ADVERTISEMENT

ಚಿಕ್ಕರಾಯಪ್ಪನಹಳ್ಳಿ ಕೆರೆಗೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 20:34 IST
Last Updated 19 ಏಪ್ರಿಲ್ 2015, 20:34 IST

ದೊಡ್ಡಬಳ್ಳಾಪುರ:  ಮಳೆಗಾಲದಲ್ಲಿ ನಂದಿಬೆಟ್ಟದ ತಪ್ಪಲಿನಲ್ಲಿ ವ್ಯರ್ಥವಾಗಿ ಹರಿದು  ಹೋಗುವ ಮಳೆ ನೀರು ಸಂಗ್ರಹ ಮಾಡುವುದರಿಂದ ತೂಬಗೆರೆ ಹೋಬಳಿಯ ಮೂರು ಗ್ರಾಮ ಪಂಚಾಯಿತಿಗಳ ಕುಡಿಯುವ ನೀರಿನ ಬವಣೆ ನೀಗಲಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ದೇವನಹಳ್ಳಿ ಕ್ಷೇತ್ರದ ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು.

ಅವರು ತಾಲ್ಲೂಕಿನ ಮೇಳೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕರಾಯಪ್ಪನಹಳ್ಳಿ ಕೆರೆಗೆ ಭೇಟಿ ನೀಡಿ ಚೆಕ್‌ಡ್ಯಾಂ ನಿರ್ಮಿಸುವ ಕುರಿತಂತೆ ಪರಿಶೀಲನೆ ನಡೆಸಿದರು.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿಯೇ ವಿಶ್ವೇಶರಯ್ಯ ಪಿಕಪ್‌ಡ್ಯಾಂ ಅಭಿವೃದ್ಧಿಗೆ ₨ 50 ಲಕ್ಷ ಬಿಡುಗಡೆಯಾಗಿದ್ದು, ಕಾಮಗಾರಿ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಬೆಟ್ಟದ ತಪ್ಪಲಿನಲ್ಲಿರುವ ಚಿಕ್ಕರಾಯಪ್ಪನಹಳ್ಳಿ ಕೆರೆಯನ್ನು ₨1ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವುದರಿಂದ ಇಡೀ ತೂಬಗೆರೆ ಹೋಬಳಿಯ ಜನರ ಕುಡಿಯುವ ನೀರಿನ ಬವಣೆ ನೀಗಲಿದೆ. ಅಲ್ಲದೆ ಈ ಭಾಗದ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರಿಗಾಗಿಯೇ ಕೊಳವೆಬಾವಿಗಳನ್ನು ಕೊರೆಸಲು ಪ್ರತಿ ವರ್ಷ ಖರ್ಚು ಮಾಡುತ್ತಿರುವ ವಾರ್ಷಿಕ ₨40 ರಿಂದ ₨60 ಲಕ್ಷಗಳ ಉಳಿತಾಯವಾಗಲಿದೆ ಎಂದು ತಿಳಿಸಿದರು.

ಪ್ರತಿ ವರ್ಷವು ಕೊಳವೆ ಬಾವಿಗಳು ಬತ್ತಿ ಹೋಗುವುದು, ಅಂತರ್ಜಲ ಕುಸಿಯುತ್ತಿರುವುದು ಮಾಮೂಲಿಯಾಗಿದೆ. ಇದನ್ನು ತಪ್ಪಿಸಲು ಚಿಕ್ಕರಾಯಪ್ಪನಹಳ್ಳಿ ಕೆರೆ ಅಭಿವೃದ್ಧಿ ಪಡಿಸುವುದೊಂದೇ ಶಾಶ್ವತ ಪರಿಹಾರ ದೊರೆಯಲು ಸಾಧ್ಯ ಎಂದರು.

ಬೆಟ್ಟದ ತಪ್ಪಲಿನಲ್ಲಿ ಅಕ್ರಮವಾಗಿ ರಾತ್ರೋ ರಾತ್ರಿ  ಮರಳು ಫಿಲ್ಟರ್‌, ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ದ  ಕ್ರಮ ಕೈಗೊಳ್ಳಲು ಕಂದಾಯ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಬಮುಲ್‌ ನಿರ್ದೇಶಕ ಎಚ್‌. ಅಪ್ಪಯ್ಯಣ್ಣ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಮ್ಮ ಸುಬ್ಬಣ್ಣ, ಉಪಾಧ್ಯಕ್ಷೆ ಪಾರ್ವತಮ್ಮ, ಗ್ರಾ.ಪಂ.ಸದಸ್ಯ ಆರ್‌. ಚಿದಾನಂದ್‌, ಗಂಟಿಗಾನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಎಸ್.ಎಲ್.  ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.