ADVERTISEMENT

ಗೋದಾಮಿಗೆ ಬೆಂಕಿ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 20:03 IST
Last Updated 31 ಜನವರಿ 2015, 20:03 IST

 ಬೆಂಗಳೂರು: ಕಮರ್ಷಿಯಲ್‌ ಸ್ಟ್ರೀಟ್‌ ಸಮೀಪದ ವೀರ­­ಪಿಳ್ಳೈ ಸ್ಟ್ರೀಟ್‌ನಲ್ಲಿ ಬಟ್ಟೆಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿಗೆ  ಶನಿವಾರ ಬೆಂಕಿ ಹೊತ್ತಿಕೊಂಡು ಲಕ್ಷಾಂ­ತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಹೋಗಿವೆ.

ವೀರಪಿಳ್ಳೈ ಸ್ಟ್ರೀಟ್‌ನಲ್ಲಿ ಅಲ್ತಾಫ್ ಎಂಬುವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡವಿದೆ. ಆ ಕಟ್ಟಡದ ನೆಲಮಾಳಿಗೆ ಮತ್ತು ಒಂದನೇ ಅಂತಸ್ತಿನ ಮನೆಯನ್ನು ಬಾಡಿಗೆ ಪಡೆದಿದ್ದ ವ್ಯಾಪಾರಿ ಮಹಮದ್‌ ಇಮ್ರಾನ್‌ ಉಲ್ಲಾ, ಅಲ್ಲಿ ಬಟ್ಟೆಗಳನ್ನು ಸಂಗ್ರಹಿಸಿಟ್ಟಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಮಳಿಗೆಯಿಂದ ದಟ್ಟ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು, ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಐದು ವಾಹನಗಳಲ್ಲಿ ಸ್ಥಳಕ್ಕೆ ತೆರಳಿದ 45 ಸಿಬ್ಬಂದಿ, ಐದು ತಾಸು­ಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ‘ಕರೆ ಬಂದ ಆರು ನಿಮಿಷಗಳಲ್ಲೇ ಘಟನಾ ಸ್ಥಳ ತಲುಪಿದ ಸಿಬ್ಬಂದಿ, ಬೀಗ ಮುರಿದು ಷಟರ್‌ ತೆರೆದರು. ಆದರೆ, ದಟ್ಟ ಹೊಗೆ ಇದ್ದ ಕಾರಣ ಒಳ ಹೋಗುವುದು ಕಷ್ಟವಾಯಿತು. ನಂತರ ಮೊದಲನೆ ಮಹಡಿಗೆ ತೆರಳಿ, ಡ್ರಿಲ್ಲಿಂಗ್ ಯಂತ್ರದಿಂದ ಅಂತಸ್ತನ್ನು ಕೊರೆಯಲಾ­ಯಿತು. ಅಲ್ಲಿಂದ ನೀರು ಸಿಂಪಡಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಲಾಯಿತು’ ಎಂದು ಅಗ್ನಿಶಾಮಕ ಅಧಿಕಾರಿಗಳು ವಿವರಿಸಿದರು.

‘ಬೆಂಕಿ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಕೃತಕ ಉಸಿರಾಟ ಸಾಧನ ಬಳಸಿ ಮಳಿಗೆಗೆ ಇಳಿದ ಸಿಬ್ಬಂದಿ, ಸಂಜೆ 7.30ಕ್ಕೆ ಸಂಪೂರ್ಣವಾಗಿ ಬೆಂಕಿ ನಂದಿಸಿದರು. ಶಾರ್ಟ್‌ ಸರ್ಕೀಟ್‌ನಿಂದ ಈ ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ. ನಷ್ಟದ ಪ್ರಮಾಣದ ಬಗ್ಗೆ ಖಚಿತ ಮಾಹಿತಿ ಇಲ್ಲ’ ಎಂದರು.
ಘಟನೆ ಸಂಬಂಧ ಇಮ್ರಾನ್‌, ಕಟ್ಟಡ ಮಾಲೀಕ ಅಲ್ತಾಫ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆ­ಯಲ್ಲಿ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.