಪಾಳ ಮಾರ್ಗವಾಗಿ ಪಾಕಿಸ್ತಾನ ಸೇರಿದ್ದ.

ಸತ್ತಿದ್ದಾನೆ: ‘ಹಮ್ಜಾನ ನಿಜವಾದ ಹೆಸರು ಮೊಹಮ್ಮದ್ ರಮಾದಾನ್ ಮೊಹಮ್ಮದ್ ಸಿದ್ದಿಕಿ.  ಅನಾರೋಗ್ಯದಿಂದ ಬಳಲುತ್ತಿದ್ದ ಆತ, 2009ರಲ್ಲೇ ಮೃತಪಟ್ಟಿದ್ದಾನೆ ಎಂದು 26/11 ದಾಳಿಯ ಸಂಚುಕೋರ  ಅಬು  ಜುಂದಾಲ್ ತನಿಖಾಧಿಕಾರಿಗಳ ಮುಂದೆ ಹೇಳಿದ್ದಾನೆ’ ಎಂದು ಆ ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.