ADVERTISEMENT

ಗ್ರಾ.ಪಂ. ನೌಕರರ ಮುಷ್ಕರ

­ಮಾ.1ರಿಂದ ಬೇಡಿಕೆ ಈಡೇರಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:55 IST
Last Updated 8 ಫೆಬ್ರುವರಿ 2016, 19:55 IST

ಬೆಂಗಳೂರು:  ‘ಕನಿಷ್ಠ ವೇತನ ಸೇರಿದಂತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಕಚೇರಿಗಳ ಮುಂದೆ ಮಾರ್ಚ್‌ 1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ’ ಎಂದು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಸೋಮವಾರ  ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 56 ಸಾವಿರ ಗ್ರಾಮ ಪಂಚಾಯಿತಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪೈಕಿ ಶೇ 70 ರಷ್ಟು ನೌಕರರಿಗೆ ಸರ್ಕಾರವೇ ನಿಗದಿ ಪಡಿಸಿದ ಕನಿಷ್ಠ ವೇತನ ದೊರೆಯುತ್ತಿಲ್ಲ. ಇನ್ನು ಹಲವೆಡೆ ವರ್ಷಗಟ್ಟಲೇ ಸಿಬ್ಬಂದಿಗೆ ಸಂಬಳ ನೀಡಿಲ್ಲ. ಹೀಗಾಗಿ, ನೌಕರರ ಜೀವನ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.

‘ರಾಜ್ಯದಲ್ಲಿ 28 ಸಾವಿರ ಸಿಬ್ಬಂದಿ ಕಳೆದ 20–25 ವರ್ಷಗಳಿಂದ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಸೇವೆಯನ್ನು  ಕಾಯಂಗೊಳಿಸು
ವಂತೆ ಒತ್ತಾಯಿಸುತ್ತಲೇ ಬರಲಾಗುತ್ತಿದೆ. ಆದರೆ, ಪಂಚಾಯತ್‌ ರಾಜ್‌ ಇಲಾಖೆಯು ಕಾಯಂಗೊಳಿಸಿದ ದಿನದಿಂದ ಸೇವೆಯನ್ನು ಪರಿಗಣಿಸ ಲಾಗುತ್ತದೆ ಎಂದು ಹೇಳುತ್ತಿದೆ. ಇದರಿಂದ ನೌಕರರಿಗೆ ಅನೇಕ ಸೌಲಭ್ಯಗಳು ದೊರೆಯುವುದಿಲ್ಲ’ ಎಂದು ತಿಳಿಸಿದರು.

‘ಕಳೆದ ವರ್ಷ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ಅವರು ಭವಿಷ್ಯವರ್ತಿ ಅನುಮೋದನೆ ತೆಗೆದು ಸೇವೆಗೆ ಸೇರಿದ ದಿನಾಂಕವನ್ನು ಪರಿಗಣಿಸುವುದಾಗಿ ಹೇಳಿ ಭರವಸೆ ನೀಡಿದ್ದರು. ಅದು ಈವರೆಗೆ ಅನುಷ್ಠಾನಕ್ಕೆ ಬಂದಿಲ್ಲ’ ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ನಿಗದಿಪಡಿಸಿದ ವೇತನ ಹಾಗೂ ತುಟ್ಟಿಭತ್ಯೆಯನ್ನು ಪ್ರತಿಯೊಬ್ಬ ನೌಕರನಿಗೂ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು. ಸೇವೆಯಲ್ಲಿರುವ ಹೆಚ್ಚು
ವರಿ ಕರ ವಸೂಲಿಗಾರ, ಗುಮಾಸ್ತ, ನೀರುಗಂಟಿಗಳ ಸೇವೆಯನ್ನು ಕಾಯಂಗೊಳಿಸಬೇಕು. ನಿವೃತ್ತಿ ಸೌಲಭ್ಯಗಳನ್ನು ಒದಗಿಸಿ ಕೊಡಲು ಒಂದು ಟ್ರಸ್ಟ್‌ ರಚನೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಕಸ ಗುಡಿಸುವವರ ಹುದ್ದೆಗಳನ್ನು ಸೃಷ್ಟಿಸಿ, ಇದೀಗ ಆ ಕೆಲಸ ಮಾಡುತ್ತಿರುವವರನ್ನು ನೇಮಕ ಮಾಡಿಕೊಳ್ಳಬೇಕು. ಗ್ರೇಡ್‌ ಕಾರ್ಯದರ್ಶಿ –2 ಹುದ್ದೆಗೆ ಶೇ 100 ರಷ್ಟು ಮತ್ತು 3500 ಲೆಕ್ಕ ಸಹಾಯಕ ಹುದ್ದೆಗಳಿಗೆ ಮಂಜೂರಾತಿ ನೀಡಿ, ಕರ ವಸೂಲಿಗಾರರಿಗೆ ಶೇ 50 ರಷ್ಟು ಬಡ್ತಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.