ADVERTISEMENT

ಚಿಕ್ಕ ಕಲ್ಲಸಂದ್ರ ಕೆರೆ: ಮತ್ತೆ ಒತ್ತುವರಿ ಯತ್ನ

ತಿಂಗಳ ಹಿಂದೆಯಷ್ಟೇ ತೆರವು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2014, 20:14 IST
Last Updated 17 ಡಿಸೆಂಬರ್ 2014, 20:14 IST
ಒಂದೂವರೆ ತಿಂಗಳ ಹಿಂದೆಯಷ್ಟೇ ಬಿಬಿಎಂಪಿ ವಶಕ್ಕೆ ಪಡೆಯಲಾದ ಚಿಕ್ಕ ಕಲ್ಲಸಂದ್ರ ಕೆರೆ ಪಾತ್ರದ ಅತಿಕ್ರಮಿತ ಪ್ರದೇಶ. ಈಗ ಈ ಪ್ರದೇಶವನ್ನು ಮತ್ತೆ ಕಬಳಿಸುವ ಯತ್ನ ನಡೆದಿದೆ
ಒಂದೂವರೆ ತಿಂಗಳ ಹಿಂದೆಯಷ್ಟೇ ಬಿಬಿಎಂಪಿ ವಶಕ್ಕೆ ಪಡೆಯಲಾದ ಚಿಕ್ಕ ಕಲ್ಲಸಂದ್ರ ಕೆರೆ ಪಾತ್ರದ ಅತಿಕ್ರಮಿತ ಪ್ರದೇಶ. ಈಗ ಈ ಪ್ರದೇಶವನ್ನು ಮತ್ತೆ ಕಬಳಿಸುವ ಯತ್ನ ನಡೆದಿದೆ   

ಬೆಂಗಳೂರು: ಪದ್ಮನಾಭನಗರದ ಚಿಕ್ಕ ಕಲ್ಲಸಂದ್ರ ಕೆರೆ ಪಾತ್ರದ ಒತ್ತುವರಿಯನ್ನು ತೆರವುಗೊಳಿಸಿ ಈಗಷ್ಟೇ ಒಂದೂವರೆ ತಿಂಗಳಾಗಿದೆ. ಅಷ್ಟರಲ್ಲಾಗಲೇ ಮತ್ತೆ ಕೆರೆ ಪ್ರದೇಶವನ್ನು ಒತ್ತುವರಿ ಮಾಡುವ ಪ್ರಯತ್ನ ಶುರುವಾಗಿದೆ. ಒತ್ತುವರಿ ತೆರವುಗೊಳಿಸಿದ್ದ ಪ್ರದೇಶದ ಸುತ್ತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಕಿದ್ದ ಮುಳ್ಳು­ತಂತಿ ಬೇಲಿಯನ್ನು ಕೆಲವರು ಎರಡು ದಿನಗಳ ಹಿಂದೆ ತೆಗೆದು ಹಾಕಿದ್ದಾರೆ.

ಇದರ ಜೊತೆಯಲ್ಲೇ ಜಾಗದ ಮಾಲೀಕತ್ವ ತಮಗೆ ನ್ಯಾಯಾಲಯದಿಂದ ದೊರಕಿದೆ ಎನ್ನುವ ಫಲಕ ಸಹ ತಲೆ­ಯೆತ್ತಿದೆ. ಇಲ್ಲಿ ದೇವಾ­ಲಯ ನಿರ್ಮಿಸಲು ಯತ್ನ ನಡೆದಿದೆ ಎನ್ನುವ ಮಾಹಿತಿ ‘ಪ್ರಜಾವಾಣಿ’ಗೆ ದೊರಕಿದೆ.

ಸರ್ವೆ ನಂ. 76ರಲ್ಲಿದ್ದ ಚಿಕ್ಕ ಕಲ್ಲಸಂದ್ರದ ಕೆರೆ 12 ಎಕರೆ, 26 ಗುಂಟೆ ವಿಸ್ತಾರ ಹೊಂದಿತ್ತು. ಕೆರೆಯ ಪಾತ್ರವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಲಾ ಗಿತ್ತು. ಒತ್ತುವರಿ ಮಾಡಿಕೊಂಡ ಪ್ರದೇಶ­ದಲ್ಲಿ ನಿರ್ಮಿಸಲಾಗಿದ್ದ ಹಲವು ಕಟ್ಟಡ­ಗಳನ್ನು ಒಂದೂವರೆ ತಿಂಗಳ ಹಿಂದೆ ಬಿಬಿ­ಎಂಪಿಯಿಂದ ನೆಲಸಮ ಮಾಡಲಾಗಿತ್ತು. ಅಲ್ಲದೆ, ಆರು ಎಕರೆ, 20 ಗುಂಟೆ ಪ್ರದೇಶವನ್ನು ಸ್ವಾಧೀನಕ್ಕೆ ಪಡೆದಿತ್ತು.

ಸ್ವಾಧೀನಕ್ಕೆ ಪಡೆಯಲಾದ ಪ್ರದೇಶದಲ್ಲಿನ ನಾಲ್ಕು ಎಕರೆಯಷ್ಟು ಭಾಗದಲ್ಲಿ ಒತ್ತುವರಿ ಯತ್ನ ನಡೆದಿದೆ. ಒತ್ತುವರಿ ಪ್ರಯತ್ನಗಳು ನಡೆದ ಸಂಬಂಧ ಬಿಬಿಎಂಪಿ ಸುಬ್ರಹ್ಮಣ್ಯಪುರ ಠಾಣೆಗೆ ಬುಧವಾರ ದೂರು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾ­ಧಿಕಾರಿ ಎಲ್‌.ಸಿ. ನಾಗರಾಜ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಅಂತಹ ಯತ್ನ ನಡೆದ ಯಾವುದೇ ಮಾಹಿತಿ ನಮಗೆ ಲಭ್ಯವಾಗಿಲ್ಲ. ಹಾಗೊಂದು ವೇಳೆ ಒತ್ತುವರಿ ಮಾಡಿದರೆ ಮತ್ತೆ ಹೊರಹಾಕುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.